ಸಾರಾಂಶ
ಬೈಲೂರಿನಲ್ಲಿ ನಡೆದ ಸಚಿವ ಮಂಕಾಳ ವೈದ್ಯರ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಸಚಿವರ ಮುಂದೆ ತೆರೆದಿಟ್ಟು ಪರಿಹಾರಕ್ಕೆ ಆಗ್ರಹಿಸಿದರು.
ಭಟ್ಕಳ:
ಬೈಲೂರಿನಲ್ಲಿ ನಡೆದ ಸಚಿವ ಮಂಕಾಳ ವೈದ್ಯರ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಸಚಿವರ ಮುಂದೆ ತೆರೆದಿಟ್ಟು ಪರಿಹಾರಕ್ಕೆ ಆಗ್ರಹಿಸಿದರು. ಸಭೆಯಲ್ಲಿ ಮಾದೇವ ನಾಯ್ಕ ಎನ್ನುವರು ಬೈಲೂರಿನಲ್ಲಿ ಪ್ರವಾಸೋದ್ಯಮ ಬೆಳೆಸಿ ಯುವಕ, ಯುವತಿಯರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಕುಂಬಾರಕೇರಿಯಲ್ಲಿ ದಾರಿ ವ್ಯವಸ್ಥೆ ಅಗತ್ಯದ ಬಗ್ಗೆ ತಿಳಿಸಲಾಯಿತು. ಅದರಂತೆ ಮಾಲ್ಕಿ ಜಾಗದಲ್ಲಿ ಹೈಟೆಕ್ಷನ್ ವಿದ್ಯುತ್ ಲೈನ್ ಹಾದು ಹೋಗಿರುವುದರಿಂದ ಬೆಳೆ ಬೆಳೆಯಲು ತೊಂದರೆಯಾಗುತ್ತಿದ್ದು, ಇದನ್ನು ತೆರವುಗೊಳಿಸಿ ಬೇರೆಡೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಲಾಯಿತು.ಸರಸ್ವತಿ ನದಿಗೆ ಮತ್ತು ಮಡಿಕೇರಿ ನಾಲಾಕ್ಕೆ ಎರಡೂ ಬದಿಗೆ ಪಿಚ್ಚಿಂಗ್ ನಿರ್ಮಿಸಲು ಆಗ್ರಹಿಸಲಾಯಿತು. ಗ್ರಾಮದಲ್ಲಿ ರುದ್ರಭೂಮಿ ನಿರ್ಮಾಣಕ್ಕೂ ಒತ್ತಾಯಿಸಲಾಯಿತು. ಮನೆ ನಿರ್ಮಿಸಿಕೊಳ್ಳುವಾಗ ಬೋಜಾ ದಾಖಲಿಸುವ ವಿಷಯ ಪ್ರಸ್ತಾಪವಾದಾಗ ಸಚಿವರು, ಸರ್ಕಾರದ ಯಾವುದೇ ಮನೆ ನಿರ್ಮಾಣಕ್ಕೂ ಬೋಜಾ ದಾಖಲಿಸುವುದು ಅಗತ್ಯವಿಲ್ಲ. ಹಿಂದೆ ಸರ್ಕಾರ ನೀಡಿದ ಮನೆಯ ಹಣ ಪಾವತಿಸಬೇಕಿತ್ತು. ಆದರೆ ಇದೀಗ ಮನೆಯ ನಿರ್ಮಾಣದ ಹಣ ಸರ್ಕಾರಕ್ಕೆ ಮರುಪಾವತಿ ಇಲ್ಲವಾಗಿದೆ. ಉಚಿತವಾಗಿ ಮನೆ ನೀಡುತ್ತಿದೆ ಎಂದರು.
ಕಡಲ ತೀರದಲ್ಲಿರುವ ಮನೆಗಳಿಗೆ ಪಟ್ಟಾ ದೊರಕಿಸಿಕೊಡಬೇಕು ಎಂದು ಸಾರ್ವಜನಿಕರು ಸಚಿವರನ್ನು ಒತ್ತಾಯಿಸಿದಾಗ ಸಚಿವರು ಪಟ್ಟಾ ದೊರಕಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅದಲ್ಲದೇ ಕಾರವಾರದಿಂದ ಮಂಗಳೂರು ವರೆಗಿನ 320 ಕಿಮಿ ಕಡಲತೀರದಲ್ಲಿ ಸಿ ಆರ್ ಝೆಡ್ ನಿಯಮ ಸಡಿಲಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.ಗ್ರಾಮದಲ್ಲಿ ರಸ್ತೆ, ಬೀದಿ ದೀಪ, ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು ಮುಂತಾದ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಒತ್ತಾಯಿಸಲಾಯಿತು. ಪ್ರತಿ ಗ್ರಾಮದಲ್ಲೂ ರುದ್ರಭೂಮಿ ನಿರ್ಮಾಣ ಮಾಡಲು ಮತ್ತು ಇದಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಬೈಲೂರಿನಲ್ಲಿ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಥಳೀಯರ ಸಹಕಾರವೂ ಅಗತ್ಯ ಎಂದರು.