ಯೂರಿಯಾಕ್ಕಾಗಿ ರಾತ್ರಿಪೂರ್ತಿ ಅಂಗಡಿಗಳ ಮುಂದೆ ವಾಸ್ತವ್ಯ!

| Published : Jul 26 2025, 01:30 AM IST

ಸಾರಾಂಶ

ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆ ತೀವ್ರವಾಗಿದ್ದು, ರೈತರು ಪರದಾಡುತ್ತಿದ್ದಾರೆ. ಲಕ್ಷ್ಮೇಶ್ವರ ಪಟ್ಟಣದಲ್ಲಿ ಯೂರಿಯಾ ಗೊಬ್ಬರ ಪಡೆಯಲು ರೈತರು ರಾತ್ರಿಯಿಡೀ ಗೊಬ್ಬರದ ಅಂಗಡಿಗಳ ಮುಂದೆ ವಾಸ್ತವ್ಯ ಹೂಡಿದ್ದಾರೆ. ಚನ್ನಪಟ್ಟಣ, ಮುನಿಯನತಾಂಡೆ ಮತ್ತು ಸುತ್ತಮುತ್ತಲಿನ ರೈತರು ಚಳಿ ಲೆಕ್ಕಿಸದೆ, ರಾತ್ರಿಯೇ ತಮ್ಮ ಟ್ರ್ಯಾಕ್ಟರ್‌ಗಳನ್ನು ಗೊಬ್ಬರದ ಅಂಗಡಿಗಳ ಮುಂದೆ ನಿಲ್ಲಿಸಿ ಸಾಲುಗಟ್ಟಿ ನಿಂತಿದ್ದರು.

ಗದಗ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆ ತೀವ್ರವಾಗಿದ್ದು, ರೈತರು ಪರದಾಡುತ್ತಿದ್ದಾರೆ. ಲಕ್ಷ್ಮೇಶ್ವರ ಪಟ್ಟಣದಲ್ಲಿ ಯೂರಿಯಾ ಗೊಬ್ಬರ ಪಡೆಯಲು ರೈತರು ರಾತ್ರಿಯಿಡೀ ಗೊಬ್ಬರದ ಅಂಗಡಿಗಳ ಮುಂದೆ ವಾಸ್ತವ್ಯ ಹೂಡಿದ್ದಾರೆ. ಚನ್ನಪಟ್ಟಣ, ಮುನಿಯನತಾಂಡೆ ಮತ್ತು ಸುತ್ತಮುತ್ತಲಿನ ರೈತರು ಚಳಿ ಲೆಕ್ಕಿಸದೆ, ರಾತ್ರಿಯೇ ತಮ್ಮ ಟ್ರ್ಯಾಕ್ಟರ್‌ಗಳನ್ನು ಗೊಬ್ಬರದ ಅಂಗಡಿಗಳ ಮುಂದೆ ನಿಲ್ಲಿಸಿ ಸಾಲುಗಟ್ಟಿ ನಿಂತಿದ್ದರು.

ಪ್ರಸ್ತುತ ಒಬ್ಬ ರೈತರಿಗೆ ಕೇವಲ ಎರಡರಿಂದ ಮೂರು ಚೀಲ ಯೂರಿಯಾ ನೀಡಲಾಗುತ್ತಿದೆ. ನಿರಂತರ ಮಳೆಯಿಂದಾಗಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಒದಗಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಸಮರ್ಪಕವಾಗಿ ಗೊಬ್ಬರ ನೀಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಜಿಲ್ಲೆಯಾದ್ಯಂತ ಯೂರಿಯಾ ಗೊಬ್ಬರದ ಅಭಾವ ಮುಂದುವರಿದಿದ್ದು, ಬೆಳೆಗಳ ರಕ್ಷಣೆಗೆ ರೈತರು ಯೂರಿಯಾ ಗೊಬ್ಬರಕ್ಕೆ ಗೊಬ್ಬರದಂಗಡಿಗಳ ಮುಂದೆ ಸಾಲು ಗಟ್ಟಿ ನಿಂತರೂ ಸಿಗುತ್ತಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಸರ್ಕಾರ ಯೂರಿಯಾ ಗೊಬ್ಬರ ಸಮರ್ಪಕವಾಗಿ ಪೂರೈಸದಿದ್ದರೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ ಎಂದು ಹೇಳುತ್ತಿದ್ದಾರೆ.

