ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬಾಲ ಕಾರ್ಮಿಕರು, ಚಿಂದಿ ಆಯುವ ಮಕ್ಕಳು, ಭಿಕ್ಷೆ ಬೇಡುವ, ಬಾಲ್ಯ ವಿವಾಹಕ್ಕೊಳಗಾದ, ಮನೆಯಿಂದ ತಪ್ಪಿಸಿಕೊಂಡ ಮಗು, ಜೈಲಿನಲ್ಲಿರುವ ತಂದೆ - ತಾಯಿ ಮಕ್ಕಳು, ಪ್ರೇಮ ಪ್ರಕರಣಕ್ಕೊಳಗಾದ ಮಕ್ಕಳು ಸೇರಿದಂತೆ 18 ವರ್ಷದೊಳಗಿನ ಅನಾಥ, ಏಕಪೋಷಕ, ಕುಟುಂಬಿಕ ಸಮಸ್ಯೆಗಳಿಂದ ಬಳಲಿದ ಮಕ್ಕಳ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಈಚೆಗೆ ನಡೆದ ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳಗಾವಿ ನಗರ ಮತ್ತು ಬೆಳಗಾವಿ ಜಿಲ್ಲಾ ವ್ಯಾಪ್ತಿಗೆ ಪ್ರತ್ಯೇಕವಾಗಿ ಎರಡು ಮಕ್ಕಳ ವಿಶೇಷ ಪೊಲೀಸ್ ಘಟಕಗಳು ಕಾರ್ಯ ನಿರ್ವಹಿಸುತ್ತವೆ. ತಮ್ಮ ವ್ಯಾಪ್ತಿಯಲ್ಲಿ ಕಾನೂನು ಸಂಘರ್ಷಕ್ಕೊಳಪಟ್ಟ ಮಕ್ಕಳು ಕಂಡು ಬಂದಲ್ಲಿ ಅಂತಹ ಮಕ್ಕಳನ್ನು ರಕ್ಷಣೆ ಮಾಡಿ ತಕ್ಷಣವೇ ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಬೇಕು ಎಂದು ಹೇಳಿದರು.
ಮಕ್ಕಳ ರಕ್ಷಣೆಯ ಬಳಿಕ ಅಗತ್ಯ ತನಿಖಾ ವರದಿ ಸಲ್ಲಿಸಬೇಕು. ಬಾಲ್ಯ ವಿವಾಹ, ಬಾಲಕಾರ್ಮಿಕ, ಶಿಕ್ಷಣದಿಂದ ವಂಚಿತ ಮಕ್ಕಳು ಇರುವುದು ಗಮನಕ್ಕೆ ಬಂದಲ್ಲಿ ಅಂತಹ ಮಕ್ಕಳನ್ನು ಅಗತ್ಯ ಕ್ರಮಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕು ಎಂದು ತಿಳಿಸಿದರು.ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಮಾತನಾಡಿ, ಕಳೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ರಚಿಸಿ ಸಭೆಗಳನ್ನು ನಡೆಸಲಾಗುತ್ತಿದೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಕಾಯ್ದೆ ಸೇರಿದಂತೆ ಮಕ್ಕಳ ರಕ್ಷಣೆಯ ಕಾಯ್ದೆಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮಿಷನ್ ವಾತ್ಸಲ್ಯ ಯೋಜನೆ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯೋಜನೆಗಳಾದ ಮುಖ್ಯಮಂತ್ರಿ ಬಾಲ ಸೇವಾ ಯೋಜನೆ, ಪ್ರಾಯೋಜಕತ್ವ ಯೋಜನೆ, ವಿಶೇಷ ಪಾಲನಾ ಯೋಜನೆ, ಉಪಕಾರ ಯೋಜನೆ, ಮಕ್ಕಳ ಕಲ್ಯಾಣ ಸಮಿತಿ, ಚೈಲ್ಡ್ ಲೈನ್ -1098, ಮಕ್ಕಳ ಪಾಲನಾ ಸಂಸ್ಥೆಗಳ ವರದಿಯ ಕುರಿತು ಪರಿಶೀಲನೆ ಮಾಡಿದರು.ಇದೇ ವೇಳೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪಿ. ಮುರುಳಿ ಮೋಹನ್ ರೆಡ್ಡಿ ಅವರು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ರಚಿಸಿದ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿಯ 30 ಅಂಶಗಳ ಮಾಹಿತಿ ಇರುವ ಪೋಸ್ಟರ್ ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪಿ. ಮುರಳಿ ಮೋಹನ ರೆಡ್ಡಿ, ಬೆಳಗಾವಿ ನಗರ ಪೊಲೀಸ್ ಅಪರಾಧ ವಿಭಾಗದ ಎಸಿಪಿ ಸದಾಶಿವ ಕಟ್ಟಿಮನಿ, ಜಿಪಂ ಯೋಜನಾ ನಿರ್ದೇಶಕ ಗಂಗಾಧರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ ಬಸವರಾಜ, ಕ್ರೀಡಾ ಇಲಾಖೆ ಉಪ ನಿರ್ದೇಶಕ ಬಿ.ಶ್ರೀನಿವಾಸ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.