ಹಂತ, ಹಂತವಾಗಿ ಸಮಸ್ಯೆ ಪರಿಹಾರ: ಟಿ.ಡಿ.ರಾಜಗಿರಿ

| Published : Aug 14 2025, 01:00 AM IST

ಸಾರಾಂಶ

ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂದೆ ಕಳೆದ 10 ದಿನಗಳಿಂದ ದಲಿತ ಸಮುದಾಯ ಮುಖಂಡ ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಳೆದ 10 ದಿನಗಳಿಂದ ತಾಲೂಕಿನ ಪರಶುರಾಮಪುರ ಹೋಬಳಿಯ ದೊಡ್ಡಬೀರನಹಳ್ಳಿ ಮತ್ತು ಕೋನಿಗರಹಳ್ಳಿ ಶೋಷಿತ ಸಮುದಾಯಗಳು ಈ ಹಿಂದೆ ದೌರ್ಜನ್ಯಕ್ಕೀಡಾಗಿದ್ದು ಸರ್ಕಾರದಿಂದ ನೀಡಿದ ಭರವಸೆಹಳು ಈಡೇರದ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಟಿ.ಡಿ.ರಾಜಗಿರಿ ನೇತೃತ್ವದಲ್ಲಿ ಆ.4ರಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ಧಿಷ್ಟಕಾಲ ಧರಣಿ ಸತ್ಯಾಗ್ರಹ ಕೈಗೊಂಡಿದ್ದು, ಬೇಡಿಕೆ ಈಡೇರುವ ತನಕ ಯಾವುದೇ ಕಾರಣಕ್ಕೂ ಮುಷ್ಕರವನ್ನು ಹಿಂಪಡೆಯುವುದಿಲ್ಲವೆಂಬ ಆತ್ಮವಿಶ್ವಾಸದೊಂದಿಗೆ ಧರಣಿಯನ್ನು ಕೈಗೊಂಡಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್, ಡಿವೈಎಸ್‌ಪಿ ಮುಂತಾದ ಅಧಿಕಾರಿಗಳು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದು ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡಿದ್ದರು. ಆದರೆ, ಕಳೆದ 12 ವರ್ಷಗಳಿಂದ ಸರ್ಕಾರ ನೀಡಿದ ಭರವಸೆ ಈಡೇರಿಸಿಲ್ಲ, ಆದ್ದರಿಂದ ಮುಷ್ಕರ ಅನಿವಾರ್ಯ ಎಂದು ಹೇಳಿದ್ದರು. ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕೋನಿಗರಹಳ್ಳಿ ಮತ್ತು ದೊಡ್ಡ ಬೀರನಹಳ್ಳಿ ಸರ್ವಣಿಯರಿಂದ ದೌರ್ಜನ್ಯಕ್ಕೊಳಗಾದ ದಲಿತ ಕುಟುಂಬಗಳ ಧರಣಿ ಸತ್ಯಾಗ್ರಹದ ಬಗ್ಗೆ ಮಾಹಿತಿ ಪಡೆದು ಖುದ್ಧಾಗಿ ಆಗಮಿಸಿ ಪ್ರತಿಭಟನಕಾರರೊಂದಿಗೆ ಕುಳಿತು ಸುರ್ಧೀಘವಾಗಿ ಭೇಡಿಕೆಗಳ ಬಗ್ಗೆ ಚರ್ಚೆ ನಡೆಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಟಿ.ಡಿ.ರಾಜಗಿರಿ, ಕಾನೂನಿನಲ್ಲಿ ಅವಕಾಶವಿದ್ದರೂ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು. ನಾವು ಸಹ ಸರ್ಕಾರದ ನಿಯಮದಡಿ ನಿಯಮಾನುಸಾರವಾಗಿ ಪರಿಹಾರ ಕೇಳುತ್ತಿದ್ದೇವೆ. ಶೋಷಿತರು ಮತ್ತು ಅವರ ಅವಲಂಭಿತ ಕುಟುಂಬಗಳು 1989ರ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಸಂಕಷ್ಟಕ್ಕೀಡಾದ ಎಲ್ಲಾ ಕುಟುಂಬಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಹೇಳಿದರು. ವಿಶೇಷವಾಗಿ ಕೋನಿಗರಹಳ್ಳಿ ಮತ್ತು ದೊಡ್ಡ ಬೀರನಹಳ್ಳಿ ಗ್ರಾಮಗಳಲ್ಲಿ ದೌರ್ಜನ್ಯಕ್ಕೀಡಾದ ಕುಟುಂಬಗಳಿಗೆ ಕನಿಷ್ಠಪಕ್ಷ ಮೂಲಭೂತ ಸೌಕರ್ಯಗಳನ್ನು ತಾಲೂಕು ಆಡಳಿತ ವಹಿಸಿಲ್ಲ, ಹಲವಾರು ಬಾರಿ ಮನವಿ ಮಾಡಿದರೂ ಸೂಕ್ತ ಸ್ಪಂದನೆ ಇಲ್ಲ. ನಿವೇಶನ, ಜಮೀನು, ಪ್ರತ್ಯೇಕ ನ್ಯಾಯಬೆಲೆ ಅಂಗಡಿ, ಗಂಗಾ ಕಲ್ಯಾಣವೂ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳಲ್ಲಿ ದೌರ್ಜನ್ಯಕೀಡಾದ ಕುಟುಂಬಗಳಿಗೆ ಮೊದಲ ಪ್ರಾಧ್ಯಾನ್ಯತೆ ನೀಡಿ ಸೌಲಭ್ಯಗಳನ್ನು ಕೂಡಲೇ ವಿತರಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಟಿ.ಡಿ.ರಾಜಗಿರಿ ಮಾತನಾಡಿ, ಜಿಲ್ಲಾಧಿಕಾರಿಗಳು ಸಾವಧಾನವಾಗಿ ಕುಳಿತು ಸಮಸ್ಯೆಗಳ ಬಗ್ಗೆ ನಮ್ಮೊಂದಿಗೆ ಸೌಹಾರ್ಥಿತವಾಗಿ ಚರ್ಚೆ ನಡೆಸಿದ್ದಾರೆ. ಶೋಷಿತ ಕುಟುಂಬಗಳಿಗೆ ಸರ್ಕಾರದಿಂದ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಹಂತ, ಹಂತವಾಗಿ ನೀಡುವ ಭರವಸೆ ನೀಡಿದ್ದಾರೆ. ನಮ್ಮೆಲ್ಲಾ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರ ಭೇಟಿ ನೀಡಿ ನಮಗೂ ಸಹ ವಿಶ್ವಾಸ ಬಂದಿದೆ. ಅವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಮುಷ್ಕರವನ್ನು ಇಂದಿನಿಂದಲೇ ನಿಮ್ಮೆಲ್ಲರ ಒಪ್ಪಿಗೆ ಪಡೆದು ಹಿಂಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮುದಾಯ ಪರವಾಗಿ ಯಾವುದೇ ಹೋರಾಟ ನಡೆದರೂ ತಾವೆಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಇದೇ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎಚ್.ಮಂಜುನಾಥ ಮಾತನಾಡಿದರು. ತಹಸೀಲ್ದಾರ್ ರೇಹಾನ್‌ ಪಾಷ, ಸಮಾಜ ಕಲ್ಯಾಣಾಧಿಕಾರಿ ದೇವ್ಲಾನಾಯ್ಕ, ಪೌರಾಯುಕ್ತ ಜಗರೆಡ್ಡಿ, ಎಇಇ ಕೆ.ವಿನಯ್, ಪರಿಸರ ಎಂಜಿನಿಯರ್ ನರೇಂದ್ರಬಾಬು, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ರಾಜೇಶ್, ಗ್ರಾಮ ಲೆಕ್ಕಾಧಿಕಾರಿ ಹಿರಿಯಪ್ಪ, ಪ್ರಕಾಶ್, ಪ್ರತಿಭಟನಕಾರರಾದ ತಿಮ್ಮಪ್ಪ, ಹರೀಶ್, ತಿಪ್ಪೇಸ್ವಾಮಿ, ರತ್ನಮ್ಮ, ಪವಿತ್ರಮ್ಮ, ಪಾರ್ವತಮ್ಮ ಮುಂತಾದವರು ಉಪಸ್ಥಿತರಿದ್ದರು.