ಭಾರತ ಯುವಶಕ್ತಿ ಹೊಂದಿರುವ ದೇಶವಾಗಿದ್ದು, ಯುವಜನರ ಶಕ್ತಿಯನ್ನು ಕುಂದಿಸುವ ಸಲುವಾಗಿ ಅವರನ್ನು ಮಾದಕ ವಸ್ತುಗಳ ದಾಸರನ್ನಾಗಿ ಮಾಡುವ ವ್ಯವಸ್ಥಿತ ಜಾಲದಿಂದ ದೂರ ಇರಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಮೋಹನ್ ಹೇಳಿದ್ದಾರೆ.

- ಚನ್ನಗಿರಿಯಲ್ಲಿ ವಕೀಲರ ಸಂಘ ಅಧ್ಯಕ್ಷ ಮೋಹನ್ ಸಲಹೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಭಾರತ ಯುವಶಕ್ತಿ ಹೊಂದಿರುವ ದೇಶವಾಗಿದ್ದು, ಯುವಜನರ ಶಕ್ತಿಯನ್ನು ಕುಂದಿಸುವ ಸಲುವಾಗಿ ಅವರನ್ನು ಮಾದಕ ವಸ್ತುಗಳ ದಾಸರನ್ನಾಗಿ ಮಾಡುವ ವ್ಯವಸ್ಥಿತ ಜಾಲದಿಂದ ದೂರ ಇರಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಮೋಹನ್ ಹೇಳಿದರು.

ಶನಿವಾರ ಪಟ್ಟಣದ ಜ್ಞಾನದೀಪ ಪಿಯು ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪರಿವರ್ತನಾ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತು ವ್ಯಸನ ದಂಧೆ, ಕಳ್ಳಸಾಗಣೆ ವಿರೋಧ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ 15ರಿಂದ 18 ವರ್ಷಗಳ ವಯಸ್ಸಿನ ಬಾಲಕರೇ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ತಮ್ಮ ಮುಂದಿನ 70 ವರ್ಷದ ಜೀವನವನ್ನೇ ಅವರು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅಪಾಯಕಾರಿ ಮಾದಕ ವಸ್ತುಗಳನ್ನು ಯಾರಾದರೂ ಬಳಸುತ್ತಿದ್ದರೆ ಅಥವಾ ಮಾರಾಟ ಮಾಡುವುದು ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆಯ ಗಮನಕ್ಕಾಗಲಿ ಆಥವಾ ನಿಮ್ಮ ಕಾಲೇಜಿನ ಮುಖ್ಯಸ್ಥರ ಗಮನಕ್ಕಾಗಲಿ ತರಬೇಕು ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ್ ವಹಿಸಿ, ಕಾಲೇಜಿನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದನ್ನು ತಪ್ಪಿಸಲು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದರು.

ಸಮಾರಂಭದಲ್ಲಿ ವಕೀಲರಾದ ಜಿ.ಎಸ್. ಮೋಹನ್, ಆರ್.ಬಾಬು ಜಾನ್, ಎಸ್.ಆರ್. ರುದ್ರಪ್ಪ, ಪ್ರಸನ್ನ ಕುಮಾರ್, ಜ್ಞಾನದೀಪ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆರ್.ಎಸ್. ಸುರೇಶ್, ಮುಕುಂದಯ್ಯ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

- - -

-10ಕೆಸಿಎನ್ಜಿ2:

ಚನ್ನಗಿರಿಯಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತು ವ್ಯಸನ ದಂಧೆ, ಕಳ್ಳಸಾಗಣೆ ವಿರೋಧ ಕಾರ್ಯಕ್ರಮವನ್ನು ವಕೀಲರ ಸಂಘದ ಅಧ್ಯಕ್ಷ ಎಚ್.ಮೋಹನ್ ಉದ್ಘಾಟಿಸಿದರು.