ಸ್ಟೀಲ್ ಕಸದ ಬುಟ್ಟಿಗಳು ನಾಪತ್ತೆ: ಲೋಕಾಯುಕ್ತಗೆ ದೂರು

| Published : Nov 17 2024, 01:19 AM IST

ಸಾರಾಂಶ

ಮಂಡ್ಯ ನಗರಸಭೆ ವತಿಯಿಂದ ೯.೩೫ ಲಕ್ಷ ರು. ವೆಚ್ಚದಲ್ಲಿ ೩೫ ವಾರ್ಡ್‌ಗಳಲ್ಲೂ ಸ್ಟೀಲ್ ಕಸದ ಬುಟ್ಟಿಗಳನ್ನು ಅಳವಡಿಸಿದ್ದು, ಅರ್ಧಕ್ಕಿಂತ ಹೆಚ್ಚು ಬುಟ್ಟಿಗಳು ಕಾಣೆಯಾಗಿವೆ. ಇದಕ್ಕೆ ಅಧಿಕಾರಿಗಳೇ ಹೊಣೆಗಾರರಾಗಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾರ್ವಜನಿಕ ವೇದಿಕೆ ತಾಲೂಕು ಅಧ್ಯಕ್ಷ ಶಿವಕುಮಾರ್ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರಸಭೆ ವತಿಯಿಂದ ೯.೩೫ ಲಕ್ಷ ರು. ವೆಚ್ಚದಲ್ಲಿ ೩೫ ವಾರ್ಡ್‌ಗಳಲ್ಲೂ ಸ್ಟೀಲ್ ಕಸದ ಬುಟ್ಟಿಗಳನ್ನು ಅಳವಡಿಸಿದ್ದು, ಅರ್ಧಕ್ಕಿಂತ ಹೆಚ್ಚು ಬುಟ್ಟಿಗಳು ಕಾಣೆಯಾಗಿವೆ. ಇದಕ್ಕೆ ಅಧಿಕಾರಿಗಳೇ ಹೊಣೆಗಾರರಾಗಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾರ್ವಜನಿಕ ವೇದಿಕೆ ತಾಲೂಕು ಅಧ್ಯಕ್ಷ ಶಿವಕುಮಾರ್ ದೂರು ನೀಡಿದ್ದಾರೆ.

೨೦೨೧-೨೨ನೇ ಸಾಲಿನ ೧೫ನೇ ಹಣಕಾಸಿನ ಯೋಜನೆಯ ಅನುದಾನದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಪ್ರದೇಶಗಳಲ್ಲಿ ಹಸಿಕಸ ಮತ್ತು ಒಣಕಸ ಸಂಗ್ರಹಿಸಲು ೧೦೦ ಲೀಟರ್ ಸಾಮರ್ಥ್ಯದ ಕಸದ ಸ್ಟೀಲ್ ಬುಟ್ಟಿಯನ್ನು ನಗರದ ೩೫ ವಾರ್ಡುಗಳ ಮುಖ್ಯ ರಸ್ತೆಗಳಲ್ಲಿ ೨೦೨೨ರ ಜೂ. ೮ ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ಅಂಗೀಕರಿಸಲಾಗಿದೆ.

ಬಳಿಕ ೩೫ ವಾರ್ಡ್‌ಗಳಲ್ಲಿ ಸುಮಾರು ೫೫ ಕಸದ ಬುಟ್ಟಿಗಳನ್ನು ಅಳವಡಿಸಲು ೯.೩೫ ಲಕ್ಷ ರು. ಟೆಂಡರ್ ಅನುಮೋದನೆಯಾಗಿದೆ. ಬಳಿಕ ನಗರಸಭೆ ಪರಿಸರ ಅಭಿಯಂತರರು ಕಸದ ಬುಟ್ಟಿಗಳನ್ನು ವ್ಯವಸ್ಥಿತವಾಗಿ ಅಳವಡಿಸದೆ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಒಂದು ಕಸದ ಬುಟ್ಟಿಗೆ ೧೭ ಸಾವಿರ ರು. ವೆಚ್ಚವಾಗುತ್ತದೆ ಎಂದು ದರ ನಮೂದಿಸಿದ್ದಾರೆ. ಆದರೆ, ಇದರ ನೈಜ ಬೆಲೆ ೧೦ ಸಾವಿರ ರು. ಗಳಾಗಿದ್ದು, ಕಸದ ಬುಟ್ಟಿ ಖರೀದಿಯಲ್ಲೂ ಅವ್ಯವಹಾರ ಆಗಿದೆ ಎಂದು ದೂರಿದರು.

ಅಧಿಕಾರಿಗಳ ಕರ್ತವ್ಯ ಲೋಪದಿಂದಾಗಿ ಅರ್ಧಕ್ಕಿಂತ ಹೆಚ್ಚು ಕಸದ ಬುಟ್ಟಿಗಳು ಕಣ್ಮರೆಯಾಗಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಿವಕುಮಾರ್ ಒತ್ತಾಯಿಸಿದ್ದಾರೆ.