ಇಂದಿರಮ್ಮನ ಕೆರೆ ಪ್ರವಾಸಿ ತಾಣವಾಗಿ ರೂಪಿಸಲು ಕ್ರಮ

| Published : Aug 22 2025, 01:00 AM IST

ಸಾರಾಂಶ

ಇಂದಿರಮ್ಮನ ಕೆರೆ ಸುತ್ತಮುತ್ತ ಹಸಿರು, ಬೆಟ್ಟಗುಡ್ಡಗಳಿವೆ. ನಿತ್ಯ ನೀರು ಇರುವುದರಿಂದ ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಯ ಪ್ರವಾಸಿಗರು ಇಲ್ಲಿಯ ಪರಿಸರ ಸೌಂದರ್ಯ ಸವಿಯಲು ಇಲ್ಲಿಗೆ ಬರುತ್ತಾರೆ. ಅವರಿಗೆ ಕುಳಿತುಕೊಳ್ಳಲು ಆಸನಗಳು, ಕುಡಿಯುವ ನೀರು, ಎತ್ತರದಲ್ಲಿ ಗೋಪುರ ನಿರ್ಮಿಸಿ, ವ್ಯೂ ಪಾಯಿಂಟ್ ಮಾಡಬೇಕು.

ಅಳ್ನಾವರ: ತಾಲೂಕಿನ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಕೆರೆಯು ಕೋಡಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಗುರುವಾರ ಬಾಗಿನ ಅರ್ಪಿಸಿದ ಅವರು, ಇಂದಿರಮ್ಮನ ಕೆರೆ ಸುತ್ತಮುತ್ತ ಹಸಿರು, ಬೆಟ್ಟಗುಡ್ಡಗಳಿವೆ. ನಿತ್ಯ ನೀರು ಇರುವುದರಿಂದ ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಯ ಪ್ರವಾಸಿಗರು ಇಲ್ಲಿಯ ಪರಿಸರ ಸೌಂದರ್ಯ ಸವಿಯಲು ಇಲ್ಲಿಗೆ ಬರುತ್ತಾರೆ. ಅವರಿಗೆ ಕುಳಿತುಕೊಳ್ಳಲು ಆಸನಗಳು, ಕುಡಿಯುವ ನೀರು, ಎತ್ತರದಲ್ಲಿ ಗೋಪುರ ನಿರ್ಮಿಸಿ, ವ್ಯೂ ಪಾಯಿಂಟ್ ಮಾಡಬೇಕು. ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಗ್ರಾಮಸ್ಥರು ಆಗ್ರಹಿಸಿದ್ದು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಹೂಲಿಕೇರಿ ಗ್ರಾಮಸ್ಥರು, ಗ್ರಾಮದ ಎರಡು ಹಳ್ಳಗಳು ಹರಿಯುವ ಸ್ಥಳದಲ್ಲಿ ಗ್ರಾಮದ ರೈತರು ಹೊಲ, ಮನೆಗಳಿಗೆ ದಿನನಿತ್ಯ ಹೋಗಿ ಬರಲು ಅನುಕೂಲವಾಗುವಂತೆ ಕಿರು ಸೇತುವೆಯನ್ನು ನಿರ್ಮಿಸಲು ಅಹವಾಲು ನೀಡಿದರು.

