ತರೀಕೆರೆಭಾದ್ರಪದ ಮಾಸದ ಗಣಪತಿ ಹಬ್ಬ ಇತರೆ ಹಬ್ಬಗಳಿಗಿಂತ ವೈಶಿಷ್ಟ್ಯ ಪೂರ್ಣವಾದುದು. ಮಣ್ಣಿನಿಂದ ಮಾಡಿದ ಗೌರಿ ಮತ್ತು ಗಣಪತಿ ಮೂರ್ತಿಗಳನ್ನು ನೇಮ ನಿಷ್ಠೆಯಿಂದ ತಂದು ಸಂಪ್ರದಾಯ ಬದ್ಧವಾಗಿ ಪೂಜಿಸುವ ಪರಿಪಾಠ ಬಹಳ ಹಿಂದಿನಿಂದ ರೂಢಿಯಲ್ಲಿದೆ.
ಪರಿಸರ ಸ್ನೇಹಿ ಗೌರಿ-ಗಣಪನ ಮೂರ್ತಿಗಳು । ಭಕ್ತರ ಮನಸೂರೆಗೊಳ್ಳುವ ಸುಂದರ ಕಲಾಕೃತಿಗಳು
ಅನಂತ ನಾಡಿಗ್ಕನ್ನಡಪ್ರಭ ವಾರ್ತೆ ತರೀಕೆರೆ
ಭಾದ್ರಪದ ಮಾಸದ ಗಣಪತಿ ಹಬ್ಬ ಇತರೆ ಹಬ್ಬಗಳಿಗಿಂತ ವೈಶಿಷ್ಟ್ಯ ಪೂರ್ಣವಾದುದು. ಮಣ್ಣಿನಿಂದ ಮಾಡಿದ ಗೌರಿ ಮತ್ತು ಗಣಪತಿ ಮೂರ್ತಿಗಳನ್ನು ನೇಮ ನಿಷ್ಠೆಯಿಂದ ತಂದು ಸಂಪ್ರದಾಯ ಬದ್ಧವಾಗಿ ಪೂಜಿಸುವ ಪರಿಪಾಠ ಬಹಳ ಹಿಂದಿನಿಂದ ರೂಢಿಯಲ್ಲಿದೆ.ತರೀಕೆರೆಯಲ್ಲಿ ಈ ಆಚರಣೆಗೆ ಒಂದು ವಿಶೇಷವಿದೆ ಕಾರಣ ಇಲ್ಲಿನ ಕಲಾವಿದರು ರುಪಿಸುವ ಮೂರ್ತಿಗಳು ಮೊದಲಿ ನಿಂದಲೂ ರಾಜ್ಯದಾದ್ಯಂತ ಆಪಾರ ಬೇಡಿಕೆ ಪಡೆದಿದೆ. ಕಲಾವಿದರ ಕೈಚಳಕದಲ್ಲಿ ಅರಳುವ ಗಣೇಶ ಗೌರಿ ಕಲಾಕೃತಿಗಳು ನೋಡುಗರ ಗಮನ ಸೆಳೆಯುವ ಜತೆಗೆ ಹಿದಿನಿಂದಲೂ ಇರುವ ನಂಬಿಕೆಯಂತೆ ಈ ಗೌರಿ ಗಣಪರಿಗೆ ಸಾಕಷ್ಟು ಜನರು ಮೊದಲೇ ಬುಕ್ ಮಾಡಿಕೊಂಡು ಹಬ್ಬಕ್ಕೆ ಖರೀದಿಸುತ್ತಾರೆ.
