ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ 2026-27ನೇ ಸಾಲಿನ, 93 ಲಕ್ಷ 14 ಸಾವಿರ ಉಳಿತಾಯದ ಬಜೆಟನ್ನು ಆಡಳಿತಾಧಿಕಾರಿಗಳ ಪರವಾಗಿ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಂಡಿಸಿದರು.

ಗುರುವಾರ ಪಟ್ಟಣದ ಪುರಸಭೆಯ ಕಚೇರಿಯಲ್ಲಿ ಆಡಳಿತಾತ್ಮಕ ಮಂಜೂರಿ ಪಡೆದ ಬಜೆಟ್‌ನ ಪ್ರತಿ ಬಿಡುಗಡೆ ಮಾಡಿ, ಬಜೆಟ್ ಕುರಿತು ಮಾಹಿತಿ ನೀಡಿದರು. ಪುರಸಭೆ ನಿಧಿ, ಮನೆ ಕರ, ಮಳಿಗೆ, ಬಾಡಿಗೆ, ನೀರಿನ ಕರ ಇತರ ಫೀ ಗಳ ಮೂಲದಿಂದ ₹3 ಕೋಟಿ 93 ಲಕ್ಷ 76 ಸಾವಿರ ಆದಾಯ ನಿರೀಕ್ಷಿಸಲಾಗಿದೆ.

ಪುರಸಭೆಯ ಅನುದಾನದ ಮೂಲ ಎಸ್‌ಎಫ್‌ಸಿ ಮುಕ್ತ ನಿಧಿ, 16ನೇ ಹಣಕಾಸು ಮತ್ತು ಇತರ ಅನುದಾನದ ಮೂಲದಿಂದ ₹10 ಕೋಟಿ 55 ಲಕ್ಷ 30 ಸಾವಿರ ನಿರೀಕ್ಷಿಸಲಾಗಿದೆ. ಇತರ ಅ ಸಾಮಾನ್ಯ ಖಾತೆಯಿಂದ ₹1 ಕೋಟಿ 61 ಲಕ್ಷ 1 ಸಾವಿರ ನಿರೀಕ್ಷಿಸಲಾಗಿದೆ. ಒಟ್ಟು ಆದಾಯ ₹16 ಕೋಟಿ 10 ಲಕ್ಷ 7 ಸಾವಿರ ಮತ್ತು ಆರಂಭಿಕ ಶುಲ್ಕ ₹10 ಕೋಟಿ 14 ಲಕ್ಷ 44 ಸಾವಿರ ಎಂದು ಹೇಳಿದ ಅವರು, ಒಟ್ಟು ಬಜೆಟಿನ ಗಾತ್ರ ₹26 ಕೋಟಿ 24 ಲಕ್ಷ 51 ಸಾವಿರ ಇದೆ ಎಂದು ಹೇಳಿದರು.

ಇದೆ ಸಾಲಿಗೆ ಆಡಳಿತ ಮತ್ತು ಕಚೇರಿ ವೆಚ್ಚ, ನೀರು ಸರಬರಾಜು, ಬೀದಿದೀಪ, ಸಾರ್ವಜನಿಕ ಅರೋಗ್ಯ, ಸ್ವಚ್ಛತೆ ಇವುಗಳಿಗೆ ₹4 ಕೋಟಿ 21 ಲಕ್ಷ 47 ಸಾವಿರ ಮೀಸಲಿಡಲಾಗಿದೆ. ಅನುದಾನದಿಂದ ಬಂದ ಮೊತ್ತವನ್ನು ಪುರಸಭೆ ನೌಕರರ ವೇತನ, ನೀರು ಸರಬರಾಜು, ಬೀದಿದೀಪ, ವಿದ್ಯುತ್ ಬಿಲ್, ರಸ್ತೆ ಮತ್ತು ಚರಂಡಿ ನಿರ್ಮಾಣ ಇತ್ಯಾದಿಗಳಿಗೆ ₹17 ಕೋಟಿ 85 ಲಕ್ಷ 22 ಸಾವಿರ ಮೀಸಲಿಡಲಾಗಿದೆ. ಕೆರೆ ಅಭಿವೃದ್ಧಿ ₹15 ಲಕ್ಷ, ಮಳಿಗೆ ನಿರ್ಮಾಣ ₹1 ಕೋಟಿ ಮೀಸಲಿಡಲಾಗಿದೆ. ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಇತ್ಯಾದಿಗಳಿಗೆ ₹1 ಕೋಟಿ 69 ಲಕ್ಷ 38 ಸಾವಿರ ಮೀಸಲೀಡಲಾಗಿದೆ. ಹೀಗೆ ಒಟ್ಟು ಬಜೆಟ್ ಮೊತ್ತ ₹25 ಕೋಟಿ 24 ಲಕ್ಷ 51 ಸಾವಿರ ಎಂದು ನಿಗದಿಪಡಿಸಲಾಗಿದ್ದು, ಒಟ್ಟು ₹93 ಲಕ್ಷ 14 ಸಾವಿರ ರೂ.ಗಳ ಉಳಿತಾಯ ಬಜೆಟ್ ಈ ವರ್ಷ ಮಂಡಿಸಲಾಗಿದೆ ಎಂದರು. ಅಭಿವೃದ್ಧಿಗೆ ಆದ್ಯತೆ:

