ಫೆ.16ಕ್ಕೆ ಕೇಂದ್ರ ಬಜೆಟ್‌ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ

| Published : Feb 13 2024, 12:45 AM IST

ಫೆ.16ಕ್ಕೆ ಕೇಂದ್ರ ಬಜೆಟ್‌ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜನ ವಿರೋಧಿ, ರೈತ-ಕಾರ್ಮಿಕ ವಿರೋಧಿ ಕೇಂದ್ರ ಬಜೆಟ್ ವಿರೋಧಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು‌.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೇಂದ್ರ ಹಾಗೂ ರಾಜ್ಯ ರೈತ- ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಫೆ.16ರಂದು ಬೆಳಗ್ಗೆ 11ಕ್ಕೆ ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು‌.

ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜನ ವಿರೋಧಿ, ರೈತ-ಕಾರ್ಮಿಕ ವಿರೋಧಿ ಕೇಂದ್ರ ಬಜೆಟ್ ವಿರೋಧಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ, ರಾಷ್ಟ್ರೀಯ ಬ್ಯಾಂಕ್‌ಗಳ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು, ದೆಹಲಿ ರೈತ ಹೋರಾಟ ದ ಲಿಖಿತ ಭರವಸೆಗಳ ಈಡೇರಿಕೆಗೆ ಒತ್ತಾಯಿಸಿ, ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ತಕ್ಷಣವೇ ಪರಿಹಾರ ಕೊಡುವುದು, ರಾಜ್ಯ ಸರ್ಕಾರ 3ಕೃಷಿ ಕಾಯ್ದೆಗಳನ್ನ ಹಿಂಪಡೆಯವುದು, ಬರಗಾಲಕ್ಕೆ ಎಕರೆಗೆ 20 ಸಾವಿರ ಪರಿಹಾರ ಕೊಡುವುದು, ಸಹಕಾರಿ ಸಂಸ್ಥೆಗಳ ಸಂಪೂರ್ಣ ಸಾಲಮನ್ನಾ, ಕಾರ್ಮಿಕ ವಿರೋಧಿ ನೀತಿ ಗಳನ್ನು ಕೈಬಿಡುವಂತೆ ಒತ್ತಾಯಿಸಿ ಅಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು. ಕಳೆದ ನವೆಂಬರ್ ನಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಾರ್ಮಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆಸಿದ ಮಹಾಧರಣಿ ಸಂದರ್ಭದಲ್ಲಿ ರೈತರ, ಕಾರ್ಮಿಕ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಚರ್ಚಿಸಲು ಆಹ್ವಾನ ನೀಡಿದ್ದರು. ಈ ಸಭೆಯಲ್ಲಿ ಭೂಸುಧಾರಣಾ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆ ಹಿಂಪಡೆಯುವುದು, ರೈತರ ಐ.ಪಿ ಸೆಟ್ ಗಳಿಗೆ ರೈತರೇ ಸ್ವಯಂ ಆರ್ಥಿಕ ವೆಚ್ಚದಲ್ಲಿ ಸಂಪರ್ಕ ಪಡೆಯುವ ಯೋಜನೆ ರದ್ದುಪಡಿಸುವುದು, ದಿನಕ್ಕೆ 7 ಗಂಟೆ ಸಮರ್ಪಕ ವಿದ್ಯುತ್ ಕೊಡುವುದು, ಮನೆ ಮೀಟರ್ ವಾಪಾಸ್ಸು ಕೊಟ್ಟ ಸಂದರ್ಭದ ವಿದ್ಯುತ್, ಬಾಕಿ ಹಣ ಮನ್ನಾ ಮಾಡುವುದು, ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ವಿದ್ಯುಚ್ಛಕ್ತಿ ಸಂಪರ್ಕ ಪಡೆದ ಐ.ಪಿ ಸೆಟ್‌ ನವರಿಗೆ ಕಂಬ, ತಂತಿ, ಟ್ರಾನ್ಸ್‌ಫಾರ್ಮ‌ರ್ ಮೂಲ ಸೌಕರ್ಯಗಳನ್ನು ಒದಗಿಸಲು 4 ಸಾವಿರ ಕೋಟಿ ರು.ಗಳನ್ನು ಟೆಂಡ‌ರ್ ಕರೆದು ಶೀಘ್ರವೇ ಕೆಲಸ ಮಾಡಿಸುವು ದಾಗಿ ತಿಳಿಸಿದರು. ಆದರೆ, ಇವುಗಳಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಬಡ್ಡಿ ಮನ್ನಾ ಹೊರತುಪಡಿಸಿ ಉಳಿದ ಯಾವ ಭರವಸೆಗಳು ಈಡೇರಿಸಿಲ್ಲ. ಇವುಗಳನ್ನು ತಕ್ಷಣವೇ ಜಾರಿ ಮಾಡಬೇಕು. ವಿದ್ಯುತ್ ಚ್ಛಕ್ತಿ ಖಾಸಗೀಕರಣ ಮಾಡುವುದಿಲ್ಲವೆಂದು ವಿಧಾನಸಭೆಯಲ್ಲಿ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪಿ.ಡಿ.ಮಂಜಪ್ಪ, ಕೆ.ರಾಘವೇಂದ್ರ, ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಸಿ.ಚಂದ್ರಪ್ಪ, ಕಸಟ್ಟಿ ರುದ್ರೇಶ್, ಎಂ.ಡಿ.ನಾಗರಾಜ, ಎಚ್.ಇ.ಗುರುಶಾಂತಪ್ಪ ಮತ್ತಿರರರು ಇದ್ದರು.‌