ಮಾದಕ ವಸ್ತುಗಳ ಸೇವನೆಯ ದುಶ್ಚಟಗಳಿಂದ ದೂರವಿರಿ: ಸಿ. ಪುಟ್ಟರಂಗಶೆಟ್ಟಿ

| Published : Aug 01 2025, 11:45 PM IST

ಮಾದಕ ವಸ್ತುಗಳ ಸೇವನೆಯ ದುಶ್ಚಟಗಳಿಂದ ದೂರವಿರಿ: ಸಿ. ಪುಟ್ಟರಂಗಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ಜೀವನ ಚಿನ್ನದಂತಹ ಸಮಯವಾಗಿದೆ. ಇಂದಿನ ಯುವಜನರು ಸಿಗರೇಟ್, ಆಲ್ಕೋಹಾಲ್ ಗಾಂಜಾ, ಗುಟ್ಕಾ, ಅಫೀಮು ಸೇರಿದಂತೆ ಮತ್ತು ಬರಿಸುವ ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಿದ್ಯಾರ್ಥಿಗಳು, ಯುವಜನರು ಮತ್ತುಬರಿಸುವ ಮದ್ಯ, ಮಾದಕ ಪದಾರ್ಥಗಳ ಸೇವನೆಯ ದುಶ್ಚಟಗಳಿಗೆ ಬಲಿಯಾಗದೇ ಅವುಗಳಿಂದ ದೂರವಿರುವಂತೆ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ನೀಡಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನ ಚಿನ್ನದಂತಹ ಸಮಯವಾಗಿದೆ. ಇಂದಿನ ಯುವಜನರು ಸಿಗರೇಟ್, ಆಲ್ಕೋಹಾಲ್ ಗಾಂಜಾ, ಗುಟ್ಕಾ, ಅಫೀಮು ಸೇರಿದಂತೆ ಮತ್ತು ಬರಿಸುವ ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ. ಮಾದಕ ಪದಾರ್ಥಗಳನ್ನು ಒಂದು ಬಾರಿ ಉಪಯೋಗಿಸಿದರೇ ಅದು ವ್ಯಸನವಾಗಿ ಬದಲಾಗುತ್ತದೆ. ಮಾದಕ ವಸ್ತುಗಳು ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶವಿದ್ದರೂ ಅವುಗಳನ್ನು ಹೆಚ್ಚಾಗಿ ಬಳಸುತ್ತಿರುವುದು ಹಾಗೂ ಎಷ್ಟೇ ದುಬಾರಿಯಾದರೂ ಅವುಗಳನ್ನು ಬಿಡುವಂತಹ ಮನಸ್ಥಿತಿ ಜನರಲ್ಲಿ ಇಲ್ಲದಿರುವುದು ವಿಪರ್ಯಾಸವಾಗಿದೆ. ಇಂತಹ ದುಶ್ಚಟಗಳ ಬಗ್ಗೆ ಯುವಜನರು ಎಚ್ಚರದಿಂದಿರಬೇಕು ಎಂದರು.

