ದುಶ್ಚಟಗಳಿಂದ ದೂರ ಇದ್ದು, ಸುಸ್ಥಿರ ಸಮಾಜ ನಿರ್ಮಿಸಿ: ಗಿರೀಶ

| Published : Jun 01 2024, 12:46 AM IST

ಸಾರಾಂಶ

ತಂಬಾಕಿನಿಂದಾಗುತ್ತಿರುವ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರಂತರವಾಗಿ ನಡೆಸುತ್ತಿದೆ.

ಸಿದ್ದಾಪುರ: ದುಶ್ಚಟಗಳಿಂದ ದೂರ ಇದ್ದು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕಾರಣೀಕರ್ತರಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಗಿರೀಶ ಹೇಳಿದರು.

ತಾಲೂಕಿನ ಕವಲಕೊಪ್ಪ ಸಿದ್ಧಿವಿನಾಯಕ ದೇವಾಲಯದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಸ್ಥಳೀಯ ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಂಬಾಕಿನಿಂದಾಗುತ್ತಿರುವ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರಂತರವಾಗಿ ನಡೆಸುತ್ತಿದೆ ಎಂದು ಅವರು ಹೇಳಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬಿದ್ರಕಾನ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್.ಎಸ್. ಪಮ್ಮಾರ ಮಾತನಾಡಿ, ತಂಬಾಕು ಸೇವನೆ ಕುಟುಂಬದ, ಸಮಾಜದ ಅಭಿವೃದ್ಧಿಗೆ ಮಾರಕವಾದದ್ದು. ಮಹಿಳೆಯರು ಹೆಚ್ಚು ಜಾಗ್ರತರಾಗಿರುವ ಜತೆಗೆ ತಮ್ಮ ಮಕ್ಕಳು ತಂಬಾಕು ಸೇವೆಯಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಕುಟುಂಬದ ಹಾಗೂ ಸಮಾಜದ ಅಭಿವೃದ್ಧಿಗೆ ಉತ್ತಮ ಆರೋಗ್ಯ ಮುಖ್ಯ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಾಗೂ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಮಂಜುನಾಥ ನಾಯ್ಕ ಅಧ್ಯಕ್ಷತೆವಹಿಸಿದ್ದರು.ಶೌರ್ಯ ತಂಡದ ಪದಾಧಿಕಾರಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮೇಲ್ವಿಚಾರಕ ಪ್ರದೀಪ ಸ್ವಾಗತಿಸಿದರು. ಸಮನ್ವಯಾಧಿಕಾರಿ ಲಲಿತಾ ವಂದಿಸಿದರು. ಸೇವಾ ಪ್ರತಿನಿಧಿ ನೇತ್ರಾವತಿ ಕಾರ್ಯಕ್ರಮ ನಿರ್ವಹಿಸಿದರು.