ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿಯಿರುವ ವೈದ್ಯರ ಹುದ್ದೆಗಳ ಭರ್ತಿಗಾಗಿ ರಾಜ್ಯ ಸಚಿವ ಸಂಪುಟದಲ್ಲಿ ಒಂದು ಸಾವಿರ ವೈದ್ಯರ ನೇಮಕಾತಿಗೆ ಒಪ್ಪಿಗೆ ನೀಡಲಾಗಿದೆ
ಬಳ್ಳಾರಿ: ರಾಜ್ಯದ ಪ್ರತಿಯೊಂದು ಪಿಎಚ್ಸಿ, ಸಿಎಚ್ಸಿ ಕೇಂದ್ರಗಳಲ್ಲೂ ಆ್ಯಂಬುಲೆನ್ಸ್ ಹೊಂದುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ಹೊಸ 350 ಆ್ಯಂಬುಲೆನ್ಸ್ ಖರೀದಿ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ 450 ಆ್ಯಂಬುಲೆನ್ಸ್ಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ಗ್ರಾಮದಿಂದ ಆ್ಯಂಬುಲೆನ್ಸ್ಗಳು 20 - 25 ನಿಮಿಷದಲ್ಲಿ ತಾಲೂಕು ಕೇಂದ್ರ ಸೇರ್ಪಡೆಯಾಗಬೇಕು. ಸಮಯ ಪಾಲನೆ ಮಾಡದಿದ್ದಲ್ಲಿ ಆ್ಯಂಬುಲೆನ್ಸ್ ಜವಾಬ್ದಾರಿ ವಹಿಸಿಕೊಂಡವರಿಗೆ ₹3ಸಾವಿರ ದಂಡ ವಿಧಿಸಲಾಗುವುದು ಎಂದರು.ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿಯಿರುವ ವೈದ್ಯರ ಹುದ್ದೆಗಳ ಭರ್ತಿಗಾಗಿ ರಾಜ್ಯ ಸಚಿವ ಸಂಪುಟದಲ್ಲಿ ಒಂದು ಸಾವಿರ ವೈದ್ಯರ ನೇಮಕಾತಿಗೆ ಒಪ್ಪಿಗೆ ನೀಡಲಾಗಿದೆ. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸೇರಿ ಎಲ್ಲ ಸಿಬ್ಬಂದಿ ಇರಬೇಕು. ಹೀಗಾಗಿ 250 ವೈದ್ಯರನ್ನು ನೇರ ನೇಮಕಾತಿಗೆ ಅವಕಾಶ ಮಾಡಿಕೊಡಲಾಗಿದೆ. ಆಯಾ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಸೂಚಿಸಲಾಗಿದೆ. ತಾಲೂಕು ಮಟ್ಟದ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಐದು ಐಸಿಯು ಬೆಡ್ ಸೇರಿ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ. ಪಿಎಚ್ಸಿ, ಸಿಎಚ್ಸಿ ಆರೋಗ್ಯ ಕೇಂದ್ರಗಳ ಸುಧಾರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಈ ಮೂಲಕ ಸ್ಥಳೀಯ ಮಟ್ಟದಲ್ಲಿಯೇ ಉತ್ತಮ ಆರೋಗ್ಯ ಸೇವೆ ಒದಗಿಸಿ ಜಿಲ್ಲಾಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲಾಗುತ್ತಿದೆ. ಹೆರಿಗೆ ವಿಚಾರ ಸೇರಿದಂತೆ ಮಹಿಳಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಹಿಳಾ ಹೆಲ್ತ್ ಪಾಲಿಸಿ ಮಾಡಲಾಗುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ವಿಭಾಗ ಮಾಡಲಾಗುವುದು ಎಂದು ತಿಳಿಸಿದರು.