ಸಾರ್ವಜನಿಕರು ಸಹ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚು ಅರಿವು ಹೊಂದುವುದು ಅವಶ್ಯವಾಗಿದೆ. ಮದ್ಯ, ಮಾದಕ ವಸ್ತುಗಳ ಸೇವನೆಯಿಂದ ಸಂಸಾರ, ಕುಟುಂಬ, ಸಾಮಾಜಿಕ ವಾತಾವರಣ ಹಾಳಾಗಲಿದೆ. ಇದನ್ನು ಮನಗಂಡಿದ್ದ ಮಹಾಂತ ಶಿವಯೋಗಿ ಸ್ವಾಮಿಯವರು ಊರೂರನ್ನು ಸುತ್ತಿ ಭಿಕ್ಷೆ ಬೇಡಿ ಜನರು ತಮ್ಮಲ್ಲಿರುವ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದು ಸಾರಿ ಜನಜಾಗೃತಿ ಉಂಟು ಮಾಡಿದ್ದರು. ಅವರ ಹೆಸರಿನಲ್ಲಿ ವ್ಯಸನ ಮುಕ್ತ ದಿನ ಆಚರಿಸುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಮುಖ್ಯವಾದ ಘಟ್ಟ. ದುಶ್ಚಟಗಳನ್ನು ಕಲಿಯಬೇಡಿ, ಕಲಿತಿದ್ದರೆ ಅದರಿಂದ ಹೊರಬರುವಂತೆ ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ. ಮರಿಸ್ವಾಮಿ ಅವರು ಮಾತನಾಡಿ, ಮಕ್ಕಳು ಈ ದೇಶದ ಸತ್ಪ್ರಜೆಗಳು, ಮುಂದೆ ಬಾಳಿ ಬದುಕುವವರು, ಈ ದೇಶದ ಭವಿಷ್ಯ ಯುವಜನತೆಯ ಮೇಲೆ ಅವಲಂಬಿತವಾಗಿದೆ. ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯ ದುಶ್ಚಟಗಳಿಗೆ ಯುವಜನತೆ ಬಲಿಯಾಗದೇ ಉತ್ತಮ ಶಿಕ್ಷಣ ಪಡೆಯಬೇಕು. ಜ್ಞಾನಿಗಳಾಗಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು. ಉನ್ನತ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಬೇಕು. ತಂದೆ-ತಾಯಿ, ಪೋಷಕರು, ಗುರುಗಳು, ಶಾಲೆಗಳಿಗೆ ಕೀರ್ತಿ ತರಬೇಕು ಎಂದರು.

ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ, ವಿದ್ಯಾರ್ಥಿಜೀವನ ಒಮ್ಮೆ ಕಳೆದುಹೋದರೆ ಮತ್ತೆ ಸಿಗದು. ಇದರ ಮಹತ್ವವನ್ನು ಅರಿತು ಯಾವ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಶ್ಚಟಗಳಿಗೆ ದಾಸರಾಗಬಾರದು. ತಂದೆ-ತಾಯಿ ವಿದ್ಯಾರ್ಥಿಗಳ ಮೇಲೆ ಇಟ್ಟಿರುವ ನಂಬಿಕೆ, ಕಾಳಜಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಈ ದೇಶದ ಆಸ್ತಿಯಾಗಿರುವ ವಿದ್ಯಾರ್ಥಿಗಳು ಉತ್ತಮ ಜೀವನವನ್ನು ವ್ಯರ್ಥ ಮಾಡಿಕೊಳ್ಳಬಾರದು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ವ್ಯಸನ ಮುಕ್ತ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಪಿ.ಎಸ್. ಗುರುಪ್ರಸಾದ್, ಸೆಂಟ್ ಕಿಟ್ ಮತ್ತು ನೆವಿಸ್ (ವೆಸ್ಟ್ ಇಂಡೀಸ್) ನ ವಿಂಡ್ಸರ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸನ್ ಮತ್ತು ಬ್ಯಿಹೇವಿಯರ್ ಸೈನ್ಸಸ್ ವಿಭಾಗದ ಮುಖ್ಯಸ್ಥರು ಹಾಗೂ ಪಾಸಿಟಿವ್ ಸೈಕಾಲಜಿಸ್ಟ್ ಪ್ರಾಧ್ಯಾಪಕ ಡಾ. ವಿ. ಸಂಪತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ. ರಮೇಶ್, ವಾರ್ತಾ ಸಹಾಯಕ ಸುರೇಶ್‌ಕುಮಾರ್, ಕಾಲೇಜಿನ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪಲ್ಲವಿ ಇಳಕಲ್, ಪಿಯು ಕಾಲೇಜು ನಿವೃತ್ತ ಪ್ರಾಂಶುಪಾಲ ಸೋಮಣ್ಣ, ಇತರರು ಕಾರ್ಯಕ್ರಮದಲ್ಲಿ ಇದ್ದರು.

1chn16

ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.