ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ಭಾವನೆ ಮೆರೆದು ಉತ್ತಮ ನಾಗರಿಕರಾಗಿ ಬೆಳೆದಿದ್ದು ಹೆಮ್ಮೆಯ ವಿಷಯ. ಇಂದಿನ ಔಷಧ ಯುಗದಲ್ಲಿ ಪ್ರತಿ ಆಹಾರ ವಿಷಕಾರಿಯಾಗಿದೆ. ಆದ್ದರಿಂದ ಆರೋಗ್ಯದ ಕಡೆ ಹೆಚ್ಚು ಗಮನ ಕೊಟ್ಟು ಸಾವಯವ ಬಳಸಿ ಆರೋಗ್ಯ ಉಳಿಸಿಕೊಳ್ಳಬೇಕೆಂದು ನಿವೃತ್ತ ಇಂಗ್ಲೀಷ್ ಶಿಕ್ಷಕ ಡಿ.ಬಿ. ಬಿಸ್ವಾಗಾರ ಹೇಳಿದರು.
ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ 1996-98ನೇ ಸಾಲಿನ ಶ್ರೀ ಚನ್ನಗಿರೇಶ್ವರ ಪ್ರಸಾಧಿಕ ಪದವಿ ಪೂರ್ವ ಕಾಲೇಜಿನ (ಪಿಯುಸಿ) ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಪುನರ್ ಮಿಲನ ಸ್ನೇಹ ಬೆಸುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಬೆಳೆಯುವ ಆಹಾರಕ್ಕೆ ನಿತ್ಯ ಔಷಧಿ ಹೊಡೆದು ವಿಷ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದ್ದು, ಒಳ್ಳೆಯ ಸಾವಯವ ಆಹಾರ ಕ್ರಮ ಅನುಸರಿಸಿ ಅರೋಗ್ಯಪೂರ್ಣ ಜೀವನ ನಡೆಸಬೇಕು. ಮನುಷ್ಯ ಸದೃಢವಾಗಿದ್ದರೆ ಎಲ್ಲವನ್ನು ಸಾಧಿಸಬಲ್ಲ ಮತ್ತು ಯುವಕರು ಮಾನಸಿಕ ಅರೋಗ್ಯ ವೃದ್ಧಿಸಿಕೊಂಡು ದೇಶದ ಭವಿಷ್ಯ ನಿರ್ಧರಿಸುವ ಉನ್ನತ ಪ್ರಜೆಗಳಾಗಬೇಕು ಎಂದು ಹೇಳಿದರು.ಬಿ.ಎಚ್. ಮಾರದ ಮಾತನಾಡಿ, ಶಿಷ್ಯಂದಿರು ಗುರುಗಳಿಗಿಂತ ಮೇಲೆತ್ತರದಲ್ಲಿ ಬೆಳೆದು ನಿಂತಾಗ ಆ ಗುರುಗಳಿಗೆ ಆಗುವ ಸಂತೋಷ ಹೇಳತೀರದು. ಗುರು ಬರೀ ಕಲಿಸುತ್ತಾನೆ. ಅದನ್ನು ಗುರುವಾಖ್ಯವೆಂದು ತಿಳಿದು ನಡೆಯುವವನು ಜೀವನದಲ್ಲಿ ಉನ್ನತ ಸ್ಥಾನ ಪಡೆಯುತ್ತಾನೆ. 28 ವರ್ಷಗಳ ನಂತರ ನಮ್ಮನ್ನು ನೆನಪಿಸಿ ಎಲ್ಲರನ್ನೂ ಒಂದುಗೂಡಿಸಿದ ಸುಂದರವಾದ ಕ್ಷಣ. ಇದು ನನ್ನ ಜೀವನದ ಸಾರ್ಥಕ, ಮರೆಯಲಾಗದ ಕ್ಷಣ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಎಂ.ಎಚ್ ಬಿರಾದಾರ ಮಾತನಾಡಿ, ತಂದೆ ತಾಯಿ, ಗುರು, ಭೂಮಿ, ಸಮಾಜ ಮತ್ತು ನಿಸರ್ಗ ಈ ಪಂಚಋಣ ತೀರಿಸಬೇಕು, ಮನುಷ್ಯ ಎಷ್ಟೇ ದೊಡ್ಡವನಾಗಿ ಬೆಳೆದು ಪ್ರಧಾನಿ, ರಾಷ್ಟ್ರಪತಿ, ಶ್ರೀಮಂತ, ಅಧಿಕಾರಿಯಾಗಲಿ. ನಮಗೆ ಜನ್ಮ ನೀಡಿದ ತಂದೆ-ತಾಯಿಯನ್ನು ವೃದ್ದಾಶ್ರಮದಲ್ಲಿ ಇಟ್ಟರೆ ನಮಗೆ ಪುಣ್ಯ ಬರುವುದಿಲ್ಲ. ಆದ್ದರಿಂದ ಆವರ ಸೇವೆ ಮಾಡಿ ಒಟ್ಟಾಗಿ ಬಾಳಿದರೆ ಮಾತ್ರ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.ನಾಗಪ್ಪ ನೆಸುರ: ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕುತಿ ಎಂಬ ನಾನ್ನುಡಿಯಂತೆ ನಾವು ಗುರುವಿನ ಸೇವೆ ಎಷ್ಟೆ ಮಾಡಿದರೂ ಕಡಿಮೆ. ನಿತ್ಯ ಜೀವನದಲ್ಲಿ ಒಮ್ಮೆಯಾದರೂ ಗುರುಗಳನ್ನು ನೆನೆಯಲೇಬೇಕು. ಜನನಿ ತಾನೇ ಮೊದಲ ಗುರು. ಈ ಗುರುವಿಗೆ ನಿತ್ಯ ನಮಿಸಿದರೆ ಬೇರೆ ದೇವರ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟರು.
