ಸಾರಾಂಶ
ಜನತಾ ಜನಾರ್ಧನನ ಬೆಂಬಲ ನೋಡಿಯಾದರೂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯದ ಉದ್ದಗಲಕ್ಕೂ ಹೋರಾಟ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದರು. ಚನ್ನಪಟ್ಟಣದಲ್ಲಿ 3ನೇ ದಿನದ ಪಾದಯಾತ್ರೆಯಲ್ಲಿ ಹೇಳಿದರು.
-ಹಗರಣಗಳ ಮನವರಿಕೆ -ಮೈಸೂರು ಚಲೋ 3ನೇ ದಿನದ ಪಾದಯಾತ್ರೆ ಚನ್ನಪಟ್ಟಣಕ್ಕೆ ಆಗಮಿಸಿದ ವೇಳೆ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣಕೇಂದ್ರದ ಕಾಂಗ್ರೆಸ್ ನಾಯಕತ್ವಕ್ಕೆ ಕಿಂಚತ್ತಾದರೂ ಜವಾಬ್ದಾರಿ ಇದ್ದರೆ ತಕ್ಷಣವೇ ಮುಖ್ಯಮಂತ್ರಿಗಳಿಂದ ರಾಜೀನಾಮೆ ಪಡೆಯಬೇಕು. ಇಲ್ಲ ಪಾದಯಾತ್ರೆ ಮೈಸೂರಿಗೆ ತಲುಪುವುದರೊಳಗೆ ಜನತಾ ಜನಾರ್ಧನನ ಬೆಂಬಲ ನೋಡಿಯಾದರು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯದ ಉದ್ದಗಲಕ್ಕೂ ಹೋರಾಟ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದರು.ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ - ಜೆಡಿಎಸ್ ಮೈಸೂರು ಚಲೋ 3ನೇ ದಿನದ ಪಾದಯಾತ್ರೆ ಚನ್ನಪಟ್ಟಣದ ತಾಲೂಕು ಕಚೇರಿ ಮುಂಭಾಗ ಆಗಮಿಸಿದ ವೇಳೆ ಮಾತನಾಡಿದ ಅವರು, ಈ ಐತಿಹಾಸಿಕ ಪಾದಯಾತ್ರೆ ಮೂಲಕ ಕಾಂಗ್ರೆಸ್‌ನ ಕೇಂದ್ರ ನಾಯಕರಿಗೆ ಮುಖ್ಯಮಂತ್ರಿಗಳ ಭ್ರಷ್ಟಾಚಾರ ಹಗರಣ ಮನವರಿಕೆ ಮಾಡಿಕೊಡುತ್ತಿದ್ದೇವೆ. ಕೇಂದ್ರ ವರಿಷ್ಠರು ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆದು ಅಧಿಕಾರದಿಂದ ತೊಲಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.ಮೈಸೂರಿನಲ್ಲಿ ಕನಿಷ್ಠ 2 ಲಕ್ಷ ಜನರನ್ನು ಸೇರಿಸಿ ಕೊನೆ ದಿನದ ಕಾರ್ಯಕ್ರಮ ಮಾಡುತ್ತೇವೆ. ಅದಕ್ಕೂ ಮುನ್ನವೇ ನಿಮಗೆ ಸ್ವಾಭಿಮಾನ, ಮಾನ ಮರ್ಯಾದೆ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿ ಎಂದು ಸಿದ್ದರಾಮಯ್ಯ ಅವರಿಗೆ ತಾಕೀತು ಮಾಡಿದರು.