ಇಡೀ ಏಷ್ಯಾ ಖಂಡದಲ್ಲೆ ಪ್ರಥಮ ಬಾರಿಗೆ ವಿದ್ಯುತ್ ಬೆಳಕು ನೀಡಿದವರೆನಿಸಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಬೆಳಕಿಲ್ಲದೆ ಕತ್ತಲೆಯಲ್ಲಿದ್ದರೆ, ಅವರ ಹೆಸರಿನಲ್ಲಿರುವ ಕೃಷ್ಣರಾಜೇಂದ್ರ ವೃತ್ತ ಹಳ್ಳಕೊಳ್ಳಗಳಿಂದ ಕೂಡಿ ಸಂಚಾರ ಮಾಡುವುದೆ ದುಸ್ತರವಾಗಿದೆ.

ರಾಜೇಂದ್ರ ರಾವ್‌

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಇಡೀ ಏಷ್ಯಾ ಖಂಡದಲ್ಲೆ ಪ್ರಥಮ ಬಾರಿಗೆ ವಿದ್ಯುತ್ ಬೆಳಕು ನೀಡಿದವರೆನಿಸಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಬೆಳಕಿಲ್ಲದೆ ಕತ್ತಲೆಯಲ್ಲಿದ್ದರೆ, ಅವರ ಹೆಸರಿನಲ್ಲಿರುವ ಕೃಷ್ಣರಾಜೇಂದ್ರ ವೃತ್ತ ಹಳ್ಳಕೊಳ್ಳಗಳಿಂದ ಕೂಡಿ ಸಂಚಾರ ಮಾಡುವುದೆ ದುಸ್ತರವಾಗಿದೆ.

ಕಾವೇರಿ ನದಿದಡದಲ್ಲಿದ್ದ ಎಡತೊರೆಯನ್ನು ಎತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಿ ಅಗತ್ಯ ಮೂಲ ಸೌಲಭ್ಯಗಳನ್ನು ನೀಡಿ ರಾಜ್ಯದಲ್ಲೆ ಒಂದು ವ್ಯವಸ್ಥಿತ ಉತ್ತಮ ನಗರವೆಂಬ ಖ್ಯಾತಿಗೆ ಕಾರಣರಾದ ಮೈಸೂರು ರಾಜರಿಗೆ ಪಟ್ಟಣದ ಪುರಸಭೆ ಆಡಳಿತ ನೀಡುತ್ತಿರುವ ರಾಜಮರ್ಯಾದೆ ಇದಾಗಿದೆ.

ಪಟ್ಟಣದ ನಿರ್ಮಾಣ ಮಾಡಿ ನಾಲ್ವಡಿ ಅವರ ಪುತ್ಥಳಿ ಪ್ರತಿಷ್ಠಾಪಿಸಬೇಕೆಂದು ಕಳೆದ ದಶಕಗಳಹಿಂದೆ ನಿರ್ಣಯಿಸಲಾಯಿತು. ಪಟ್ಟಣದ ಶ್ರೀಕೃಷ್ಣರಾಜೇಂದ್ರ ವೃತ್ತದಲ್ಲಿ ಪುತ್ಥಳಿಯನ್ನು ಕಾಲೇಜು ರಸ್ತೆ ಮತ್ತು ಮೈಸೂರು ರಸ್ತೆಗಳ ನಡುವಿನ ಇಕ್ಕಟ್ಟಿನ ಜಾಗದಲ್ಲಿ ಪ್ರತಿಷ್ಠಾಪಿಸಿ ಕೈತೊಳೆದುಕೊಳ್ಳಲಾಯಿತೆ ಹೊರತು, ಮುಂದೆ ಆ ಪ್ರತಿಷ್ಠಿತ ಜಾಗಕ್ಕೆ ಆಗಬೇಕಾದ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಪುರಸಭೆ ಆಡಳಿತ ನಿರ್ಲಕ್ಷ್ಯ ತಾಳಿದ ಪರಿಣಾಮ ಇಂದು ಮೈಸೂರು ಮಹಾರಾಜರ ಪ್ರತಿಮೆ ಕತ್ತಲೆಯಲ್ಲಿ ಮುಳುಗಿದ್ದು, ಸುಣ್ಣ ಬಣ್ಣ ಕಂಡು ಅದೆಷ್ಟೊ ವರ್ಷಗಳಾಗಿದ್ದು, ಸ್ವಚ್ಚತೆ ಎಂಬುದು ಇಲ್ಲದ ಕಾರಣ ಗಣ್ಯರ ಮತ್ತು ನಗರದ ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ.

