ಸಾರಾಂಶ
ಕೊಪ್ಪಳ:
ಯುವಪೀಳಿಗೆ ತಂಬಾಕು ಸೇವನೆಯಿಂದ ದೂರವಿದ್ದು, ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮಲ್ಲಾಪುರ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕುರಿತ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಸಿಗರೇಟ್, ಬೀಡಿ, ಸಿಗಾರ್, ಹುಕ್ಕಾ ತಂಬಾಕು ವಿಧಗಳಾಗಿವೆ. ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಕಾಯಿಲೆ, ಲಕ್ವಾ ಇತರೆ ಕಾಯಿಲೆ ಬರಲಿವೆ. ಪ್ರತಿ ಸಿಗರೇಟ್, ಬೀಡಿ ಸೇವನೆ 7 ನಿಮಿಷ ಆಯಸ್ಸು ಕಡಿಮೆ ಮಾಡುತ್ತದೆ. ತಂಬಾಕಿನಲ್ಲಿ ನಿಕೋಟಿನ್ ಎಂಬ ಅಪಾಯಕಾರಿ ಪದಾರ್ಥ ಇರಲಿದ್ದು 3000ದಿಂದ 4000 ರಾಸಾಯನಿಕ ವಿಷಾನಿಲಗಳು ಇರುತ್ತವೆ ಎಂದು ಮಕ್ಕಳಿಗೆ ತಿಳಿಸಿದರು.ಮಹಿಳೆಯರಲ್ಲೂ ತಂಬಾಕು ಸೇವನೆಯಿಂದ ಗರ್ಭಪಾತ, ಗರ್ಭಕಂಠದ ಕ್ಯಾನ್ಸರ್, ಕಡಿಮೆ ತೂಕವಿರುವ ಮಗುವಿನ ಜನನ ಹಾಗೂ ಶಿಶುಮರಣ ಸಂಭವಿಸುವ ಹೆಚ್ಚು ಸಾಧ್ಯತೆ ಇರುತ್ತದೆ. ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಯುವಪೀಳಿಗೆ ಇವುಗಳ ಸೇವನೆಯಿಂದ ದೂರವಿದ್ದು, ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ಕರೆ ನೀಡಿದರು.
ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನವೀನಕುಮಾರ ಮಾತನಾಡಿ, ಯುವಜನತೆ ಈ ದೇಶದ ಸಂಪತ್ತಾಗಿದ್ದು ತಂಬಾಕು ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸಲು ಕೈಜೋಡಿಸುವಂತೆ ಮನವಿ ಮಾಡಿದರು.ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಮಾಜಿಕ ಕಾರ್ಯಕರ್ತೆ ಸರಸ್ವತಿ, ತಂಬಾಕು ಸೇವನೆ ಮತ್ತು ಅದರ ದುಷ್ಪರಿಣಾಮ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಂತರ ವಿದ್ಯಾರ್ಥಿಗಳಿಗೆ ತಂಬಾಕು ಸೇವನೆ ನಿಯಂತ್ರಣ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ ರೂಪಾ ಪ್ರಥಮ, ವಾಣಿ ದ್ವಿತೀತ, ಮಾರುತಿ ತೃತೀಯ, ಪ್ರಾಥಮಿಕ ಶಾಲಾ ವಿಭಾಗದಲ್ಲಿ ದುರ್ಗಮ್ಮ ಪ್ರಥಮ, ಮಾರುತಿ ದ್ವಿತೀಯ ಹಾಗೂ ರೇಣುಕಾ ತೃತೀಯ ಸ್ಥಾನ ಪಡೆದರು.
ಈ ವೇಳೆ ಮುಖ್ಯಶಿಕ್ಷಕ ಶರಣಯ್ಯ, ಶಿಕ್ಷಕ ಶಿವಪ್ಪ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ರೇಣುಕಾ, ಆರೋಗ್ಯ ನಿರೀಕ್ಷಣಾಧಿಕಾರಿ ಜಾವೀದ್, ಆರೋಗ್ಯ ಸಿಬ್ಬಂದಿಗಳಾದ ಸುನೀತಾ, ಎಸ್‌ಡಿಎಂಸಿ ಆಡಳಿತ ಸೇರಿದಂತೆ ಇತರರು ಇದ್ದರು.