ಸಾರಾಂಶ
ಹಾವೇರಿ: ರಾಜ್ಯ, ದೇಶದಲ್ಲಿ ನಮಗೆ ಸ್ಥಾನಮಾನ ದೊರಕಿದ್ದರೆ ಅದಕ್ಕೆ ಸ್ವಾತಂತ್ರ್ಯ ಹೋರಾಟಗಾರರು ಕಾರಣ. ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಹಿರಿಯರು ತಮ್ಮ ಪ್ರಾಣತ್ಯಾಗ ಮಾಡಿದ್ದು ಸ್ಮರಣೀಯ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಡಾ. ಮಹದೇವ ಬಣಕಾರ ಜಿಲ್ಲಾ ಗ್ರಂಥಾಲಯದ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಸ್ವಾತಂತ್ರ್ಯಯೋಧರ ಉತ್ತರಾಧಿಕಾರಿಗಳ ಸಂಘದಿಂದ ಏರ್ಪಡಿಸಿದ್ದ ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ದ್ವಿತೀಯ ಸಮ್ಮೇಳನ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮಗೆ ಸ್ವಾತಂತ್ರ್ಯ ದೊರೆತಿದ್ದರಿಂದ ಪ್ರಜಾಪ್ರಭುತ್ವ ಮಾದರಿಯಲ್ಲಿ ನಾವು ಪ್ರಧಾನಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಹಂತದ ಜನಪ್ರತಿನಿಧಿಗಳನ್ನು ಆಯ್ಕೆಮಾಡಿಕೊಂಡು ಆಡಳಿತ ನಡೆಸುವಂತಾಗಿದೆ. ಹೀಗಾಗಿ ಕಣ್ಮರೆಯಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ಅತ್ಯಗತ್ಯವಾಗಿದೆ. ಈಗಾಗಲೇ ಬ್ಯಾಡಗಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ, ಮೈಲಾರ ಮಹದೇವಪ್ಪ ಸ್ಮಾರಕ ಭವನ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಹಾವೇರಿ ವೃತ್ತದಲ್ಲಿ ಕಿತ್ತೂರರಾಣಿ ಚೆನ್ನಮ್ಮನವರ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು. ತಮ್ಮ ತಮ್ಮ ಭಾಗದ ವೃತ್ತ, ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ನಾಮಕರಣ ಮಾಡಿ, ಅವರನ್ನು ಶಾಶ್ವತವಾಗಿ ಸ್ಮರಿಸುವಂತೆ ಮಾಡಲು ಸಂಪೂರ್ಣ ಸಹಕಾರ ನೀಡಲಾಗುವುದು. ಸ್ವಾತಂತ್ರ್ಯಯೋಧರ ಉತ್ತರಾಧಿಕಾರಿಗಳ ಬೇಡಿಕೆಗಳ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಅವುಗಳನ್ನು ಈಡೇರಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.ಉತ್ತರಾಧಿಕಾರಿಗಳ ಸಂಘದ ಉಪಾಧ್ಯಕ್ಷ ಡಾ. ಪ್ರಭುಸ್ವಾಮಿ ಹಾಲೇವಾಡಿಮಠ ಮಾತನಾಡಿ, ಈಗ ಯಾವುದೇ ಸ್ವಾತಂತ್ರ್ಯ ಹೋರಾಟಗಾರರು ಜಿಲ್ಲೆಯಲ್ಲಿ ಜೀವಂತವಾಗಿ ಬದುಕಿಲ್ಲ. ಆದರೆ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಇದ್ದು ಅವರಿಗೆ ಸರ್ಕಾರ ಹಾಗೂ ಸಾರ್ವಜನಿಕವಾಗಿ ಇವರಿಗೆ ಈ ದೇಶದ ಸ್ವಾತಂತ್ರ್ಯಕ್ಕೆ ದುಡಿದ ಹಾಗೂ ಮಡಿದ ಕುಟುಂಬಸ್ಥರು ಎಂಬ ಗೌರವ ಸಿಗಬೇಕು. ಸ್ವಾತಂತ್ರ್ಯ ಹೋರಾಟಕ್ಕಾಗಿ ಎಲ್ಲವನ್ನು ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಹಾಗೂ ರಾಷ್ಟ್ರೀಯ ಪರಿವಾರ ಎಂದು ಗುರುತಿನ ಪತ್ರವನ್ನು ನೀಡಬೇಕು ಎಂದರು.ಸಿದ್ದಾಪುರದ ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ ಉಪನ್ಯಾಸ ನೀಡಿದರು. ಹಿರಿಯ ವಕೀಲ ಪಿ.ವಿ. ನಡುವಿನಮಠ ಮಾತನಾಡಿ, ಸ್ವಾತಂತ್ರ್ಯ ಯೋಧರ ವಂಶಸ್ಥರ ಸಮ್ಮೇಳನವನ್ನು ಸರ್ಕಾರ ಸ್ವಇಚ್ಛೆಯಿಂದ ಮಾಡಿದಲ್ಲಿ ಅರ್ಥಪೂರ್ಣವಾಗಿರುತ್ತದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ಸಂಘದ ಅಧ್ಯಕ್ಷ ಮೃತ್ಯುಂಜಯ ಕುಲಕರ್ಣಿ ವಹಿಸಿದ್ದರು. ಹಾವೇರಿಯ ತಹಸೀಲ್ದಾರ್ ಶಂಕರ ಜಿ.ಎಸ್., ಹಿರಿಯ ಮುಖಂಡ ಎಂ.ಎಂ. ಹಿರೇಮಠ, ಕಲಾವಿದೆ ಪದ್ಮಶ್ರೀ ಹೆಗಡೆ, ಅಪ್ರತಿಮ ಸ್ವಾತಂತ್ರ್ಯ ಯೋಧ ಸಂಗೂರ ಕರಿಯಪ್ಪನವರ ಮಗಳು ಚಿಕ್ಕಮ್ಮ ಆಡೂರ ಹಾಗೂ ಸಂಘಟನೆಯ ಅನೇಕ ಪ್ರಮುಖರು ಪಾಲ್ಗೊಂಡಿದ್ದರು.ಶಿಕ್ಷಕ ಡಾ.ಎಸ್. ಹನುಮಂತಪ್ಪ ಹಂಸಭಾವಿ ಸ್ವಾಗತಿಸಿದರು. ಮುಖ್ಯಾಧ್ಯಾಪಕ ಸಂತೋಷ ಎಸ್.ಬಿ. ಹಂಸಭಾವಿ ನಿರ್ವಹಿಸಿ, ವಂದಿಸಿದರು.