ಮುಂಬರುವ ದಿನಗಳಲ್ಲಿ ಪಟ್ಟಣದ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವುದು, ಪಟ್ಟಣದ ಸ್ವಚ್ಛತೆಗೆ ಆದ್ಯತೆ, ₹ 36 ಕೋಟಿಗಳ ಕುಡಿಯುವ ನೀರಿನ ಯೋಜನೆಗೆ ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮಗೊಳಿಸಲಾಗುವುದು ಎಂದು ಮಹಾಂತೇಶ ಬೀಳಗಿ ಹೇಳಿದರು.


ಪುರಸಭೆಯಿಂದ ಬಡಜನರ ಕಲ್ಯಾಣಕ್ಕಾಗಿ ಯೋಜನೆ ರೂಪಿಸಲಾಗಿದ್ದು, ಎಸ್‌ಸಿ ಮತ್ತು ಎಸ್‌ಟಿ ಪಂಗಡದ ಕಲ್ಯಾಣ ಕಾರ್ಯಕ್ರಮಕ್ಕಾಗಿ ಪುರಸಭೆ ನಿಧಿಯಿಂದ ₹3 ಲಕ್ಷ 21 ಸಾವಿರ, ರಾಜ್ಯ ಹಣಕಾಸು ನಿಧಿಯಿಂದ ₹3 ಲಕ್ಷ, ಇತರ ಬಡ ಜನಾಂಗದವರ ಕಲ್ಯಾಣಕ್ಕಾಗಿ ಪುರಸಭೆ ನಿಧಿಯಿಂದ ₹1 ಲಕ್ಷ ರಾಜ್ಯ ಹಣಕಾಸು ನಿಧಿಯಿಂದ ₹66 ಸಾವಿರ, ಅಂಗವಿಕಲರ ಕಲ್ಯಾಣಕ್ಕಾಗಿ ಪುರಸಭೆ ನಿಧಿಯಿಂದ ₹66 ಸಾವಿರ, ರಾಜ್ಯ ಹಣಕಾಸು ನಿಧಿ ₹45 ಸಾವಿರ ನಿಗದಿಪಡಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಅತಿ ವೇಗವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಾಲೂಕು ಕೇಂದ್ರ ಸ್ಥಳವಾಗಿರುವ ಲಕ್ಷ್ಮೇಶ್ವರದ ಅಭಿವೃದ್ಧಿಗಾಗಿ ಮತ್ತು ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಈ ವೇಳೆ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಕಂದಾಯ ಅಧಿಕಾರಿ ಸುರೇಶ ಪೂಜಾರ, ಕಂದಾಯ ನಿರೀಕ್ಷಕ ವೆಂಕಟೇಶ ರಾಮಗೇರಿ, ಹಣಕಾಸು ವಿಭಾಗದ ನೇತ್ರಾ ಹೊಸಮನಿ, ಮಹೇಶ ಹೊಸಮನಿ, ಹನುಮಂತಪ್ಪ ನಂದೆಣ್ಣವರ ಇದ್ದರು.