ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಗಡಿ ಜಿಲ್ಲೆ ಬೆಳಗಾವಿ ರಾಜಕಾರಣದಲ್ಲಿ ಮಹಾಪುರುಷರ ಪ್ರತಿಮೆ ಸಂಘರ್ಷ ತಾರಕಕ್ಕೇರಿದೆ. ಪ್ರತಿಮೆ ಕ್ರೆಡಿಟ್ ತೆಗೆದುಕೊಳ್ಳಲು ರಾಜಕಾರಣಿಗಳ ನಡುವೆ ಜಿದ್ದಾಜಿದ್ದಿ ಶುರುವಾಗಿದೆ.ಸ್ಥಳೀಯ ರಾಜಕಾರಣಿಗಳು ಮರಾಠಿಗರ ಓಲೈಕೆಗಾಗಿ ಛತ್ರಪತಿ ಶಿವಾಜಿ, ಸಂಭಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಹೆಚ್ಚಿನ ಒಲವು ತೋರುತ್ತಾರೆ. ಶಿವಾಜಿ, ಸಂಭಾಜಿ ಮಹಾರಾಜರ ಪ್ರತಿಮೆಗಳು ನಗರದ ಅಲ್ಲಲ್ಲಿ ಪ್ರತಿಷ್ಠಾಪನೆಯಾಗಿವೆ. ಆದಾಗ್ಯೂ ಮತ್ತೆ ಬೇರೆ ಕಡೆಗಳಲ್ಲಿ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಆದರೆ, ಇಲ್ಲಿ ಒಂದೇ ಮೂರ್ತಿಗೆ ಎರಡೆರಡು ಬಾರಿ ಉದ್ಘಾಟನೆ ಭಾಗ್ಯವೂ ಸಿಗುತ್ತಿದೆ. ಒಂದು ಅಧಿಕೃತವಾದರೆ, ಮತ್ತೊಂದು ಅನಧಿಕೃತ. ಹೀಗೆ ಎರಡೆರಡು ಬಾರಿ ಮೂರ್ತಿಗಳನ್ನು ಉದ್ಘಾಟಿಸಲಾಗುತ್ತಿದೆ.
ಕರ್ನಾಟಕ ಸರ್ಕಾರದ ಅನುದಾನದಿಂದ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಆದರೆ, ಸ್ಥಳೀಯ ರಾಜಕಾರಣಿಗಳು ಮಹಾರಾಷ್ಟ್ರ ನಾಯಕರನ್ನು ಉದ್ಘಾಟನೆಗೆ ಆಹ್ವಾನಿಸುತ್ತಾರೆ. ಕನ್ನಡ ನೆಲದಲ್ಲೇ ನಿಂತು ಮಹಾರಾಷ್ಟ್ರ ನಾಯಕರು ಜೈ ಮಹಾರಾಷ್ಟ್ರ ಘೋಷಣೆ ಕೂಗಿ ಉದ್ಧಟತನ ಪ್ರದರ್ಶಿಸುವುದು ಗಡಿಭಾಗದ ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ. ಪ್ರತಿಮೆ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಪ್ರತಿಷ್ಠೆ ವಿಷಯವಾಗಿದೆ.ಮರುಕಳಿಸಿದ ಪ್ರತಿಮೆ ಸಂಘರ್ಷ: 2023ರ ಮಾರ್ಚ್ ತಿಂಗಳಲ್ಲಿ ಬೆಳಗಾವಿ ತಾಲೂಕಿನ ರಾಜಹಂಸಗಢ ಕೋಟೆ ಆವರಣದಲ್ಲಿ 50 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣವೂ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಈ ಪ್ರತಿಮೆ ಲೋಕಾರ್ಪಣೆಗೊಳಿಸಿದ್ದರು. ಆದರೆ, ಮುಖ್ಯಮಂತ್ರಿಯಿಂದ ಉದ್ಘಾಟನೆಯಾಗಿದ್ದ ಶಿವಾಜಿ ಮೂರ್ತಿಯನ್ನು ಮತ್ತೊಮ್ಮೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದ್ದರು.
