ಕೆ.ಎಂ.ದೊಡ್ಡಿ ಪಟ್ಟಣದ ವೇಗವಾಗಿ ಬೆಳೆಯುತಿದ್ದು ಫುಟ್ ಪಾತ್ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ವಹಿವಾಟುಗಳನ್ನು ನಿಗದಿತ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳನ್ನು ನಿಗದಿತ ಸ್ಥಳದಲ್ಲಿ ನಿಲುಗಡೆಗೊಳಿಸದೆ ಎಲ್ಲೆಂದರೆ ಅಲ್ಲಿ ನಿಲ್ಲಿಸುತ್ತಿದ್ದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಅತಿ ವೇಗವಾಗಿ ಬೆಳೆಯುತ್ತಿರುವ ಕೆ.ಎಂ.ದೊಡ್ಡಿಯಲ್ಲಿ ಪಾದಚಾರಿಗಳು, ವಾಹನಗಳ ಸುಗಮ ಸಂಚಾರ, ರಸ್ತೆ ಬದಿ ವ್ಯಾಪಾರಗಳ ವಹಿವಾಟಿಗಾಗಿ ಗ್ರಾಮ ಪಂಚಾಯ್ತಿ ಮಾರ್ಗಸೂಚಿಗಳನ್ನು ನಿಗದಿ ಪಡಿಸಿದೆ ಎಂದು ಭಾರತೀನಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾ ತಿಳಿಸಿದರು.

ಮದ್ದೂರು- ಮಳವಳ್ಳಿ ಮುಖ್ಯರಸ್ತೆಯ ಎರಡೂ ಬದಿಯಲ್ಲಿ ಪೊಲೀಸ್ ಇನ್ನ್ ಪೆಕ್ಟರ್ ಅನಿಲ್ ಕುಮಾರ್ ಹಾಗೂ ಗ್ರಾಪಂ ಸದಸ್ಯರೊಂದಿಗೆ ಪಾದಚಾರಿ ಮಾರ್ಗ ತೆರವುಗೊಳಿಸಿ ಬಿಳಿಬಣ್ಣದ ಗೆರೆ ಎಳೆದು ಬೀದಿ ಬದಿ ವ್ಯಾಪಾರಸ್ಥರಿಗೆ ವಾಹನ ನಿಲುಗಡೆ ಮಾಡುವ ಸವಾರರಿಗೆ ಅರಿವು ಮೂಡಿಸಿ ಮಾತನಾಡಿದರು.

ಪಟ್ಟಣದ ವೇಗವಾಗಿ ಬೆಳೆಯುತಿದ್ದು ಫುಟ್ ಪಾತ್ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ವಹಿವಾಟುಗಳನ್ನು ನಿಗದಿತ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳನ್ನು ನಿಗದಿತ ಸ್ಥಳದಲ್ಲಿ ನಿಲುಗಡೆಗೊಳಿಸದೆ ಎಲ್ಲೆಂದರೆ ಅಲ್ಲಿ ನಿಲ್ಲಿಸುತ್ತಿದ್ದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂದರು.

ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆ.ಎಂ.ದೊಡ್ಡಿ ಪೊಲೀಸರೊಂದಿಗೆ ಜೊತೆಗೂಡಿ ಪಾದಚಾರಿ ಮಾರ್ಗಕ್ಕೆ (ಫುಟ್ ಪಾತ್ ) ಬಿಳಿಬಣ್ಣದ ಗೆರೆ ಎಳೆಯಲಾಗಿದೆ. ಬೀದಿಬದಿ ವ್ಯಾಪಾರಿಗಳು ದ್ವಿಚಕ್ರ ವಾಹನ ಸವಾರರು ಬಿಳಿ ಪಟ್ಟೆ ರಸ್ತೆಯ ಒಳಗೆ ವ್ಯಾಪಾರ ವಹಿವಾಟುಗಳನ್ನು ಹಾಗೂ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ಸೂಚಿಸಿದರು.

