ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳು ಸಮರ್ಪಕವಾಗಿ ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಮುಂಗಾರು ಹಂಗಾಮಿನ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜನವರಿಯಿಂದ ಜೂನ್ ವರೆಗೆ ವಾಡಿಕೆಯಂತೆ 93.8 ಎಂಎಂ ಮಳೆ ಆಗಬೇಕಿತ್ತು. ಆದರೆ, 101 ಎಂ.ಎಂ ಮಳೆ ಆಗಿರುತ್ತದೆ. ಬಾದಾಮಿ, ಮುಧೋಳ, ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಹೆಚ್ಚಿಗೆ ಮಳೆಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 85 ಸಾವಿರ ಹೆಕ್ಟೆರ್ ನಷ್ಟು ಕಬ್ಬು ಹಾಗೂ ಇತರೆ ಬೆಳೆಗಳ ಬಿತ್ತನೆ ಆಗಿರುತ್ತದೆ. ಇನ್ನು ಬಿತ್ತನೆ ಮಾಡದ ರೈತರು ಸಮರ್ಕವಾಗಿ ಮಳೆ ಆಗುವವರೆಗೆ ಬಿತ್ತನೆ ಕಾರ್ಯ ಮಾಡಬಾರದೆಂದರು.
ಬೀಜ ಮತ್ತು ರಸಗೊಬ್ಬರ ಮಾರಾಟಗಾರರು ನಿಗದಿತ ದರದಲ್ಲಿಯೇ ವಿತರಿಸಬೇಕು. ಕೃತಕ ಅಭಾವ ಸೃಷ್ಟಿಸುವುದು, ಹೆಚ್ಚಿನ ದರ ವಸೂಲಿ ಮಾಡುವುದು ಅಥವಾ ಕಳಪೆ ಗುಣಮಟ್ಟದ ಕೃಷಿ ಪರಿಕಗಳನ್ನು ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು ನಿರಂತರವಾಗಿ ಪರಿಶೀಲನೆ ನಡೆಸಿ, ರೈತರಿಗೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕೆಂದರು. ಮಳೆ ವಿಳಂಬವಾದಲ್ಲಿ ಪರ್ಯಾಯ ಯೋಜನೆಯಲ್ಲಿ ತಿಳಿಸಿದ ಬೇಸಾಯ ಕ್ರಮಗಳನ್ನು ಅನುಸರಿಸಲು ತಿಳಿಸಿದರು. ಅಲ್ಲದೇ ತೋವಿವಿಯ ಸಹ ಸಂಶೋಧನಾ ನಿರ್ದೇಶಕ ಡಾ.ವಸಂತ ಗಾಣಗೇರ ಅವರು ವಿವಿಧ ಬೆಳೆಯ ತಳಿಗಳ ಬಗ್ಗೆ ಮಾಹಿತಿ ನೀಡಿದರು.ರಸಗೊಬ್ಬರ ಸರಬರಾಜು ಮಾಡುತ್ತಿರುವ ಇಪ್ಕೋ, ಐ.ಪಿ.ಸಿ ಹಾಗೂ ಸಿಐಎಲ್ ಕಂಪನಿಗಳು ರೈಲ್ವೆ ಮೂಲಕ ಬಾಗಲಕೋಟೆಯಲ್ಲಿ ರಸಗೊಬ್ಬರ ಇಳಿಸದೇ ವಿಜಯಪುರದಲ್ಲಿ ಇಳಿಸುತ್ತಿರುವುದರಿಂದ ಅಲ್ಲಿಂದ ತಾಲೂಕಾವಾರು ಸರಬರಾಜಿಗೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದಾಗ ಬಾಗಲಕೋಟೆ ಮೂಲಕವೇ ವಿಜಯಪೂರಕ್ಕೆ ಗೂಡ್ಸ್ ರೈಲು ಹೋಗುತ್ತಿರುವುದರಿಂದ ಬಾಗಲಕೋಟೆಯಲ್ಲಿ ಗೊಬ್ಬರ ಇಳಿಸಲು ಕ್ರಮಕೈಗೊಳ್ಳಲು ವಿವಿಧ ಕಂಪನಿ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಖೇತ ಬಚಾವೋ ಅಭಿಯಾನದ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ತಿಳಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟೆ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಎಸ್.ಎಂ.ಕೋರೆ, ಜಮಖಂಡಿ ವಿಭಾಗದ ಕೃಷಿ ಉಪನಿರ್ದೇಶಕಿ ಮಂಜುಳಾ ಬಸವರೆಡ್ಡಿ, ಮಾರ್ಕೆಂಟಿಂಗ್ ಫೆಡರೇಷನ್ ಅಧಿಕಾರಿ ಸುಪ್ರಿಯಾ ಸೇರಿದಂತೆ ಆಯಾ ತಾಲೂಕಿನ ಕೃಷಿ ಅಧಿಕಾರಿಗಳು ಹಾಗೂ ರಸಗೊಬ್ಬರ ಸರಬರಾಜು ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇರುವುದಿಲ್ಲ. ಅಗತ್ಯ ದಾಸ್ತಾನು ಲಭ್ಯವಿರುತ್ತದೆ. ವಿವಿಧ ಬಿತ್ತನೆ ಬೀಜಗಳಿಗೆ 7,128 ಕ್ವಿಂಟಾಲ್ ಬೇಡಿಕೆ ಇದ್ದು, ಈ ಪೈಕಿ 3580 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಆಗಿದೆ. 1,319 ಕ್ವಿಂಟಾಲ್ ನಷ್ಟು ವಿತರಿಸಲಾಗಿದೆ. 2,261 ಕ್ವಿಂಟಲದ ನಷ್ಟು ಇದೆ. ವಿವಿಧ ರಸಗೊಬ್ಬರ ಸೇರಿ ಒಟ್ಟು 55,711 ಮೆ.ಟನ್ ಬೇಡಿಕೆ ಪೈಕಿ 26,463 ಮೆ.ಟನ್ ಹಂಚಿಕೆಯಾಗಿದೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಆರ್.ಎಸ್.ಕೆಗಳಲ್ಲಿ ರೈತರಿಗೆ ವ್ಯವಸ್ಥಿತವಾಗಿ ವಿತರಣೆಗೆ ಕ್ರಮಕೈಗೊಳ್ಳಬೇಕು. ಯಾವ ಯಾವ ಬೆಳೆಗೆ ಯಾವ ಯಾವ ಗೊಬ್ಬರವನ್ನ ಎಷ್ಟು ಹಾಕಬೇಕು ಎಂಬುದರ ಬಗ್ಗೆ ಮಾಹಿತಿ ಬೋರ್ಡ ಹಾಕಿ ರೈತರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು.
-ಸಂಗಪ್ಪ, ಜಿಲ್ಲಾಧಿಕಾರಿ ಬಾಗಲಕೋಟೆ