ಈ ಮಧ್ಯೆ ಯಳ್ಳೂರ-ರಾಜಹಂಸ ಗ್ರಾಮಸ್ಥರು ರಾಜಕಾರಣಿಗಳಿಂದ ಶಿವಾಜಿ ಮೂರ್ತಿ ಅಪವಿತ್ರವಾಗಿದೆ ಎಂದು ಆರೋಪಿಸಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕ್ಷೀರಾಭಿಷೇಕ, ವಿಶೇಷ ಪೂಜೆ ಮಾಡುವ ಮೂಲಕ ಪ್ರತಿಮೆ ಶುದ್ಧೀಕರಣಗೊಳಿಸಿ ಗಮನ ಸೆಳೆದಿದ್ದರು. ಶಿವಾಜಿ ಮೂರ್ತಿ ಅನಾವರಣ ಸಂದರ್ಭದಲ್ಲಿಯೂ ರಾಜಕೀಯ ಸಂಘರ್ಷ ತಾರಕಕ್ಕೇರಿತ್ತು. ಇದೀಗ ಮತ್ತೊಮ್ಮೆ ಪ್ರತಿಮೆ ರಾಜಕೀಯ ಸಂಘರ್ಷ ಮರುಕಳಿಸಿದೆ.ಅನಗೋಳದಲ್ಲಿ ಪ್ರತಿಷ್ಠಾಪಿಸಲಾಗಿರುವ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಮೇಯರ್ ಸವಿತಾ ಕಾಂಬಳೆ ನೇತೃತ್ವದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಶಿವಾಜಿ ಮಹಾರಾಜರ 13ನೇ ವಂಶಸ್ಥ, ಮಹಾರಾಷ್ಟ್ರದ ಸಚಿವ ಶಿವೇಂದ್ರ ರಾಜೇ ಬೋಸಲೆ ಅವರು ಸಂಭಾಜಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಈ ವೇಳೆ ಜೈ ಮಹಾರಾಷ್ಟ್ರ ಘೋಷಣೆ ಕೂಗಿರುವುದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ, ಈ ಕಾರ್ಯಕ್ರಮ ಅನಧಿಕೃತವಾಗಿದೆ ಎಂದು ಘೋಷಿಸಿರುವ ಜಿಲ್ಲಾಡಳಿತ ಶೀಘ್ರದಲ್ಲೇ ಸಂಭಾಜಿ ಪ್ರತಿಮೆಯನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲು ಅಣಿಯಾಗಿದೆ.
ಕನ್ನಡಿಗ ಮಹಾಪುರುಷರ ನಿರ್ಲಕ್ಷ್ಯ: ಬೆಳಗಾವಿ ಮಹಾನಗರ ಪಾಲಿಕೆ ಕೇವಲ ಧರ್ಮವೀರ ಸಂಬಾಜಿ ಮಹಾರಾಜ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿದೆ. ಈ ಇಬ್ಬರು ಮಹಾ ಪುರುಷರ ವೃತ್ತಗಳ ಅಭಿವೃದ್ಧಿಗೆ ಒತ್ತು ನೀಡಿ ಕೋಟ್ಯಂತರ ಅನುದಾನ ನೀಡುತ್ತಿದೆ. ಕನ್ನಡ ನಾಡಿನ ಮಹಾನ್ ವ್ಯಕ್ತಿಗಳಾದ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಜಗಜ್ಯೋತಿ ಬಸವೇಶ್ವರರ ವೃತ್ತಗಳನ್ನು ಅಭಿವೃದ್ಧಿಪಡಿಸದೇ ಕಡೆಗಣಿಸಿದೆ. ಬೆಳಗಾವಿ ಮಹಾನಗರ ಪಾಲಿಕೆಯನ್ನು ಸರ್ಕಾರ ತಕ್ಷಣ ಸೂಪರ್ ಸೀಡ್ ಮಾಡಬೇಕು ಎಂದು ಕನ್ನಡಪರ ಸಂಘಟನೆಗಳು ಒಕ್ಕೊರಲಿನಿಂದ ಆಗ್ರಹಿಸಿವೆ.ಅನಗೋಳದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆದಿರುವುದು ಅನಧಿಕೃತವಾಗಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಪ್ರತಿಮೆ ಅನಾವರಣಗೊಳಿಸಲಾಗುವುದು.- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಆಗಮಿಸಿ, ಕನ್ನಡನೆಲದಲ್ಲಿ ಮಹಾರಾಷ್ಟ್ರ ಸಚಿವ ಶಿವೇಂದ್ರ ರಾಜೇ ಬೋಸಲೆ ಜೈ ಮಹಾರಾಷ್ಟ್ರ ಎಂಬ ಘೋಷಣೆ ಕೂಗಿ ಕನ್ನಡ ನಾಡಿಗೆ ದ್ರೋಹ ಬಗೆದಿದ್ದಾರೆ. ಕನ್ನಡಿಗರಿಗೆ ಅವಮಾನ ಮಾಡಿರುವುದು ಖಂಡನಾರ್ಹ. ಕಾರ್ಯಕ್ರಮ ಸಂಘಟಕ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಮೇಯರ್ ಸವಿತಾ ಕಾಂಬಳೆ ಮೇಲೆ ನಾಡದ್ರೋಹ ಪ್ರಕರಣ ದಾಖಲಿಸಬೇಕು.
- ದೀಪಕ ಗುಡಗನಟ್ಟಿ, ಜಿಲ್ಲಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