ಪ್ರತಿವರ್ಷ ಮೇ, ಜೂನ್ ಜುಲೈ ತಿಂಗಳಿನಿಂದಲೇ ಗಣಪತಿ ಮೂರ್ತಿಗಳ ಸಿದ್ಧತೆ ಪ್ರಾರಂಭಿಸುವ ಕಲಾವಿದರು ಮೂರ್ತಿ ತಯಾರಿಕೆಗೆ ಹೆಚ್ಚು ಸೂಕ್ತವಚಾದ ಎರೆ ಮಣ್ಣನ್ನು ಬೇರೆ ಬೇರೆ ಕೆರೆಗಳಿಂದ ಸಂಗ್ರಹಿಸಿ ತಂದು, ತಿಂಗಳುಗಟ್ಟಲೆ ಪ್ರತಿನಿತ್ಯ ಹದಗೊಳಿಸಿ ಶಾಸ್ತ್ರೋಕ್ತವಾಗಿ ಮಣ್ಣನ್ನು ಸಂಸ್ಕಾರಗೊಳಿಸಿ ಅದಕ್ಕೆ ರೂಪುನೀಡುವ ಕಲೆ ಅವರಿಗೆ ಕರಗತ.ಹದಗೊಂಡ ಮಣ್ಣನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಸುಂದರ ಗಣಪತಿ ಮೂರ್ತಿಗಳನ್ನು ಸಿದ್ಧಗೊಳಿಸುವ ಕಾಯಕವನ್ನು ಕಲಾವಿದರು ತಪಸ್ಸಿನಂತೆ ಮಾಡುತ್ತಾರೆ. ಎರಡು ಮೂರು ತಿಂಗಳ ಮುಂಚೆಯೇ ಭಕ್ತ ಜನರು ಹಾಗೂ ಸಂಘ ಸಂಸ್ಥೆಗಳು ತಮಗೆ ಇಂತಿಂತಹ ಮತ್ತು ಇಂತಿಷ್ಟು ಎತ್ತರದ ಮಣ್ಣಿನ ಗಣಪತಿ ಮೂರ್ತಿಗಳು ಅಗತ್ಯವಿದೆ ಎಂದು ತಿಳಿಸಿರುತ್ತಾರೆ. ಅದರಂತೆ ಬೇಡಿಕೆಗೆ ಅನುಗುಣವಾಗಿ ಸುಂದರವಾದ ಗಣಪತಿಗಳನ್ನು ತಯಾರಿಸುತ್ತಾರೆ.
ತರೀಕೆರೆ ಅಜ್ಜಂಪುರ, ಲಿಂಗದಹಳ್ಳಿ, ಲಕ್ಕವಳ್ಳಿ, ರಂಗೇನಹಳ್ಳಿ, ಸುತ್ತಮುತ್ತಲ ಅನೇಕ ಗ್ರಾಮೀಣ ಪ್ರದೇಶ ಹಾಗೂ ಶಿವಮೊಗ್ಗ, ಭದ್ರಾವತಿ, ಮೈಸೂರು, ಬೆಂಗಳೂರಿನಿಂದಲೂ ತರೀಕೆರೆಗೆ ಬಂದು ಮಣ್ಣಿನ ಗೌರಮ್ಮ ಮತ್ತು ಗಣಪತಿ ಮೂರ್ತಿಗಳನ್ನು ಇಂದಿಗೂ ಹಲವರು ಖರೀದಿಸುತ್ತಾರೆ. ಒಂದು ಅಡಿ ಗಣಪತಿಯಿಂದ ಹಿಡಿದು ಎಂಟು ಹತ್ತು ಅಡಿಯ ಸುಂದರ ಪರಿಸರ ಸ್ನೇಹಿ ಮಣ್ಣಿನಲ್ಲಿ ಸಿದ್ಧವಾದ ವಿನಾಯಕನ ಮೂರ್ತಿಗಳು ಭಕ್ತರ ಮನೆಯಲ್ಲಿ ಪೂಜೆ ಕೈಗೋಮಡು ಹಬ್ಬ ಸಂಪನ್ನಗೊಳ್ಳುತ್ತದೆ.ವಿವಿಧ ರೂಪದಲ್ಲಿ ಗಜಾನನ:
