ಪೆಟ್ರೋಲ್‌ ಬೆಲೆ ಏರಿಕೆ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

| Published : Jun 21 2024, 01:00 AM IST

ಪೆಟ್ರೋಲ್‌ ಬೆಲೆ ಏರಿಕೆ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಖಂಡಿಸಿ ರಾಜ್ಯದ್ಯಂತ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಖಂಡಿಸಿ ಬಿಜೆಪಿ ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಗುರುವಾರ ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಟಯರ್‌ಗೆ ಬೆಂಕಿ ಹಚ್ಚಿ, ಟ್ರ್ಯಾಕ್ಟರ್‌ಗೆ ಹಗ್ಗಕಟ್ಟಿ ಎಳೆದು, ಬೈಕ್‌ನ ಅಣಕು ಶ‍ವಯಾತ್ರೆ, ಪೆಟ್ರೋಲ್‌ ಟ್ಯಾಂಕರ್‌ ಮೇಲೆ ಹತ್ತಿ ಹೀಗೆ ವಿನೂತನವಾಗಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದರು.ಬೆಂಗಳೂರು ಸೇರಿ ರಾಜ್ಯದ ಬಹುತೇಕ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರರು, ದಾವಣಗೆರೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬೆಳಗಾವಿಯಲ್ಲಿ ಜಗದೀಶ್‌ ಶೆಟ್ಟರ್‌, ಕಲಬುರಗಿಯಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಔರಾದ್‌ನಲ್ಲಿ ಶಾಸಕ ಪ್ರಭು ಚವ್ಹಾಣ್‌ ಸೇರಿ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ ಮುಖಂಡರು ಹಾಗೂ ಕಾರ್ಯಕರ್ತರು ಗ್ಯಾರಂಟಿಗಳಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯದಲ್ಲಿರೋದು ಜನವಿರೋಧಿ, ಅಭಿವೃದ್ಧಿ ವಿರೋಧಿ ಸರ್ಕಾರ. ಪೆಟ್ರೋಲ್‌, ಡೀಸೆಲ್‌ ದರ ಏರಿಸುವ ಮೂಲಕ ಜನರಿಗೆ ಬರೆ ಎಳೆಯುವ ಕೆಲಸ ಆಗಿದೆ ಎಂದು ಆರೋಪಿಸಿದರುಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಿಂದ ವಿಧಾನಸೌಧದ ವರೆಗೆ ಸೈಕಲ್‌ ಜಾಥಾ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ಮಾರ್ಗ ಮಧ್ಯೆ ಬಂಧಿಸಿ ನಂತ ಬಿಡುಗಡೆ ಮಾಡಿದರು. ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಎಂಎಲ್ಸಿ ಸಿ.ಟಿ.ರವಿ ಇತರರು ಇದ್ದರು.ಪೆಟ್ರೋಲ್‌ ಟ್ಯಾಂಕ್ ಏರಿದರು:

ಇನ್ನು ಶಿವಮೊಗ್ಗದಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ, ಮೈಸೂರಲ್ಲಿ ಮಾನವ ಸರಪಳಿ ರಚಿಸಿ, ಮಂಗಳೂರಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆದು ಹಾಗೂ ತೈಲ ಸಾಗಣೆ ಟ್ಯಾಂಕರ್‌ ಮೇಲೆ ಹತ್ತಿ ಬಾವುಟ ಬೀಸಿ ಪ್ರತಿಭಟನೆ ನಡೆಸಲಾಯಿತು. ಅದೇ ರೀತಿ ಕಲಬುರಗಿಯಲ್ಲಿ ಎತ್ತಿನ ಬಂಡಿ ಹತ್ತಿ ಮೆರವಣಿಗೆ ನಡೆಸಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಪೆಟ್ರೋಲ್‌, ಡೀಸೆಲ್‌ ದರ ಇಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದು, ಈ ವೇಳೆ ಅವರೂ ಸೇರಿ ಹಲವು ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.ಉತ್ತರ ಕನ್ನಡದಲ್ಲಿ ತೀವ್ರ ಹೋರಾಟ:

ಉತ್ತರ ಕನ್ನಡದಲ್ಲಿ ಜಿಲ್ಲಾದ್ಯಂತ ತೀವ್ರ ಹೋರಾಟ ನಡೆಯಿತು. ಶಿರಸಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಟೈರ್ ಗೆ ಬೆಂಕಿ ಹಚ್ಚಿ, ಯಲ್ಲಾಪುರದಲ್ಲಿ ರಸ್ತೆಯಲ್ಲಿ ಮಾನವ ಸರಪಳಿ, ಮುಂಡಗೋಡದಲ್ಲಿ ಚಕ್ಕಡಿಗಾಡಿ ಮೇಲೆ ಬೈಕ್ ಇಟ್ಟು ಅಣಕು ಪ್ರದರ್ಶನ ನಡೆಸಿ, ಹಳಿಯಾಳದಲ್ಲಿ ರಾಜ್ಯ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಲಾಯಿತು. ಕಾರವಾರ, ಜೋಯಿಡಾ, ಭಟ್ಕಳದಲ್ಲೂ ಪ್ರತಿಭಟನೆ ನಡೆಯಿತು. ದಾವಣಗೆರೆಯಲ್ಲಿ ಬಸವರಾಜ ಬೊಮ್ಮಾಯಿ ಟ್ರ್ಯಾಕ್ಟರ್‌ಗೆ ಹಗ್ಗಕಟ್ಟಿ ಎಳೆದು ಗಮನಸೆಳೆದರೆ, ಚಿತ್ರದುರ್ಗದಲ್ಲಿ ಕಾರಿಗೆ ಹಗ್ಗಕಟ್ಟಿ ಆಕ್ರೋಶ ಹೊರಹಾಕಲಾಯಿತು.