ಗ್ರಾಮ ವ್ಯಾಪ್ತಿಯಲ್ಲಿ ಇರುವ ಗೋಮಾಳ ಭೂಮಿಯನ್ನು ಕೆಲವರು ಒತ್ತುವರಿ ಮಾಡಿ, ಬಿತ್ತನೆ ಮಾಡುತ್ತಿದ್ದಾರೆ. ಕೆಲವರು ತಂತಿಬೇಲಿ ಸಹ ಹಾಕಿಕೊಂಡಿದ್ದಾರೆ. ಈ ಭಾಗದ ಗೌಳಿ ಜನರಿಗೆ, ಗ್ರಾಮದ ಭೂ ರಹಿತ ಜನರಿಗೆ ಅವರ ಗೋವು, ದನಕರು ಮೇಯಿಸಲು ಭೂಮಿ ಇಲ್ಲದಂತಾಗಿದೆ. ತಕ್ಷಣ ಗೋಮಾಳ ಭೂಮಿ ಸಮೀಕ್ಷೆ ಮಾಡಿ, ಒತ್ತುವರಿ ತೆರವುಗೊಳಿಸಬೇಕು ಎಂದು ಗೌಳಿ ಸಮುದಾಯದವರು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕಾಳಜಿ ಮತ್ತು ಅನುದಾನದಿಂದ ಇಂದಿರಮ್ಮನ ಕೆರೆ ಸುಂದರವಾಗಿ ರೂಪುಗೊಂಡಿದೆ. ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ₹9 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಸಚಿವರು ₹6 ಕೋಟಿ ವೆಚ್ಚದಲ್ಲಿ ನೀರಾವರಿಗಾಗಿ ಕಾಲುವೆ ನಿರ್ಮಿಸಲಾಗಿದೆ. ಗ್ರಾಮಸ್ಥರ ಬೇಡಿಕೆಯಂತೆ ಸಚಿವರ ಗಮನಕ್ಕೆ ತಂದು ಕಿರು ಸೇತುವೆ ನಿರ್ಮಿಸಲು ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸರ್ಕಾರಿ ಭೂಮಿ, ಗೋಮಾಳ ಭೂಮಿ ಒತ್ತುವರಿ ಮಾಡವುದನ್ನು ಸರ್ಕಾರ ನಿಷೇಧಿಸಿದೆ. ಆದರೆ, ಗ್ರಾಮದಲ್ಲಿ ಗೋಮಾಳ ಭೂಮಿ ಒತ್ತುವರಿ ಆಗಿರುವ ಕುರಿತು ಗ್ರಾಮಸ್ಥರು ದೂರು ಸಲ್ಲಿಸಿದ್ದು, ಶೀಘ್ರವಾಗಿ ಇದನ್ನು ಪರಿಶೀಲಿಸಿ, ಒತ್ತುವರಿ ತೆರವುಗೊಳಿಸಲು ತಹಶೀಲ್ದಾರ್ ಅವರು ಕ್ರಮ ಕೈಗೊಂಡು ತಮಗೆ ವರದಿ ಸಲ್ಲಿಸುವಂತೆ ಸೂಚಿಸಿದರು.

ಅಳ್ನಾವರ ತಹಸೀಲ್ದಾರ್ ಬಸವರಾಜ ಬೆಣ್ಣಿಶಿರೂರ, ಕ್ಷೇತ್ರಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ತಾಪಂ ಇಓ ಪ್ರಶಾಂತ ತುರಕಾಣಿ, ಅಳ್ನಾವರ ಪಪಂ ಮುಖ್ಯಾಧಿಕಾರಿ ಪ್ರಕಾಶ ಮಗದುಮ್ಮ, ಹಿರಿಯರಾದ ಬಸವರಾಜ ಇನಾಮದಾರ, ಶಿವಾಜಿ ಡೊಳ್ಳಿನ, ಮಲ್ಲಿಕಾರ್ಜುನ ಕಲ್ಲೂರ, ರಮೇಶ ಕಿತ್ತೂರ, ಸುಶೀಲಾ ಟೋಪಣವರ, ಕುಶಾ ಕಿತ್ತೂರ, ಗೀತಾ ಜಿನ್ನಪ್ಪಗೋಳ, ನೇತ್ರಾನಂದ ಬೆಳಗಾವಿ, ಈರಣ್ಣಾ ಕಲ್ಲೂರ, ರವಿ ಬೇಕ್ವಾಡಕರ ಇದ್ದರು.