ಸುತ್ತಲೂ ಅಳವಡಿಸಿದ್ದ ಗೇಟ್ ಮುರಿದು ಬಿದ್ದಿರುವ ಕಾರಣ ರಾತ್ರಿಯಾದರೆ ಪೋಲಿ ಪುಂಡರು ಹಾಗೂ ಕುಡುಕರು ಒಳ ಪ್ರವೇಶ ಮಾಡಿ ಅಲ್ಲೆ ವಾಸ್ತವ್ಯ ಹೂಡುವಂತಾಗಿದ್ದು, ಪುತ್ಥಳಿಯ ಮಹಿಮೆ ಏನು ಎಂದು ತಿಳಿಯದ ಹಲವರಿಂದ ಅವಮಾನವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಎಲ್ಲವನ್ನು ಕಣ್ಣಾರೆ ಕಂಡರೂ ಕುರುಡರಂತೆ ವರ್ತಿಸುತ್ತಿರುವುದು ಮಾತ್ರ ಇಂದಿನ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.

ಪಟ್ಟಣದಲ್ಲಿ ಯಾವುದಾದರೂ ನಾಡಹಬ್ಬಗಳು, ಜಯಂತಿ ಕಾರ್ಯಕ್ರಮಗಳು ನಡೆದಾಗ ಮಾತ್ರ ನಾಮಕಾವಾಸ್ತೆಗೆ ಪುರಸಭೆ ವತಿಯಿಂದ ಒಂದಷ್ಟು ಹಸಿರು ತೋರಣ ಕಟ್ಟಿ ಹೂವಿನ ಹಾರ ಹಾಕಿ ಕೈತೊಳೆದು ಕೊಂಡರೆ ಅಲ್ಲಿಗೆ ಮುಗಿಯಿತು, ಪುರಸಭೆ ಜವಾಬ್ದಾರಿ ಎಂಬಂತಾಗಿದೆ, ಪರಿಣಾಮ ಪ್ರತಿದಿನ ಮೈಸೂರು ಮಹಾರಾಜರು ಕುಡುಕರು, ಧೂಮಪಾನಿಗಳು ಹಾಗೂ ಪುಂಡಪೋಕರಿಗಳೊಂದಿಗೆ ದಿನದೂಡುವಂತಾಗಿದೆ.

ಇನ್ನೂ ಇಲ್ಲಿನ ವೃತ್ತದಲ್ಲಿನ ರಸ್ತೆ ಅವ್ಯವಸ್ಥೆ ಹೇಳತೀರದಾಗಿದ್ದು ವೃತ್ತದ ಸುತ್ತಾ ರಸ್ತೆ ಕಿತ್ತು ಆಳುದ್ದ ಗುಂಡಿ ನಿರ್ಮಾಣವಾಗಿದ್ದು, ವಾಹನಗಳೇನಾದರೂ ವೇಗದಿಂದ ಬಂದು ತಿರುವು ಪಡೆದಲ್ಲಿ ಪಲ್ಟಿ ಹೊಡೆಯುವುದು ಗ್ಯಾರಂಟಿ. ಚೆನ್ನಾಗಿರುವ ಕಟ್ಟಡಗಳಿಗೆ ಬಿಲ್ ಮಾಡುವುದಕ್ಕಾಗಿಯೆ ವರ್ಷಕ್ಕೆ ಒಮ್ಮೆ ಬಣ್ಣ ಬಳಿಯುವ ಅಧಿಕಾರಿಗಳ ಕಣ್ಣಿಗೆ ಊರ ಮಧ್ಯೆಯ ಇರುವ ಮಹಾರಾಜರ ವೃತ್ತ ಹಾಗೂ ಪುತ್ಥಳಿ ಕಾಣದಿರುವುದು ವಿಪರ್ಯಾಸ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪಟ್ಟಣದ ಜನತೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಗಮನರಿಸಿ ಪುತ್ಥಳಿಗೆ ಸುತ್ತಾ ವಿದ್ಯುತ್‌ ಸಂಪರ್ಕ ಕಲ್ಪಿಸಿ, ಸುಣ್ಣಬಣ್ಣ ಹಚ್ಚಿ, ಸ್ವಚ್ಛತೆಯೊಂದಿಗೆ ಗೇಟ್ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

ಈ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ವಿದ್ಯುತ್‌ ದೀಪಗಳನ್ನು ಅಳವಡಿಸಿ ಗೇಟ್ ಸರಿಪಡಿಸಿ ಸ್ವಚ್ಛತೆ ಕಾಪಾಡಿ ಮಹಾರಾಜರ ಪುತ್ಥಳಿಗೆ ಸಲ್ಲಬೇಕಾದ ಗೌರವ ಸಲ್ಲಿಸಲಾಗುವುದು.

-ಜಿ.ಎಸ್. ರಮೇಶ್, ಪುರಸಭೆ ಮುಖ್ಯಾಧಿಕಾರಿ