ಸಿರಿಧಾನ್ಯ, ಸಾವಯವ ಉತ್ಪನ್ನ ಬಳಸಿ ಆರೋಗ್ಯವಂತರಾಗಿ: ಶಿವನಗೌಡ

| Published : Dec 09 2024, 12:45 AM IST

ಸಾರಾಂಶ

ಆಧುನಿಕ ಜೀವನ ಶೈಲಿಯಿಂದಾಗಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು ಇತ್ತಾದಿ ರೋಗಗಳು ಮನುಷ್ಯರನ್ನು ಹೆಚ್ಚು ಬಾಧಿಸುತ್ತಿವೆ. ಇವುಗಳಿಂದ ಹೊರಬಂದು ಸಿರಿಧಾನ್ಯ ಮತ್ತು ಸಾವಯುವ ಉತ್ಪನ್ನ ಬಳಸುವುದು ಅತಿಮುಖ್ಯವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಎಸ್. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಆಧುನಿಕ ಜೀವನ ಶೈಲಿಯಿಂದಾಗಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು ಇತ್ತಾದಿ ರೋಗಗಳು ಮನುಷ್ಯರನ್ನು ಹೆಚ್ಚು ಬಾಧಿಸುತ್ತಿವೆ. ಇವುಗಳಿಂದ ಹೊರಬಂದು ಸಿರಿಧಾನ್ಯ ಮತ್ತು ಸಾವಯುವ ಉತ್ಪನ್ನ ಬಳಸುವುದು ಅತಿಮುಖ್ಯವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಎಸ್. ಪಾಟೀಲ ಹೇಳಿದರು.ನಗರದ ಜಿಲ್ಲಾಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿರುವ ಕೆ.ಎಸ್.ಎಸ್.ಸಿ ಹಾಲ್‌ನಲ್ಲಿ ಭಾನುವಾರ ನಡೆದ ಸಿರಿಧಾನ್ಯ ಮತ್ತು ಸಾವಯುವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ೨೦೨೫ ಅಂಗವಾಗಿ ಜಿಲ್ಲಾಮಟ್ಟದಲ್ಲಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವು ಆರೋಗ್ಯ ಸಮತೋಲಕ್ಕೆ ಬಹುಮುಖ್ಯವಾಗಿವೆ. ಈ ಆಹಾರಗಳ ಲಾಭ, ಉಪಯುಕ್ತತೆ ಮತ್ತು ಬಳಕೆ ಕುರಿತು ವ್ಯಾಪಕ ಅರಿವು ಮುಡಿಸುವ ದಿಸೆಯಲ್ಲಿ ಈ ರೀತಿಯ ಸ್ಪರ್ಧೆಗಳು ಬಹಳಷ್ಟು ಪ್ರಯೋಜನಕಾರಿಯಾಗಿದ್ದು, ಸರ್ಕಾರ ಸಿರಿಧಾನ್ಯ ಮತ್ತು ಸಾವಯವ ಬೆಳೆಗಾರರಿಗೆ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.

ವಿಶೇಷ ಭೂಸ್ವಾಧೀನ ಅಧಿಕಾರಿ ರಾಜಶ್ರೀ ಜೈನಾಪೂರ, ಪಾರಂಪರಿಕ ಆಹಾರ ಪದ್ಧತಿ ನಶಿಸಿ ಹೋಗುತ್ತಿದ್ದು, ಅಳಿವಿನಂಚಿನಲ್ಲಿವೆ. ಪಾರಂಪರಿಕ ಆಹಾರ ಪದ್ಧತಿಗಳ ಪೌಷ್ಟಿಕಾಂಶದ ಮಹತ್ವ ಮತ್ತು ಅವುಗಳ ಪ್ರಯೋಜನವನ್ನು ಮುಂದಿನ ಪೀಳಿಗೆಗೆ ತಿಳಿಸಿ ಸಂಪ್ರದಾಯ ಕೊಂಡೊಯ್ಯುವುದು ಅಗತ್ಯವಾಗಿದೆ. ಜನರು ದಿನನಿತ್ಯದ ಜೀವನದಲ್ಲಿ ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳನ್ನು ಬಳಕೆ ಮಾಡುವುದರಿಂದ ಆರೋಗ್ಯದಜೊತೆಗೆ ರೈತರಿಗೂ ಉತ್ಸಾಹಿಸಿದಂತಾಗುತ್ತದೆ ಎಂದು ತಿಳಿಸಿದರು.

ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲ ತಾಲೂಕಿನಿಂದ ೮೦ ಜನ ಸ್ಪರ್ಧಿಗಳು ಭಾಗವಹಿಸಿದ್ದರು. ಸಿರಿಧಾನ್ಯ ಖಾರ ಖಾದ್ಯ ವಿಭಾಗದಲ್ಲಿ ರೂಪಾಂಜಲಿ ಭೋಸಲೆ ಪ್ರಥಮ, ವೀಣಾ ಗಜರೆ ದ್ವಿತೀಯ ಹಾಗೂ ಭಾವನಾ ಕಿತ್ತೂರಕರ ತೃತೀಯ ಸ್ಥಾನ ಪಡೆದರು. ಸಿರಿಧಾನ್ಯ ಸಿಹಿ ಖಾದ್ಯ ವಿಭಾಗದಲ್ಲಿ ಅನಿತಾ ಜೋಡಟ್ಟಿ ಪ್ರಥಮ, ವೈಷ್ಣವಿ ಹೆಬಸೂರ ದ್ವಿತೀಯ ಹಾಗೂ ಪೂಜಾ ಪಾಟೀಲ ತೃತೀಯ ಸ್ಥಾನ ಪಡೆದರು. ಮರೆತುಹೋದ ಖಾದ್ಯ ವಿಭಾಗದಲ್ಲಿ ಶೋಭಾ ದೇಯನ್ನವರ ಪ್ರಥಮ, ಸುನಂದಾ ಬನಹಟ್ಟಿ ದ್ವಿತೀಯ ಹಾಗೂ ಲತಾ ಪರವಿನಾಯ್ಕರ ತೃತೀಯ ಸ್ಥಾನ ಪಡೆದರು.

ಪ್ರತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹ ೫೦೦೦, ದ್ವಿತೀಯ ₹೩೦೦೦, ಮತ್ತು ತೃತೀಯ ₹೨೦೦೦ ಜೊತೆಗೆ ಪ್ರಮಾಣ ಪತ್ರ ವಿತರಿಸಲಾಯಿತು. ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ೨೦೨೫ ಜನವರಿ ೨೫ ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಬೆಳಗಾವಿ ವಿಭಾಗದ ಉಪಕೃಷಿ ನಿರ್ದೇಶಕ ಎಸ್.ಬಿ.ಕೊಂಗವಾಡ, ಚಿಕ್ಕೋಡಿ ವಿಭಾಗದ ಉಪಕೃಷಿ ನಿರ್ದೇಶಕ ಎಚ್.ಡಿ.ಕೋಳೆಕರ ಇತರರು ಪಾಲ್ಗೊಂಡಿದ್ದರು.