ಹೋಟೆಲ್, ಬೇಕರಿಗಳ ಮೇಲೆ ದಾಳಿ; ದೂರು ಕೊಡುವ ವ್ಯವಸ್ಥೆ: ರಾಜ್ಯದಲ್ಲಿ ಹೋಟೆಲ್ ಬೇಕರಿ ದಾಳಿ ಮುಂದುವರಿಯಲಿದೆ. ಸಣ್ಣ ಹೋಟೆಲ್ನಿಂದ ಫೈವ್ ಸ್ಟಾರ್ ಹೋಟೆಲ್ಗಳಿಗೂ ದಾಳಿ ಮಾಡಲಾಗಿದೆ. ಅಧಿಕಾರಿಗಳ ಜತೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ಹೋಟೆಲ್ಗಳಲ್ಲಿ ಆಹಾರದ ಗುಣಮಟ್ಟದ ಕೊರತೆಗೆ ಸಂಬಂಧಿಸಿದಂತೆ ಕ್ಯೂಆರ್ ಕೋಡ್ ಮೂಲಕ ದೂರು ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ದೂರುಗಳು ಸಂಬಂಧಿಸಿದ ಅಧಿಕಾರಿಗಳಿಗೆ ತಲುಪಲಿದ್ದು, ಕೂಡಲೇ ಕ್ರಮಕ್ಕೆ ಮುಂದಾಗಲಿದ್ದಾರೆ. ಕಲಬೆರಕೆ ಆಹಾರ ಬಳಕೆ ಮಾಡುವುದು ಖಚಿತವಾದಲ್ಲಿ ದಂಡದೊಂದಿಗೆ, ಪರವಾನಗಿ ಸಹ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಆಹಾರದ ಗುಣಮಟ್ಟದ ಪರಿಶೀಲನೆಗಾಗಿ ರಾಜ್ಯದ ಪ್ರತಿಯೊಂದು ತಾಲೂಕಿನಲ್ಲಿ 60 ವರ್ಷದ ವಯಸ್ಸಿನವರನ್ನು ಒಳಗೊಂಡ ಕಮಿಟಿ ರಚಿಸುವ ಯೋಚನೆ ಇದೆ ಎಂದು ತಿಳಿಸಿದರು.
ಇದೇ ವೇಳೆ ಖಾಸಗಿ ಏಜೆನ್ಸಿಯಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ ವೇತನ ವಿಳಂಬದ ಬಗ್ಗೆ ಒಪ್ಪಿಕೊಂಡ ಸಚಿವರು, 108 ಆ್ಯಂಬುಲೆನ್ಸ್ ಅವರದ್ದು ಒಂದಲ್ಲ ಒಂದು ಬೇಡಿಕೆ ಇದೆ. ಬಜೆಟ್ ಲಿಮಿಟ್ ಇದೆ. ಅವರ ಸಮಸ್ಯೆ ಬಗ್ಗೆ ಅವರಿಗೆ ಸ್ಪಷ್ಟವಿಲ್ಲ ಎಂದರು.ಔಷಧಿ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಟೆಂಡರ್ ವಿಳಂಬದ ಹಿನ್ನೆಲೆ ಕೆಲವು ಕಡೆ ಕೊರತೆಯಾಗಿದೆ. ಸದ್ಯ ಅಗತ್ಯವಿರುವ ಔಷಧಿಗಳಿದ್ದು, ಇನ್ನೂಳಿದಂತೆ ಔಷಧಿಗಳು ಇಲ್ಲದಿದ್ದಲ್ಲಿ ಖರೀದಿಸಿ ರೋಗಿಗಳಿಗೆ ವಿತರಿಸುವಂತೆ ಸೂಚಿಸಲಾಗಿದೆ. ಮುಂದಿನ ಎರಡು ತಿಂಗಳೊಳಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಔಷಧಿ ಸಮರ್ಪಕವಾಗಿ ದೊರಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ಮೇಯರ್ ಪಿ. ಗಾದೆಪ್ಪ, ಗ್ರಾಮೀಣ ಅಧ್ಯಕ್ಷ ಕೆ. ಮಲ್ಲಿಕಾರ್ಜುನ ಗೆಣಿಕೆಹಾಳು ಇತರರಿದ್ದರು.