ಸಾರಾಂಶ
ರೋಣ: ಪಿಎಲ್‌ಡಿ ಬ್ಯಾಂಕ್ ಮೂಲಕ ರೈತರು ಪಡೆಯುವ ಸಾಲ ಸೌಲಭ್ಯ ಮಂಜೂರಾತಿಗೆ ಇನ್ನು ಮುಂದೆ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ, ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಶ್ರೀ ರಾಘವೇಂದ್ರ ಮಂಗಲ ಭವನದಲ್ಲಿ ಶುಕ್ರವಾರ ರೋಣ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ವಾರ್ಷಿಕ ಸರ್ವ ಸಾಧಾರಣಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಕ್ಷೇತ್ರ ಆರ್ಥಿಕವಾಗಿ ಸದೃಢವಾದಲ್ಲಿ ಮಾತ್ರ ರೈತರು ಪ್ರಗತಿ ಹೊಂದಲು ಸಾಧ್ಯ. ಶೀಘ್ರ ಸಾಲ ಮಂಜೂರಾತಿಯಾಗಬೇಕು ಎಂದು ಸಲ್ಲಿಸಿದ ರೈತರ ಬೇಡಿಕೆ ಸ್ಪಂದಿಸುವಲ್ಲಿ, ಸಾಲ ವಿತರಣೆ ವಿಳಂಬವಾಗದಂತೆ ಕ್ರಮ ವಹಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳ ಹಾಗೂ ಮುಖ್ಯಮಂತ್ರಿ ಗಮನಕ್ಕೂ ತರಲಾಗುವುದು ಎಂದರು.ಪ್ರಸಕ್ತ ವರ್ಷ ರೋಣ ಪಿಕಾರ್ಡ್ ಬ್ಯಾಂಕ್‌ಗೆ ₹1.15 ಕೋಟಿ ಬಂದಿದ್ದು, ಇದರಲ್ಲಿ ರೈತರು ಕುರಿ ಸಾಲ, ಟ್ರ್ಯಾಕ್ಟರ್ ಸಾಲ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯ ಪಡೆದು, ರೈತರು ಆರ್ಥಿಕವಾಗಿ ಸದೃಢರಾಗಬೇಕು. ರೈತರಿಗಾಗಿ ಇರುವ ಸರ್ಕಾರಿ ಸೌಲಭ್ಯಗಳ ಕುರಿತು ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಅರಿವು ಮೂಡಿಸಬೇಕು ಎಂದರು.
ಪಿಕಾರ್ಡ್ ಬ್ಯಾಂಕ್ ರಾಜ್ಯ ಉಪಾಧ್ಯಕ್ಷ ಯು.ಟಿ. ದಾಸನೂರ ಮಾತನಾಡಿ, ರೈತರು ಯಾವುದೇ ಸಾಲ ಸೌಲಭ್ಯ ತೆಗೆದುಕೊಳ್ಳಬೇಕಾದಲ್ಲಿ, ಸಾಲದ ಹಣವು ರೈತರ ಖಾತೆಗೆ ನೇರವಾಗಿ ಜಮಾ ಮಾಡುವಂತೆ ನಬಾರ್ಡ್ ನಿರ್ದೇಶನವಿದೆ. ಸಹಕಾರ ಎಂಬ ತತ್ವ ಹುಟ್ಟಿದ್ದು ಗದಗ ಜಿಲ್ಲೆ ಕನಗಿನಹಾಳದಲ್ಲಿ. ಸಿದ್ದನಗೌಡ ಪಾಟೀಲ ಅವರ ಶ್ರಮ ಅಪಾರವಿದೆ. ಅವರು ಕಟ್ಟಿದ ಸಹಕಾರ ಸಂಘಗಳನ್ನು ನಾವು ಉಳಿಸಿ, ಬೆಳೆಸಬೇಕು. ಸಹಕಾರ ಸಂಘಕ್ಕೆ 100 ವರ್ಷ ಇತಿಹಾಸವಿದೆ. ಇಂತಹ ಬ್ಯಾಂಕ್‌ನ್ನು ವಿಲೀನ ಮಾಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ಇದನ್ನು ನಾವೆಲ್ಲರೂ ಹೋರಾಟ ಮಾಡಿ ತಡೆಯುವಲ್ಲಿ ಯಶಸ್ವಿಯಾದೆವು. ಸಹಕಾರ ಸಂಘಗಳ ಬೆಳವಣಿಗೆಗೆ ರೈತರ ಪಾತ್ರ ಪ್ರಮುಖವಾಗಿದ್ದು, ಪಡೆದ ಸಾಲ ಸಕಾಲಕ್ಕೆ ತುಂಬಬೇಕು ಎಂದರು.ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಎ.ಆರ್. ಮಲ್ಲನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಮೇಶ ಪಲ್ಲೇದ, ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಿಥುನ ಪಾಟೀಲ, ಬಸವರಾಜ ನವಲಗುಂದ, ಸಂಗಪ್ಪ ಮೆಣಸಿನಕಾಯಿ, ಬಿ.ಎಸ್. ಕರಿಗೌಡ್ರ, ವೀರಣ್ಣ ಶೆಟ್ಟರ್, ವಿ.ಆರ್. ಗುಡಿಸಾಗರ, ರವಿ ಸಂಗನಬಶೆಟ್ಟರ, ಮಂಜುಳಾ ಹುಲ್ಲಣ್ಣವರ, ರೂಪಾ ಅಂಗಡಿ, ಸುವರ್ಣಾ ಪರಡ್ಡಿ, ಅಂದಪ್ಪ ಬಿಚ್ಚೂರ, ಮಹಾದೇವಗೌಡ ಪಾಟೀಲ, ಪರಶುರಾಮ ಅಳಗವಾಡಿ, ಶರಣಯ್ಯ ಮಾಸಗಟ್ಟಿ ಉಪಸ್ಥಿತರಿದ್ದರು. ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ ಸ್ವಾಗತಿಸಿದರು. ಅಶೋಕ ಜಿಗಳೂರ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್ ವ್ಯವಸ್ಥಾಪಕ ನೀಲಪ್ಪ ಹರಿಜನ ವಂದಿಸಿದರು.