ಇಂದಿನ ದಿನಗಳಲ್ಲಿ ಅಪೌಷ್ಠಿಕ ಆಹಾರಗಳ ಸೇವನೆಯಿಂದ ಜನತೆ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆ ಪ್ರತಿಯೊಬ್ಬರು ದೈನಂದಿನ ಸೇವನೆ ಮಾಡುವ ಆಹಾರಗಳು ಸತ್ವಭರಿತ ಆಗಿದ್ದಾಗ ಆಸ್ಪತ್ರೆಗಳಿಂದ ದೂರ ಇರಲು ಸಾಧ್ಯ ಎಂದು ಸ್ಥಳೀಯ ಜೆ.ಎಂ.ಎಫ್.ಸಿ. ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ ಹೇಳಿದ್ದಾರೆ.

- ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ ಸಲಹೆ । ಚನ್ನಗಿರಿಯಲ್ಲಿ ರಾಷ್ಟ್ರೀಯ ಪೌಷ್ಠಿಕ ಆಹಾರ ದಿನಾಚರಣೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಇಂದಿನ ದಿನಗಳಲ್ಲಿ ಅಪೌಷ್ಠಿಕ ಆಹಾರಗಳ ಸೇವನೆಯಿಂದ ಜನತೆ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆ ಪ್ರತಿಯೊಬ್ಬರು ದೈನಂದಿನ ಸೇವನೆ ಮಾಡುವ ಆಹಾರಗಳು ಸತ್ವಭರಿತ ಆಗಿದ್ದಾಗ ಆಸ್ಪತ್ರೆಗಳಿಂದ ದೂರ ಇರಲು ಸಾಧ್ಯ ಎಂದು ಸ್ಥಳೀಯ ಜೆ.ಎಂ.ಎಫ್.ಸಿ. ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ ಹೇಳಿದರು.

ಗುರುವಾರ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾಧಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪೌಷ್ಠಿಕ ಆಹಾರ ದಿನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಈ ಹಿಂದಿನ ಹಿರಿಯ ವ್ಯಕ್ತಿಗಳು ಸಾವಯವ ಕೃಷಿಯಲ್ಲಿ ಬೆಳೆದಂತಹ ಧಾನ್ಯಗಳಿಂದ ತಯಾರಿಸಿದ ಆಹಾರಗಳನ್ನು ಸೇವನೆ ಮಾಡುತ್ತಿದ್ದರು. ಕೆರೆ ಮತ್ತು ಬಾವಿಗಳ ನೀರು ಕುಡಿಯುತ್ತಿದ್ದರು. ಹೊಲ, ಗದ್ದೆಗಳಲ್ಲಿ ಕೆಲಸ ಮಾಡುತ್ತಾ 90-120 ವರ್ಷಗಳ ತನಕ ಆರೋಗ್ಯವಂತರಾಗಿ ಜೀವಿಸುತ್ತಿದ್ದರು. ಸದೃಢ ದೇಹದಿಂದಾಗಿ ಅವರು ಆಸ್ಪತ್ರೆಗಳಿಗೆ ಹೋಗುತ್ತಿರಲಿಲ್ಲ. ಆದರೆ, ಪ್ರಸ್ತುತ ಗ್ರಾಮಾಂತರ ಪ್ರದೇಶಗಳಲ್ಲಿಯೇ ಆಸ್ಪತ್ರೆಗಳು ತಲೆಎತ್ತುವಂತಾಗಿವೆ. ಉತ್ತಮ ಆರೋಗ್ಯ ಪಡೆಯಬೇಕಾದರೆ ಹಾಲು-ಹಣ್ಣು ಮತ್ತು ಸತ್ವಭರಿತ ಆಹಾರಗಳನ್ನು ಸೇವನೆ ಮಾಡುತ್ತ ಆರೋಗ್ಯವಂತರಾಗಿರಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಚ್.ಮೋಹನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಎನ್.ಜೆ.ನಾಗರಾಜ್, ಸಿಡಿಪಿಒ ಆರ್.ನಿರ್ಮಲಾ, 1ನೇ ಅಧಿಕ ಸಹಾಯಕ ಸರ್ಕಾರಿ ಅಭಿಯೋಜಕ ಎಲ್.ಸರಿತಾ, ಎರಡನೇ ಅಧಿಕ ಸಹಾಯಕ ಸರ್ಕಾರಿ ಅಭಿಯೋಜಕರಾದ ಎಂ.ಸರಿತಾ, ವಕೀಲರ ಸಂಘದ ಉಪಾಧ್ಯಕ್ಷ ಸಿ.ತಿಪ್ಪೇಶ್, ಕಾರ್ಯದರ್ಶಿ ಮೋಹನ್ ಉಪಸ್ಥಿತರಿದ್ದರು.

ವಕೀಲ ಹನುಮಂತ ನಾಯ್ಕ್ ಪೌಷ್ಠಿಕ ಆಹಾರ ಕುರಿತಂತೆ ಉಪನ್ಯಾಸ ಮಂಡಿಸಿದರು. ಅಂಗನವಾಡಿ ಕಾರ್ಯಕರ್ತೆಯರು ತಯಾರಿಸಿಕೊಂಡು ತಂದಿದ್ದ ಪೌಷ್ಠಿಕ ಆಹಾರಗಳನ್ನು ಅತಿಥಿ ಗಣ್ಯರು ಸವಿದರು.

- - -

(ಬಾಕ್ಸ್‌)

* ಸಿರಿಧಾನ್ಯಗಳಿಂದ ಉತ್ತಮ ಆರೋಗ್ಯ: ತಾಪಂ ಇಒ

ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಮಾತನಾಡಿ, ಸಿರಿಧಾನ್ಯಗಳು ಉತ್ತಮ ಆರೋಗ್ಯ ತರಬಲ್ಲವು. ಈ ಹಿಂದೆ ನಮ್ಮ ಹಿರಿಯರು ಸಿರಿಧಾನ್ಯಗಳಿಂದ ತಯಾರಿಸಿದಂತಹ ಆಹಾರಗಳನ್ನೇ ಸೇವಿಸುತ್ತಿದ್ದರು. ಇದರಿಂದ ಅವರ ಆರೋಗ್ಯ ಉತ್ತಮವಾಗಿ ಇತ್ತು. ಈಗ ಪ್ರತಿ ಆಹಾರ ಪದಾರ್ಥಗಳನ್ನು ಬೆಳೆಯಲು ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳ ಬಳಕೆ ಹೆಚ್ಚಾಗಿದೆ. ಇದರಿಂದಾಗಿ ಬೆಳೆದ ಆಹಾರ ಪದಾರ್ಥಗಳನ್ನು ಸೇವಿಸುವಂತಾಗಿದ್ದು, ಇದು ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಜನರು ಪುಷ್ಠಿದಾಯಕ ಹಣ್ಣುಗಳನ್ನು, ಆಹಾರಗಳನ್ನು ಸೇವನೆ ಮಾಡಲು ಆದ್ಯತೆ ನೀಡಬೇಕು ಎಂದು ಹೇಳಿದರು.

- - -

-24ಕೆಸಿಎನ್‌ಜಿ1: ಸಮಾರಂಭವನ್ನು ಜೆಎಂಎಫ್‌ಸಿ ನ್ಯಾಯಾಲಯ ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ ಉದ್ಘಾಟಿಸಿದರು.