ಏಕದಂತ ಗಣಪತಿ, ವಲ್ಲೀಸರ ಗಣಪತಿ, ಗೋಲ್ಡನ್ ಗಣಪತಿ, ಈಶ್ವರ ಸಹಿತ ಗಣಪತಿ, ಕರಿಕೋಟು ಗಣಪತಿ, ಹಂಸ ಗಣಪತಿ, ನವಿಲಿನ ಗಣಪತಿ, ನಾಟ್ಯ ಗಣಪತಿ ಅಷ್ಟ ಕೈಗಳ ಗಣಪತಿ, ಸಾಂಪ್ರದಾಯಿಕ ಗಣಪತಿ, ಮಣ್ಣಿನ ಗಣಪತಿ, ನಂದೀಶ್ವರ ಗಣಪತಿ ಇತ್ಯಾದಿ ವಿವಿಧ ರೂಪದ ಮಣ್ಣಿನ ಗಣಪತಿಗಳನ್ನು ಸಾಂಪ್ರದಾಯಿಕ ಕಲಾವಿದರಾದ ಮಹದೇವಪ್ಪ ಈಶ್ವರಪ್ಪ, ಪುಟ್ಟಪ್ಪ, ವಿನಾಯಕ, ಗಂಗಾಧರ್, ರಮೇಶ್ ಸೇರಿದಂತೆ ಆನೇಕ ಕಲಾವಿದರು ತಿಂಗಳುಗಟ್ಟಲೆ ಶ್ರಮಪಟ್ಟು ಭಕ್ತರು ಒಪ್ಪುವಂತೆ ಸುಂದರವಾಗಿ ಅಣಿಗೊಳಿಸುತ್ತಾರೆ.ಮಂಗಳವಾದ್ಯ ಸಮೇತ ವಿನಾಯಕನಿಗೆ ಸ್ವಾಗತ:
ಭಾದ್ರಪದ ಮಾಸದ ಚೌತಿ ದಿನ ಅಥವಾ ಅದರ ಹಿಂದಿನ ದಿನವೇ ಭಕ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳವರು ಮೂರ್ತಿ ತಯಾರಕರ ಮನೆಗೆ ಬಂದು ಗೌರಿ ಗಣೇಶನ ಮೂರ್ತಿಗಳನ್ನು ಖರೀದಿಸಿ ಮಂಗಳವಾದ್ಯಗಳ ಸಮೇತ ಮೆರವಣಿಗೆ ಮೂಲಕ ಸಡಗರದಿಂದ ತಂದು ಮತ್ತೆ ಮನೆಯ ಮುಂದೆ ಏಕದಂತನಿಗೆ ದೃಷ್ಠಿ ತೆಗೆದು ಆರತಿ ಬೆಳೆಗಿ ಬರಮಾಡಿಕೊಂಡು ಹಬ್ಬಕ್ಕೆ ಮುನ್ನುಡಿ ಬರೆಯುತ್ತಾರೆ.ಅವರವರ ಆಚಾರ, ರೂಢಿಯಂತೆ ಅಲಂಕರಿಸಿದ ಮಂಟಪಗಳಲ್ಲಿ, ದೇವರ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಮನೆಗಳನ್ನು ಬಣ್ಣದ ರಂಗೋಲಿ, ತಳಿರು ತೋರಣ ಕಟ್ಟಿ ವಿದ್ಯುತ್ ದೀಪಗಳ ಅಲಂಕಾರ ಮಾಡಿ ನೇವೇದ್ಯವಿಟ್ಟು ಪೂಜಿಸುವುದು ವಾಡಿಕೆ. ಬೇರೆ ಬೇರೆ ಊರುಗಳಲ್ಲಿ ನೆಲಸಿರುವ ಬಂಧುಬಾಂದವರು, ಹೆಣ್ಣುಮಕ್ಕಳು, ಸ್ನೇಹಿತರು ಹಬ್ಬಕ್ಕೆ ಆಗಮಿಸಿರುವಾಗ ಸರ್ವರೊಡಗೂಡಿ ಶ್ರದ್ಧಾಭಕ್ತಿಯಿಂದ ವೇದ ಮಂತ್ರೋಕ್ತವಾಗಿ ಪೂಜಿಸುವುದನ್ನು ನೋಡುವುದೇ ಒಂದು ಸಂಭ್ರಮ.ಫೋಟೋ ಇದೆಃ
11ಕೆಟಿಆರ್.ಕೆ.4 ಃತರೀಕೆರೆ ಕಲಾವಿದರು ಸಿದ್ದಗೊಳಿಸಿರುವ ಪರಿಸರ ಸ್ನೇಹಿ ಮಣ್ಣಿನ ಗೌರಮ್ಮ ಗಣಪತಿ ಮೂರ್ತಿಗಳು11ಕೆಟಿಆರ್.ಕೆ.5ಃ ತರೀಕೆರೆ ಕಲಾವಿದರು ಸಿದ್ದಗೊಳಿಸಿರುವ ಅಷ್ಟ ಕೈಗಳ ಮಣ್ಣಿನ ಗಣಪತಿ ಮೂರ್ತಿ.------------