ಸಾರಾಂಶ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅ.4 ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತಿಯ ಸೇವೆಗಳಾದ ಬಾಪೂಜಿ ಸೇವೆ ಹಾಗೂ ಕಚೇರಿಯ ಎಲ್ಲಾ ಕರ್ತವ್ಯ (ಕುಡಿಯುವ ನೀರು, ಬೀದಿ ದೀಪ ಹಾಗೂ ಸ್ವಚ್ಛತೆ ಹೊರತುಪಡಿಸಿ) ನಿರ್ವಹಿಸುವುದನ್ನು ನಿಲ್ಲಿಸಿ ಅನಿರ್ದಿಷ್ಟಾವಧಿ ಹೋರಾಟವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೈಗೊಳ್ಳಲಾಗುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳು ಮತ್ತು ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅ.4 ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಸೇವೆಗಳನ್ನು ನಿಲ್ಲಿಸಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮ ಪಂಚಾಯ್ತಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಎ. ಪ್ರಶಾಂತ್ ತಿಳಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಸಿಇಒ ಶೇಖ್ ತನ್ವೀರ್ ಆಸಿಫ್ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಮತ್ತು ಗ್ರಾಪಂ ಸದಸ್ಯರ ಒಕ್ಕೂಟದ ವತಿಯಿಂದ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾಮ ಪಂಚಾಯತಿ ಎಲ್ಲಾ ನೌಕರರು, ಪಿಡಿಒ, ಕರವಸೂಲಿಗಾರರು, ಜಲಗಾರರು, ಕಚೇರಿ ಸಹಾಯಕರು, ಸ್ವಚ್ಛತಾಗಾರರು ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಸರ್ಕಾರ ಮತ್ತು ಇಲಾಖೆಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಿಲ್ಲ ಎಂದು ದೂರಿದರು.ರಾಜ್ಯದಲ್ಲಿ ಶೇ.70ರಷ್ಟು ಜನ ಸಮೂಹಕ್ಕೆ ಸೇವೆ ಒದಗಿಸುತ್ತಿದ್ದೇವೆ. ಎಲ್ಲಾ ಸಮಸ್ಯೆಗಳಿಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ನೌಕರರು ಹಾಗೂ ಸಿಬ್ಬಂದಿಯನ್ನು ನೇರ ಹೊಣೆಗಾರರನ್ನಾಗಿ ಮಾಡುತ್ತಿರುವ ಸರ್ಕಾರ ಮತ್ತು ಇಲಾಖೆ ಧೋರಣೆಯನ್ನು ಖಂಡಿಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅ.4 ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತಿಯ ಸೇವೆಗಳಾದ ಬಾಪೂಜಿ ಸೇವೆ ಹಾಗೂ ಕಚೇರಿಯ ಎಲ್ಲಾ ಕರ್ತವ್ಯ (ಕುಡಿಯುವ ನೀರು, ಬೀದಿ ದೀಪ ಹಾಗೂ ಸ್ವಚ್ಛತೆ ಹೊರತುಪಡಿಸಿ) ನಿರ್ವಹಿಸುವುದನ್ನು ನಿಲ್ಲಿಸಿ ಅನಿರ್ದಿಷ್ಟಾವಧಿ ಹೋರಾಟವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಗ್ರಾಪಂ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್.ಪಿ.ಆರ್, ಮಂಜುನಾಥ್, ಪಿಡಿಒ ಸಂಘದ ತಾಲೂಕು ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಸುನೀಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ಪವಿತ್ರ, ಅನಿತಾ, ರಾಜೇಶ್ವರಿ, ಕೋಮಲಾ, ಇತರರು ಇದ್ದರು.