ಅನುರಾಧಾ ಮುರಗೋಡ ಮಾತನಾಡಿ, ಈ ದೇಶದ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ಹೊತ್ತು ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಿ ದೇಶಕ್ಕೆ ಕೊಡುಗೆ ನೀಡುವುದು ಶಿಕ್ಷಕರ ಹೊಣೆ. ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು ಎಂದು ಹೇಳಿದರು.ಎಲ್.ಬಿ. ತುಪ್ಪದ, ಎಂ.ಎಚ್. ಬಿರಾದಾರ, ಎಸ್.ಬಿ. ಸಾತಲಗಾಂವ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಬಿ.ಜಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು, ಬಿ.ಬಿ. ಜತ್ತಿ, ಆರ್.ಎನ್. ಪಟ್ಟಣಶೆಟ್ಟಿ, ವಿ.ಎಚ್. ಸಂಕನ್ನವರ, ಬಿ.ಜಿ. ಕೆರಕಲಮಟ್ಟಿ, ಎಸ್.ಸಿ. ಹಿರೇಮಠ, ಎಸ್.ಬಿ. ಮಟಗಾರ, ಬಿ.ಬಿ. ಹೀರೊಳ್ಳಿ, ಬಿ.ಸಿ. ಪೂಜಾರಿ, ಎಂ.ಸಿ. ಹರಕಂಗಿ, ವಿಶೇಷ ಆಹ್ವಾನಿತರಾಗಿ ಕಣ್ಣೂರ ನಿಸರ್ಗಧಾಮದ ಡಾ.ರವೀಂದ್ರನಾಥ ಮಹಾರಾಜರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಇದೇ ವೇಳೆ ಅಗಲಿದ ಸಹಪಾಠಿಗಳು ಹಾಗೂ ಶಿಕ್ಷಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಗಲಿದ ಸಹ ಸಹಪಾಠಿಗಳು ಹಾಗೂ ಗುರುಗಳನ್ನು ನೆನೆದು ಎಲ್ಲರೂ ಭಾವುಕರಾದರು.ಗುರುಗಳನ್ನು ರಾಘವೇಂದ್ರ ಮಂದಿರದಿಂದ ಸಕಲ ಮಂಗಳವಾದ್ಯಮೇಳ, ದಾರಿಯುದ್ಧಕ್ಕೂ ಪುಷ್ಪ ವೃಷ್ಟಿ ಮಾಡಿ ಅದ್ಧೂರಿ ಮೆರವಣಿಗೆ ಮೂಲಕ ಬರಮಾಡಿಕೊಂಡರು.
ಬಳಿಕ ಸನ್ಮಾನಿಸಿ ಪಾದಪೂಜೆ ಮಾಡಿ ಗುರುಗಳ ಆಶೀರ್ವಾದ ಪಡೆದರು.ಹಳೆಯ ವಿದ್ಯಾರ್ಥಿಗಳಾದ ವಿಷ್ಣು ಲಾತುರ, ಶೈಲಾ ಮುಕುಂದ, ಮಹನಂದಾ ಪ್ಯಾತಿಶೆಟ್ಟರ, ಶ್ರೀಕಾಂತ, ಕವಿತಾ ಬಾರಕೋಲ ಅನಿಸಿಕೆ ಹಂಚಿಕೊಂಡರು. ಬಾಲಕೃಷ್ಣ ಮಾಳವದೆ, ಅರ್ಜುನ ಹಲಗಿಗೌಡರ, ಸುರೇಶ ನಿಂಬರಗಿ, ಈರಣ್ಣ ಗಾಳಿ, ಶಿವಾನಂದ ಮೇಳವಂಕಿ, ಸಂತೋಷ ತಿಪ್ಪಾ, ಶಂಕರ ಪಂಕಿ, ಮನೋಹರ ಕೆಂಪವಾಡ, ಆನಂದ ಮೆಕ್ಕಳಗೇರಿ, ಶಂಕರ ಮುಗಳಖೊಡ, ಪ್ರಕಾಶ ಬಾಡನವರ, ಗಣಪತಿ ಕೌಜಲಗಿ, ಅನುರಾಧ ಹನಗಂಡಿ, ಸವಿತಾ ಹುಕ್ಕೇರಿ ಸೇರಿ 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರುತಿ ನಿಗಡೆ ನಿರೂಪಿಸಿ ವಂದಿಸಿದರು.