ನಿರಂತರ ಮಳೆಗೆ ತೇವಾಂಶ ಹೆಚ್ಚಾಗಿ, ಬೆಳೆಗಳಿಗೆ ಹಳದಿ ರೋಗ ಬಾಧಿಸುತ್ತಿದೆ. ಗೋವಿನ ಜೋಳಕ್ಕೆ ಯೂರಿಯಾ ಗೊಬ್ಬರ ಬೇಕು. ಆದರೆ ಕೃಷಿ ಪತ್ತಿನ ಸಹಕಾರಿ ಸಂಘಗಳು, ಗೊಬ್ಬರದಂಗಡಿಗಳು ಒಬ್ಬ ರೈತರಿಗೆ 2 ಚೀಲ ಅದರೊಂದಿಗೆ ಲಿಂಕ್‌ ನೀಡಿ ನೀಡುತ್ತಿದ್ದಾರೆ. 2 ಚೀಲ ಯಾವುದಕ್ಕೆ ಸಾಲುತ್ತದೆ? ಉಳ್ಳವರಿಗಾದರೆ ಮನೆ ಬಾಗಿಲಿಗೆ ಗೊಬ್ಬರ ಪೂರೈಸುತ್ತಾರೆ, ನಮ್ಮಂತಹ ಸಣ್ಣ-ಪುಟ್ಟ ರೈತರಿಗೆ ಸರದಿ ಸಾಲಿನಲ್ಲಿ ನಿಂತು ರಾತ್ರಿಯೆಲ್ಲ ಕಾದರೂ ಗೊಬ್ಬರ ಸಿಗುವುದಿಲ್ಲ ಎಂದು ಆರೋಪಿಸಿದ್ದಾರೆ.

ರೈತರಿಗೆ ಅಗತ್ಯಕ್ಕೆ ಬೇಕಾದ ಯೂರಿಯಾ ಗೊಬ್ಬರ ಸಿಗುತ್ತಿಲ್ಲ, ಪ್ರತಿ ವರ್ಷ ಇದೆ ಕಥೆಯಾಯಿತು. ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ರೈತರನ್ನು ಸುಲಿಗೆ ಮಾಡುತ್ತಾರೆ. ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡುವ ಸರ್ಕಾರ, ರೈತರಿಗೆ ಅಗತ್ಯಕ್ಕೆ ತಕ್ಕಂತ ಬೀಜ, ಗೊಬ್ಬರ ಪೂರೈಸುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಬೇಕು. ಸಕಾಲದಲ್ಲಿ ಗೊಬ್ಬರ ಪೂರೈಸಿ ರೈತರ ಹಿತ ಕಾಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಗದಗ ನಗರದ ಪ್ರಧಾನಮಂತ್ರಿ ಕಿಸಾನ್‌ ಸಮೃದ್ಧಿ ಕೇಂದ್ರದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ನೂರಾರು ರೈತರು ಜಮಾಯಿಸಿದ್ದು, ಗಲಾಟೆ ಆಗದಂತೆ ತಡೆಯಲು ಪೊಲೀಸರು ರೈತರನ್ನು ಸರದಿಯಲ್ಲಿ ನಿಲ್ಲಿಸಿದರು.ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬಿತ್ತನೆಯಾಗಿದೆ. ಸದ್ಯ ಗೋವಿನಜೋಳಕ್ಕೆ ಯೂರಿಯಾ ಗೊಬ್ಬರ ಬೇಕು. ನಿರಂತರ ಮಳೆಯಿಂದ ಬೆಳೆಗಳಿಗೆ ಹಳದಿ ರೋಗ ಬಾಧಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಯೂರಿಯಾ ಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ. ಇದೆ ರೀತಿ ಮಳೆ ಮುಂದುವರಿದು ಗೊಬ್ಬರ ಸಿಗದಿದ್ದರೆ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವುದು ಕಷ್ಟ ಸಾಧ್ಯ. ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಸದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೇವೆ ಎಂದು ರೈತ ಸಂಘದ ತಾಲೂಕು ಗೌರವಾಧ್ಯಕ್ಷ ದೇವಪ್ಪ ಅಣ್ಣಿಗೇರಿ, ಕಾರ್ಯದರ್ಶಿ ಮಹಾಂತೇಶ ಗುಂಜಳ ಹೇಳಿದರು.