ಮಿತಿ ಮೀರಿರುವ ಭ್ರಷ್ಟಾಚಾರದಿಂದಾಗಿ ರಾಜ್ಯದಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣ ಆಗಿದೆ. ಅನೇಕ ಭ್ರಷ್ಟಾಚಾರಗಳಲ್ಲಿ ಸಿಲುಕಿ ನರಳುತ್ತಿರುವ ಸಿದ್ದರಾಮಯ್ಯರವರು ನಿಜಕ್ಕೂ ಪ್ರಾಮಾಣಿಕರಾಗಿದ್ದರೆ ಕೇಂದ್ರದ ನಾಯಕರು ತಕ್ಷಣ ರಾಜೀನಾಮೆ ಪಡೆಯಬೇಕು. ಇಲ್ಲವೇ ಸಿದ್ದರಾಮಯ್ಯ ಅವರೇ ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ ಒಂದು ವರ್ಗಾವಣೆಗೆ 30 - 40 ಲಕ್ಷ ಪಡೆಯುತ್ತಿದ್ದೀರಿ. ಇದನ್ನು ಹಿಂದೆಂದೂ ಕಂಡಿರಲಿಲ್ಲ. ಈಗಾಗಲೇ ಇಬ್ಬರು ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂದರೆ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂಬುದಕ್ಕೆ ಇದಕ್ಕಿಂತ ಬೇರೊಂದು ಉದಾಹರಣೆ ಬೇಕಾಗಿಲ್ಲ. ಕಾಂಗ್ರೆಸ್ ಸರ್ಕಾರ ಹಗಲು ದರೋಡೆಯಲ್ಲಿ ನಿರತವಾಗಿದೆ.ರಾಜ್ಯದ ಇತಿಹಾಸದಲ್ಲಿ ಯಾರೂ ಮುಖ್ಯಮಂತ್ರಿ ಮುಡಾದಲ್ಲಿ 14 ಸೈಟು ಪಡೆದಿರುವುದು ಕಂಡಿಲ್ಲ. ಬಡವರಿಗೆ ನಿವೇಶನ ಇಲ್ಲ, ದುಡಿಯುವ ಕೈಗಳಿಗೆ ಕೆಲಸವಿಲ್ಲ, ನೀರಾವರಿ ಯೋಜನೆಗಳು ಸ್ಥಗಿತ ಆಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿದ್ದರಾಮಯ್ಯ ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ಇದನ್ನು ಕೊನೆಗಾಣಿಸಲು ಬಿಜೆಪಿ - ಜೆಡಿಎಸ್ ಒಂದಾಗಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಕಿಡಿಕಾರಿದರು.ಬಿಜೆಪಿ - ಜೆಡಿಎಸ್ ಸಂಬಂಧ ಶಾಶ್ವತ ಸಂಬಂಧ. ಮುಂಬರುವ ಚುನಾವಣೆಗಳಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮೈತ್ರಿ ಸರ್ಕಾರ ರಚನೆ ಮಾಡುವುದು ನಿಶ್ಚಿತ. ಅದಕ್ಕೆ ಜನರ ಸಂಪೂರ್ಣ ಆಶೀರ್ವಾದ ಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನ ಪತ್ನಿ ಹೆಸರಿನಲ್ಲಿ ನಿವೇಶನ ಪಡೆದಿರುವುದು ಅಕ್ಷಮ್ಯ. ಅವರೇ 60 ಕೋಟಿ ಕೊಟ್ಟರೆ ವಾಪಸ್ ಕೊಡುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರೇ, ಈ ನಿವೇಶನಗಳನ್ನು ಕಾನೂನು ಬಾಹಿರವಾಗಿ ನಿಮ್ಮ ಹೆಂಡತಿ ಹೆಸರಿಗೆ ಮಾಡಿದವರು ಯಾರು.- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಭ್ರಷ್ಟ ಸಿಎಂ ಪರ ನಿಲ್ಲಲು ಕೈ ಹೈಕಮಾಂಡ್ ಶಾಸಕರಿಗೆ ತಾಕೀತುಚನ್ನಪಟ್ಟಣ: ಬಿಜೆಪಿ - ಜೆಡಿಎಸ್ ನ ಮೈಸೂರು ಚಲೋ ಪಾದಯಾತ್ರೆ ಹೋರಾಟದ ಪರಿಣಾಮ ದೆಹಲಿಯ ಕಾಂಗ್ರೆಸ್ ವರಿಷ್ಠರು ಭ್ರಷ್ಟಾಚಾರದಲ್ಲಿ ಮುಳುಗಿರುವ ಮುಖ್ಯಮಂತ್ರಿಗಳ ಪರ ನಿಲ್ಲುವಂತೆ ಶಾಸಕರಿಗೆ ತಾಕೀತು ಮಾಡಿ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು. ಮೈಸೂರು ಚಲೋ 3ನೇ ದಿನದ ಪಾದಯಾತ್ರೆ ಚನ್ನಪಟ್ಟಣಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ನಮ್ಮ ಹೋರಾಟದ ಪರಿಣಾಮ ದೆಹಲಿಯಿಂದ ಕಾಂಗ್ರೆಸ್ ವರಿಷ್ಠರು ಬಂದು, ಮುಖ್ಯಂತ್ರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದರೂ ಸಿಎಂ ಪರ ನಿಲ್ಲಬೇಕೆಂದು ಆಡಳಿತ ಪಕ್ಷದ ಶಾಸಕರಿಗೆ ತಾಕೀತು ಮಾಡಿದ್ದಾರೆ ಎಂದು ಟೀಕಿಸಿದರು.ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದೆ. ಇಂತಹ ಭ್ರಷ್ಟ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಆ ಮೂಲಕ ಶೋಷಿತ ಸಮುದಾಯಕ್ಕೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಿದ್ದೇವೆ ಎಂದರು.ಯಾದಗಿರಿಯಲ್ಲಿ ದಲಿತ ಕುಟುಂಬಕ್ಕೆ ಸೇರಿದ ಪಿಎಸ್ಸೈ ಪರಶುರಾಮ್ ಆಡಳಿತ ಪಕ್ಷದ ಶಾಸಕನಿಗೆ 30 ಲಕ್ಷ ಲಂಚ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆರೆಯಿಂದ ಬಡವರು ಮನೆ ಕಳೆದುಕೊಂಡಿದ್ದಾರೆ. ಹಿಂದೆ ಯಡಿಯೂರಪ್ಪರವರು ಅಧಿಕಾರದಲ್ಲಿದ್ದಾಗ ಬಡವರು ಮನೆ ಕಳೆದುಕೊಂಡಾಗ ತಕ್ಷಣ 5 ಲಕ್ಷ ಪರಿಹಾರ ಕೊಡುತ್ತಿದ್ದರು. ಸಿದ್ದರಾಮಯ್ಯ ಭಿಕ್ಷೆ ರೀತಿಯಲ್ಲಿ 1 ಲಕ್ಷ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಮನೆ ಕಳೆದುಕೊಂಡುವರಿಗೆ ಮನೆ ಕೊಡಲಿಲ್ಲ, ಕೇರಳದ ವೈನಾಡಲ್ಲಿ 100 ಮನೆ ಕೊಡುವ ಘೋಷಣೆ ಮಾಡಿದ್ದಾರೆ. ಅಲ್ಲಿ ಮನೆ ಕೊಡುವುದಕ್ಕೆ ನಮ್ಮ ವಿರೋಧ ಇಲ್ಲ. ಸಿದ್ದರಾಮಯ್ಯ ಅವರಿಗೆ ರಾಜಕೀಯ ಜನ್ಮ ನೀಡಿದ ಮೈಸೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ನಿವೇಶನಕ್ಕೆ ಅರ್ಜಿ ಹಾಕಿದ್ದಾರೆ. ಅವರಿಗೆ ನಿವೇಶನ ಕೊಡಲು ಅವರಿಂದ ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯಿಂದಾಗಿ ಬಡವರು, ಸಾಮಾನ್ಯ ಜನರು ಪರದಾಡುತ್ತಿದ್ದಾರೆ. ಇಂತಹ ದುಷ್ಟ, ಭ್ರಷ್ಟ ಸರ್ಕಾರ ನಾಡಿನ ಜನರ ಪಾಲಿಗೆ ಮರಣ ಶಾಸನ ಬರೆಯುತ್ತಿದೆ. ಎಷ್ಟು ಬೇಗ ತೊಲಗುತ್ತದೆಯೊ ಅಷ್ಟು ಬೇಗ ರಾಜ್ಯದ ಜನರಿಗೆ ಒಳ್ಳೆಯದಾಗಲಿದೆ. ಈ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕೆಂದು ನಾವು ಪಾದಯಾತ್ರೆ ಮಾಡುತ್ತಿದ್ದೇವೆಯೇ ಹೊರತು ನಾವು ಅಧಿಕಾರಕ್ಕೆ ಬರಬೇಕೆಂದು ಅಲ್ಲ ಎಂದು ವಿಜಯೇಂದ್ರ ಹೇಳಿದರು.ಸಿಎಂಗೆ ದೆಹಲಿ ನಾಯಕರ ಸಪೋರ್ಟ್ ಏಕೆ?: ಅಶೋಕ್ಚನ್ನಪಟ್ಟಣ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡಿಲ್ಲ ಎನ್ನುವುದಾದರೆ ದೆಹಲಿ ನಾಯಕರ ಸಪೋರ್ಟ್ ಏಕೆ ಬೇಕು. ಹಣ ಕೊಟ್ಟು ಅವರನ್ನು ಏಕೆ ಕರೆಸಿದ್ದೀರಿ. ಧೈರ್ಯ ಇದ್ದಿದ್ದರೆ ನೀವೇ ಎದುರಿಸಬಹುದಿತ್ತಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದರು.ಸರ್ಕಾರದ ವಿರುದ್ಧ ಬಿಜೆಪಿ - ಜೆಡಿಎಸ್ ಮೈಸೂರು ಚಲೋ 3ನೇ ದಿನದ ಪಾದಯಾತ್ರೆ ಚನ್ನಪಟ್ಟಣದ ತಾಲೂಕು ಕಚೇರಿ ಮುಂದೆ ಮಾತನಾಡಿದ ಅವರು, ಸಿದ್ದರಾಮಯ್ಯ ಈಗ ಲೂಟಿರಾಮಯ್ಯ ಆಗಿದ್ದಾರೆ. ಅವರಿಗೆ ನೈತಿಕತೆ ಇದ್ದಿದ್ದರೆ ದೆಹಲಿ ನಾಯಕರ ಬೆಂಬಲ ಪಡೆಯುತ್ತಿರಲಿಲ್ಲ. ಡಿ.ಕೆ.ಶಿವಕುಮಾರ್ ಅವರನ್ನ ನಾವು ವರ್ಷಗಳಿಂದ ಆಸ್ತಿ ವಿವರ ಕೇಳುತ್ತಲೇ ಇದ್ದೇವೆ, ನೀನು ಕೊಟ್ಟಿಲ್ಲ. ನಾವಿಲ್ಲಿ ಭ್ರಷ್ಟ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕೆಂದು ಬಂದಿದ್ದೇವೆ. ಆದರೆ, ನಮಗಿಂತ ಮೊದಲೇ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅಧಿಕಾರದಿಂದ ಬೇಗ ಇಳಿಯಲೆಂದು ಜನಾಂದೋಲನ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಎಲ್ಲರಿಗು