ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರೈತರು, ಮಠಗಳು ಸೇರಿದಂತೆ ರಾಜ್ಯದಲ್ಲಿ ಸಾವಿರಾರು ಎಕರೆ ಆಸ್ತಿಗಳ ಪಹಣಿಯಲ್ಲಿ ವಕ್ಫ್ ಹೆಸರು ಸೇರ್ಪಡೆ ಮಾಡಿರುವುದನ್ನು ಖಂಡಿಸಿ ಸೋಮವಾರ ಬೆಂಗಳೂರು ಸೇರಿ ರಾಜ್ಯಾದ್ಯಂತ ಬಿಜೆಪಿ ಮುಖಂಡರು, ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲದೆ ತಾಲೂಕು ಕೇಂದ್ರಗಳಲ್ಲೂ ಹೋರಾಟ ನಡೆಸಿದ ಬಿಜೆಪಿ ಕಾರ್ಯಕರ್ತರು ವಕ್ಫ್ ಗದ್ದಲ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಫ್ ಸಚಿವ ಜಮೀರ್ ಅಹಮದ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಕ್ಫ್ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದೂಗಳ, ರೈತರ ಆಸ್ತಿ ಕಬಳಿಕೆ ಮಾಡಲು ಹೊರಟಿದೆ. ಈ ಕುರಿತು ಸಿಬಿಐ ತನಿಖೆ ಆಗಬೇಕು. ವಕ್ಫ್ ಅಧಿಸೂಚನೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಮಂಗಳೂರು, ಕೊಪ್ಪಳ, ಗದಗ ಸೇರಿ ರಾಜ್ಯದ ಬಹುತೇಕ ಕಡೆ ಪಾದಯಾತ್ರೆ ನಡೆದರೆ ಹಾಸನ, ಚಿಕ್ಕಮಗಳೂರು ಮತ್ತಿತರ ಕಡೆ ಮಾನವ ಸರಪಳಿ ನಡೆಸಿ ಗಮನ ಸೆಳೆಯಲಾಯಿತು. ವಿಜಯಪುರದಲ್ಲಿ ಶಾಸಕ ಬಸನಗೌಡ ಯತ್ನಾಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭಿಸಲಾಯಿತು.ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೋಲಾರದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಳ್ಳಾರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತಿತರರ ಉಪಸ್ಥಿತಿಯಲ್ಲಿ ಪ್ರತಿಭಟನೆ ನಡೆದರೆ, ಉಳಿದೆಡೆ ಬಿಜೆಪಿ ಸಂಸದರು, ಶಾಸಕರು, ಮಾಜಿ ಶಾಸಕರು ಹೋರಾಟದ ನೇತೃತ್ವ ವಹಿಸಿದ್ದರು.
ಲ್ಯಾಂಡ್ ಜಿಹಾದ್: ಲವ್ ಜಿಹಾದ್ ಆಯ್ತು, ಇದೀಗ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ಆರಂಭವಾಗಿದೆ. ಮಠ-ಮಾನ್ಯಗಳು, ದೇವಸ್ಥಾನಗಳು, ದಲಿತರ ಜಮೀನುಗಳನ್ನು ಲಪಟಾಯಿಸುವ ಹುನ್ನಾರ ಕಾಂಗ್ರೆಸ್ ಸರ್ಕಾರದಿಂದ ನಡೆದಿದೆ. ರಾತ್ರೋ ರಾತ್ರಿ ಅಧಿಕಾರಿಗಳ ಮೇಲೆ ಒತ್ತಡ ತಂದು ಜಮೀನುಗಳ ದಾಖಲೆಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸುವ ಮೂಲಕ ಒಂದು ಸಮುದಾಯದ ಓಲೈಕೆಗೆ ಸರ್ಕಾರ ಮುಂದಾಗಿದೆ. ಇದು ಹೀಗೇ ಮುಂದುವರೆದರೆ ಕನ್ನಡ ರಾಜ್ಯ ಮುಂದಿನ ದಿನಗಳಲ್ಲಿ ಮಿನಿ ಪಾಕಿಸ್ತಾನ ಆಗಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ವಕ್ಫ್ ಬೋರ್ಡ್ ಮೂಲಕ ರಾಜ್ಯದಲ್ಲಿ 15 ಸಾವಿರ ಎಕರೆಯಷ್ಟು ರೈತರ ಜಮೀನು ಕೊಳ್ಳೆ ಹೊಡೆಯಲು ಷಡ್ಯಂತ್ರ ನಡೆದಿದೆ. ಸಚಿವ ಜಮೀರ್ ಅಹಮದ್ ಮೂಲಕವೇ ಈ ಕಾರ್ಯ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮತಿಯಿಂದಲೇ ಇದೆಲ್ಲ ಆಗುತ್ತಿದೆ. ಬಿಜೆಪಿಯು ರೈತರ ಪರವಾಗಿದ್ದು, ಯಾವುದೇ ಕಾರಣಕ್ಕೂ ಒಂದಿಂಚೂ ಜಮೀನನ್ನೂ ವಕ್ಫ್‌ಗೆ ಹೋಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ವಕ್ಫ್ ಗದ್ದಲಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಹಾಗೂ ಜಮೀರ್ ಅಹಮದ್ ಅವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು, ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.