ಮಾನಸಿಕ ಒತ್ತಡದಿಂದ ದೂರವಿರಿ: ಡಾ.ಮನೋಹರ್

| Published : Apr 08 2025, 12:33 AM IST

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಒತ್ತಡವೇ ಕಾರಣವಾಗಿದೆ. ಮಹಿಳೆಯರ ಆರೋಗ್ಯ ಬಗ್ಗೆ ವಿಶೇಷ ಕಾಳಜಿ ತೋರಿಸಲು ಗ್ರಾಮೀಣ ಪ್ರದೇಶಗಳಲ್ಲಿ ಆಶಾ, ಅಂಗನವಾಡಿ ಕಾರ್ತಕರ್ತಯರು, ಆರೋಗ್ಯ ಮಿತ್ರರು, ದಾದಿಯರು ಹೀಗೆ ವಿವಿಧ ಸ್ಥರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳೆಯರು ಆಹಾರ ಸಮತೋಲನ ಕಾಪಾಡಿಕೊಂಡು ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಖ್ಯಾತ ಸ್ತ್ರೀರೋಗ ತಜ್ಞ ಡಾ.ಮನೋಹರ್ ತಿಳಿಸಿದರು.

ಶ್ರೀಪತಂಜಲಿ ಯೋಗಶಿಕ್ಷಣ ಸಮಿತಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸಂಸ್ಥೆ ವತಿಯಿಂದ ಮಹಿಳೆಯರಿಗೆ ಉಚಿತ ಯೋಗ ತರಬೇತಿ ವಾರ್ಷಿಕೋತ್ಸವ ಹಾಗೂ ವಿಶ್ವ ಆರೋಗ್ಯ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಒತ್ತಡವೇ ಕಾರಣವಾಗಿದೆ. ಮಹಿಳೆಯರ ಆರೋಗ್ಯ ಬಗ್ಗೆ ವಿಶೇಷ ಕಾಳಜಿ ತೋರಿಸಲು ಗ್ರಾಮೀಣ ಪ್ರದೇಶಗಳಲ್ಲಿ ಆಶಾ, ಅಂಗನವಾಡಿ ಕಾರ್ತಕರ್ತಯರು, ಆರೋಗ್ಯ ಮಿತ್ರರು, ದಾದಿಯರು ಹೀಗೆ ವಿವಿಧ ಸ್ಥರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಹು ಮುಖ್ಯವಾಗಿ ಮಹಿಳೆಯರು ಜಾಗೃತರಾದರೆ ರೋಗಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.

ಪರಿಸರ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ.ಅರುಣಕುಮಾರಿ ಮಹಿಳೆಯರ ಆರೋಗ್ಯದ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಕಳೆದ ಒಂದು ವರ್ಷದಿಂದ ಉಚಿತವಾಗಿ ಯೋಗ ತರಬೇತಿ ನಡೆಸುತ್ತಾ ಬಂದಿದ್ದೇವೆ. ಯೋಗ ತರಬೇತಿ ಪಡೆದ ನಂತರ ಹಲವು ಮಹಿಳೆಯರು ಅವರೇ ಶಿಕ್ಷಕಿಯರಾಗಿ ಯೋಗ ತರಬೇತಿ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಪತಂಜಲಿ ಯೋಗ ಸಂಸ್ಥೆಯ ಶಂಕರನಾರಾಯಣಶಾಸ್ತ್ರಿ ಮಾತನಾಡಿ, ಸೇವೆಯಲ್ಲಿ ಪ್ರತಿಫಲಾಪೇಕ್ಷೆ ಇಟ್ಟುಕೊಳ್ಳಬಾರದು. ಸೇವೆಯಲ್ಲಿ ಅಪೇಕ್ಷೆಯನ್ನು ಇಟ್ಟುಕೊಂಡು ಮಾಡಿದರೆ ಅದು ಉದ್ಯಮವಾಗುತ್ತದೆ. ನಿಷ್ಕಲ್ಮಶವಾಗಿ ಸೇವೆ ಸಲ್ಲಿಸುವುದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಯೋಗೀಶ್, ಯೋಗ ಗುರು ಶಂಕರ್, ಯೋಗ ತರಬೇತಿ ಕೇಂದ್ರದ ಚಂದ್ರಕಲಾ, ಶಾಂತ, ಗೀತಾ ಕಾಮತ್ ಇತರರು ಉಪಸ್ಥಿತರಿದ್ದರು.

ನಾಳೆ ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ

ಮದ್ದೂರು:

ಮಂಡ್ಯ ಜಿಲ್ಲಾ ಲೋಕಾಯುಕ್ತ ಪೊಲೀಸರು ಏ.9 ರಂದು ಪಟ್ಟಣದ ತಾಲೂಕು ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರಿಂದ ದೂರು ಅರ್ಜಿ, ಅಹವಾಲು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸ್ವೀಕಾರ ಮಾಡಲಿದ್ದಾರೆ. ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ವಿಷಯ ನಿರ್ವಾಹಕರು ಸದರಿ ದಿನದಂದು ಇದ್ದು, ಸಭೆಗೆ ಹಾಜರಾಗುವಂತೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್. ಸುರೇಶ್ ಬಾಬು ತಿಳಿಸಿದ್ದಾರೆ.