ಮನೆ ಕಟ್ಟಲು 1 ಸೈಟು ಬೇಕು. ಆದರೆ, ಸಿದ್ದರಾಮಯ್ಯನವರಿಗೆ 14 ಸೈಟು ಏಕೆ ಬೇಕು ಅಂತ ಜನರೇ ಕೇಳುತ್ತಿದ್ದಾರೆ. ಅವರಿಗೆ ಧೈರ್ಯ ಇದ್ದಿದ್ದರೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೆ ಪಲಾಯನ ಮಾಡುತ್ತಿರಲಿಲ್ಲ. ಮೂರು ದಿನಗಳಿಂದ ಮುಖ್ಯಮಂತ್ರಿಗಳು ಕಾಣೆಯಾಗಿದ್ದು, ಎಲ್ಲಿದ್ದಾರೊ ಗೊತ್ತಿಲ್ಲ. ಕೇಳಿದರೆ ನೆರೆ ಪೀಡಿತ ಪ್ರದೇಶಕ್ಕೆ ಹೋಗಿದ್ದಾರೆಂದು ಹೇಳುತ್ತಿದ್ದಾರೆ. ಮಳೆ ಬಂದು 1 ತಿಂಗಳಾಗಿದೆ. ಅಮಾಯಕರು ತೀರಿ ಹೋಗಿದ್ದಾರೆ. ಆಗ ಹೋಗಲಿಲ್ಲ. ಇಲ್ಲಿ ಬಂದರೆ ಮಾಧ್ಯಮದವರು ಪ್ರಶ್ನಿಸುತ್ತಾರೆಂಬ ಕಾರಣಕ್ಕೆ ಉತ್ತರ ಕೊಡಲಾಗದೆ ಪಲಾಯನ ಮಾಡಿದ್ದಾರೆ ಎಂದು ಟೀಕಿಸಿದರು.ಸಿದ್ದರಾಮಯ್ಯ ಐದು ಗ್ಯಾರಂಟಿ ಕೊಟ್ಟು ಒಳ್ಳೇದು ಮಾಡುತ್ತೇವೆ ಅಂತ ಹೇಳಿದ್ದರು. 3-4 ತಿಂಗಳು ಮಾತ್ರ ಮಹಿಳೆಯರಿಗೆ 2 ಸಾವಿರ ಕೊಟ್ಟರು. ಈಗ ಅದು ಗ್ಯಾರಂಟಿ ಇಲ್ಲ. ಆ ಹಣವೂ ಬಂದಿಲ್ಲ. ಅದು ಗೋವಿಂದನಾ, ಸಿದ್ದರಾಮಯ್ಯ ಗೋವಿಂದಾ, ಗ್ಯಾರಂಟಿ ಗೋವಿಂದಾ ಆಗಿದೆ ಎಂದು ಲೇವಡಿ ಮಾಡಿದರು.ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ 2 ಸಾವಿರ ಕೊಡುತ್ತೇವೆಂದು ಹೇಳಿದ್ದರಿಂದಲೇ ಆಸೆಯಿಂದ ಮಹಿಳೆಯರು ವೋಟು ಹಾಕಿದರು. ಆದರೀಗ ಎಣ್ಣೆ ಕ್ವಾಟ್ರಗೆ 50 ರು., ಹಾಲಿನ ಬೆಲೆ 3ರು., ಸ್ಟ್ಯಾಂಪ್ ಡ್ಯೂಟಿ ಲಕ್ಷ, ಪೆಟ್ರೋಲ್ ಬೆಲೆ 3 ರು., ಟಿಸಿ ಬೆಲೆ 3 ಲಕ್ಷ , ಟಿಸಿಗೆ ಕಮಿಷನ್ 50 ಸಾವಿರ ಫಿಕ್ಸ್ ಮಾಡಿದ್ದಾರೆ. ಇಲ್ಲಿ ಲೂಟಿ ಮಾಡಿ ದೆಹಲಿಗೆ ಕಳುಹಿಸುತ್ತಿದ್ದಾರೆ.ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಜನರಿಗೆ ಮೋಸ ಮಾಡಿದ್ದೀರಿ. ಜನರು ಗ್ಯಾರಂಟಿ ನ್ಯಾಯವಾಗಿ ಕೊಡಿ ಅಂತ ಉಗಿಯುತ್ತಿದ್ದಾರೆ. ಆ ಜನರಿಗೆ ಮುಖ ತೋರಿಸಲು ಯೋಗ್ಯತೆ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು, ನಿಮ್ಮ ಸರ್ಕಾರ ತೊಲಗುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅಶೋಕ್ ಎಚ್ಚರಿಕೆ ನೀಡಿದರು.