ಪೊಲೀಸ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮಾತನಾಡಿ, ಚಾಂಶುಗರ್ ಕಾರ್ಖಾನೆ, ಕಾಲೇಜು, ಆಸ್ಪತ್ರೆ ಒಳಗೊಂಡು ಪ್ರಮುಖ ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿದೆ. ಸಾರ್ವಜನಿಕರು ವ್ಯಾಪಾರ, ವಹಿವಾಟುಗಾಗಿ ಪಟ್ಟಣಕ್ಕೆ, ರೈತರು ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಲು, ಶಾಲಾ ಮಕ್ಕಳು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ತೋಂದರೆಯಾಗುತ್ತಿದೆ. ಸುಗಮ ಸಂಚಾರಕ್ಕಾಗಿ ಪುಟ್ ಪಾತ್ ತೆರವು ಕಾರ್ಯ ಆರಂಭಿಸಲಾಗಿದೆ ಎಂದರು.

ಬೀದಿಬದಿ ವ್ಯಾಪಾರಸ್ಥರು ಹಾಗೂ ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನ ದ ಸವಾರರು ಎಲ್ಲೆಂದರೆ ಅಲ್ಲಿ ವಾಹನ ನಿಲುಗಡೆ ಮಾಡಿದಾಗ ಸಂಚಾರಕ್ಕೆ ತೊಂದರೆಯಾಗಿ ಅಪಘಾತಗಳು ಸಂಭವಿಸಿವೆ. ಹೀಗಾಗಿ ಸಾರ್ವಜನಿಕರ ಹಿತ ಕಾಯಲು, ಸುಗಮ ಸಂಚಾರಕ್ಕಾಗಿ ಗ್ರಾಪಂ ಆಡಳಿತದೊಂದಿಗೆ ಬೀದಿಬದಿ ವ್ಯಾಪಾರಸ್ಥರು, ಪಾದಚಾರಿ ಮಾರ್ಗದಲ್ಲಿ ಕೆಲವು ಮಾರ್ಗಸೂಚಿಗಳನ್ನು ತರಲಾಗಿದೆ. ಇದಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.

ರಸ್ತೆ ಬದಿ ಪಾದಚಾರಿ ಮಾರ್ಗದಲ್ಲಿ ಆರು ಅಡಿಯಲ್ಲಿ ನಿಗದಿತ ಜಾಗದಲ್ಲಿ ಬಿಳಿ ಗೆರೆ ಎಳೆಯಲಾಗಿದೆ. ಬೀದಿ ಬದಿ ವ್ಯಾಪಾರಸ್ಥರು ನಿಗದಿತ ವಹಿವಾಟು, ದ್ವಿಚಕ್ರ ವಾಹನ ಸವಾರರು ವಾಹನ ನಿಲುಗಡೆ ಮಾಡಬೇಕು. ಬಿಳಿಪಟ್ಟೆ ಹೊರಭಾಗದಲ್ಲಿ ದ್ವಿಚಕ್ರವಾಹನ ನಿಲ್ಲಿಸಿದರೆ, ವ್ಯಾಪಾರಿಗಳು ವಹಿವಾಟು ನಡೆಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದಂಡ ವಿಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕರ ಸುಗಮ ಸಂಚಾರಕ್ಕೆ ಹಾಗೂ ಅಪಘಾತಗಳನ್ನು ತಡೆಯಲು ಗ್ರಾಪಂ ಮತ್ತು ಪೊಲೀಸ್ ಇಲಾಖೆ ತೆಗೆದುಕೊಂಡಿರುವ ಕ್ರಮಕ್ಕೆ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಅನಿತಾ ರಾಜಣ್ಣ, ಸದಸ್ಯರಾದ ಪುಟ್ಟರಾಮು, ಕೆ.ವಿ.ಶ್ರೀನಿವಾಸ್, ಕೆ.ಪಿ.ದೊಡ್ಡಿ ಸಿದ್ದರಾಜು, ವಕ್ರತುಂಡ ವೆಂಕಟೇಶ್, ಗುಡಿಗೆರೆ ಮಂಜುನಾಥ್, ಮಿಥುನ್, ಎಎಸ್ ಐ ವೆಂಕಟೇಶ್, ಸಿಬ್ಬಂದಿಗಳಾದ ಅರುಣ್ , ಚೇತನ್, ಶ್ರೀಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.