ಸಾರಾಂಶ
ವಡಗೇರಾ ಸಮೀಪದ ತಡಿಬಿಡಿ ಗ್ರಾಮಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ ಅವರು ಭೇಟಿ ನೀಡಿ ಸ್ವಚ್ಛತೆ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ವಡಗೇರಾ
ಮಳೆಗಾಲದಲ್ಲಿ ಮನೆಯಲ್ಲಿ ವಾರಗಟ್ಟಲೆ ನೀರು ಸಂಗ್ರಹಿಸದೆ, ಪ್ರತಿ ನಿತ್ಯ ನೀರು ಬದಲಿಸಬೇಕು. ಮನೆಯ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಿಕೊಂಡು, ಸಾಂಕ್ರಾಮಿಕ ರೋಗಗಳಿಂದ ದೂರವಿರುವಂತೆ ವಡಗೇರಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ ಸಲಹೆ ನೀಡಿದರು.ಇಲ್ಲಿನ ತಾಪಂ ವ್ಯಾಪ್ತಿಯ ತಡಿಬಿಡಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ಪ್ರತಿ ಮನೆಗೆ ಭೇಟಿ ನೀಡಿ ಸ್ವಚ್ಛತೆ ಕುರಿತು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಮನೆಯಲ್ಲಿರುವ ಪಾತ್ರೆ, ಮಡಿಕೆಗಳನ್ನು ಸ್ವಚ್ಛವಾಗಿ ತೊಳೆದು ಪುನಃ ನೀರು ಸಂಗ್ರಹಿಸಬೇಕು. ಮನೆಯಲ್ಲಿ ಚಿಕ್ಕ ಮಕ್ಕಳು, ಗರ್ಭಿಣಿಯರು ಹಾಗೂ ತಾಯಂದಿರು ನೀರನ್ನು ಕಾಯಿಸಿ, ಆರಿಸಿ ಕುಡಿಯುವಂತೆ ತಿಳಿಸಿದರು.ಮನೆಯ ಮುಂದಿನ ಚರಂಡಿ, ಟೈರ್, ಟ್ಯಾಂಕ್‌ಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದನ್ನು ಗಮನಿಸಿ, ಅದನ್ನು ಸ್ವಚ್ಛಗೊಳಿಸಿ ಸೊಳ್ಳೆಗಳ ಉತ್ಪಾದನೆಯಾಗದಂತೆ ಗಮನ ಹರಿಸಲು ಗ್ರಾಮಸ್ಥರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು.
ಕುಡಿವ ನೀರನ್ನು ಆಗಾಗ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪರೀಕ್ಷಿಸಿ ನೀರು ಪೂರೈಕೆ ಮಾಡುವಂತೆ ಸೂಚಿಸಿದರು.ಈ ವೇಳೆ ಆರೋಗ್ಯ ಸಿಬ್ಬಂದಿಗಳು, ಪಿಡಿಒ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮದಲ್ಲಿ ಸಂಚರಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.
ಗ್ರಾಪಂ ಅಧ್ಯಕ್ಷ ಉಮಾರಡ್ಡಿ, ಪಿಡಿಒ ಗೋವಿಂದ ರಾಠೋಡ, ಟಿಐಇಸಿ ದುರ್ಗೇಶ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ-ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮದ ಮುಖಂಡರು ಇದ್ದರು.