19 ಗ್ರಾಮಗಳಿಗೆ ನಿರಂತರ ನೀರು ಪೂರೈಕೆಗೆ ಕ್ರಮ: ಜಿಪಂ ಸಿಇಒ

| Published : Aug 05 2025, 11:49 PM IST

ಸಾರಾಂಶ

ಜಲ ಜೀವನ್‌ ಮಿಷನ್‌ ಯೋಜನೆ ಹಾಗೂ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯಕ್ರಮದಲ್ಲಿ ನಿರಂತರ ನೀರು ಪೂರೈಸುವ ನಿಟ್ಟಿನಲ್ಲಿ 19 ಗ್ರಾಮಗಳನ್ನು ದಿನದ 24 ಗಂಟೆ ನೀರು ಪೂರೈಕೆಗೆ ಫೈಲೆಟ್ ಬೇಸ್ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಲ ಜೀವನ್‌ ಮಿಷನ್‌ ಯೋಜನೆ ಹಾಗೂ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯಕ್ರಮದಲ್ಲಿ ನಿರಂತರ ನೀರು ಪೂರೈಸುವ ನಿಟ್ಟಿನಲ್ಲಿ 19 ಗ್ರಾಮಗಳನ್ನು ದಿನದ 24 ಗಂಟೆ ನೀರು ಪೂರೈಕೆಗೆ ಫೈಲೆಟ್ ಬೇಸ್ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ತಿಳಿಸಿದರು.

ಗದ್ದನಕೇರಿ ಹತ್ತಿರವಿರುವ ಕಂಠಿ ರೇಸಾರ್ಟ್‌ನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು ಹಾಗೂ ವಾಟರ್‌ಮನ್‌ಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ದಿನದ 24 ಗಂಟೆಗಳ ಕಾಲ ನೀರು ಪೂರೈಸುವ ಯೋಜನೆ ರೂಪಿಸಲು ಬೇಕಾದ ರೂಪು ರೇಷೆಗಳನ್ನು ಫೀಡ್‌ಬ್ಯಾಕ್‌ ಫೌಂಡೇಶನ್‌ ಮೂಲಕ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ತರಬೇತಿ ಕಾರ್ಯಾಗಾರದಲ್ಲಿ 19 ಗ್ರಾಮಗಳಿಗೆ ಸಂಬಂಧಪಟ್ಟ ಅಧ್ಯಕ್ಷರು, ವಿಡಬ್ಲುಎಸ್‌ಸಿ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸೆಕ್ಷನ್ ಅಧಿಕಾರಿಗಳು, ಪಂಚಾಯಿತಿ ಅಬಿವೃದ್ಧಿ ಅಧಿಕಾರಿಗಳು ಹಾಗೂ ವಾಟರ್ ಮನ್‌ಗಳು ಮತ್ತು ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಅವರಿಗೆ ತರಬೇತಿ ನೀಡಿ ಮುಂಬರುವ ದಿನಗಳಲ್ಲಿ 19 ಜಲಜೀವನ್‌ ಮಿಷನ್ ಕಾಮಗಾರಿಗಳನ್ನು 24*7 ನೀರು ಪೂರೈಕೆ ಮಾಡಲು ಆಯ್ದುಕೊಂಡು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ದಿನದ 24 ಗಂಟೆ ನೀರು ಪೂರೈಕೆ ಮಾಡಲು ಆದಷ್ಟು ಬೇಗನೆ ಎಲ್ಲ ನಲ್ಲಿಗಳಲ್ಲಿ ಟ್ಯಾಪ್‌ ಕನೆಕ್ಷನ್‌ ಮಾಡುವುದು, ಸೋರುವಿಕೆ ಆಗದಂತೆ ನೋಡಿಕೊಳ್ಳುವುದು, ಬೈಪಾಸ್ ಆಗುವುದನ್ನು ತಡೆಗಟ್ಟಿ ಓಎಚ್ ಪಿ ಮೂಲಕ ನೀರು ಸರಬರಾಜು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಫೀಡ್‌ ಬ್ಯಾಕ್ ಫೌಂಡೇಶನ್‌ ಸಿಇಒ ಅಜಯ್ ಸಿನ್ಹಾ ಅವರು 24/7 ನೀರು ಸರಬರಾಜು ಮಾಡಲು ಅನುಸರಿಸಬೇಕಾದ ಎಲ್ಲ ಹಂತಗಳನ್ನು ಬಹು ವಿಸ್ತೃತವಾಗಿ ತಿಳಿಸಿಕೊಟ್ಟರು. ಸಮುದಾಯದ ಸಹಭಾಗಿತ್ವ, ಎದುರಿಸಬೇಕಾದ ಸವಾಲುಗಳು, ಇಲಾಖೆ ಹಾಗೂ ಸಿಬ್ಬಂದಿ ಕರ್ತವ್ಯ ಮತ್ತು ಪಾಲ್ಗೊಳ್ಳುವ ರೀತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಮನದಟ್ಟು ಮಾಡಿದರು.

24/7 ನೀರು ಸರಬರಾಜು ಗ್ರಾಮಗಳನ್ನಾಗಿ ಪರಿವರ್ತಿಸುವುದರಿಂದ ಆಗಬಹುದಾದ ಪ್ರಯೋಜನಗಳ ಕುರಿತು ತಿಳಿಸಿದರು. ಬೇಡಿಕೆ ಪೂರೈಕೆ, ಅದಾಯ, ಖರ್ಚು ಹಾಗೂ ಸಹಭಾಗಿದಾರರ ಜವಾಬ್ದಾರಿಗಳ ಬಗ್ಗೆ ಉದಾಹರಣೆ ಮೂಲಕ ವಿವರಿಸಿದರು. ಪ್ರತಿ ಗ್ರಾಮದಲ್ಲಿ ಸಮುದಾಯ ಸಭೆಗಳನ್ನು ನಡೆಸಿ ಜನರ ಮನಃ ಪರಿವರ್ತನೆ ಮಾಡುವುದು ಸಹ ಪ್ರಮುಖ ವಿಷಯ ಎಂದು ತಿಳಿಸಿದರು. 15 ಗ್ರಾಪಂಗಳನ್ನ ಸೇರಿಸಿಕೊಂಡು ವ್ಯಾಟ್ಸಾಪ್‌ ಗ್ರುಪ್‌ ಮಾಡಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಖ್ಯಲೆಕ್ಕ ಅಧೀಕ್ಷಕ ಸಿದ್ದರಾಮೇಶ್ವರ ಉಕ್ಕಲಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಆಕಾಶ್ ಇತರರು ಉಪಸ್ಥಿತರಿದ್ದರು.