ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ದೊಡ್ಡ ಕೆರೆಯ ಪರಿಸರ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಸಾರ್ವಜನಿಕರಿಗೆ ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಸೂಕ್ತವಾದ ಸ್ಥಳಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಎದುರಿನ ದೊಡ್ಡ ಕೆರೆ ಪಟ್ಟಣದ ಹೃದಯಭಾಗದಲ್ಲಿದ್ದು, ಸುಮಾರು 15 ವರ್ಷಗಳ ಹಿಂದೆ ಊರಿನ ಹಿರಿಯ ಅಧಿಕಾರಿ ಬೈಕೆರೆ ನಾಗೇಶ್ ಅವರ ಕನಸಿನ ಕೂಸಾಗಿ ಈ ಕೆರೆಯನ್ನು ಉಳಿಸಿ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಅದರ ಮುಂದಿನ ಹಂತದ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪುರಸಭೆ ವ್ಯಾಪ್ತಿಯಲ್ಲಿ ಉದ್ಯಾನವನಗಳಿಗೆ ಮೀಸಲಿಟ್ಟಿರುವ ಎಲ್ಲಾ ಜಾಗಗಳಲ್ಲೂ ಹಂತ ಹಂತವಾಗಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ದೊಡ್ಡ ಕೆರೆಯ ಪರಿಸರ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಸಾರ್ವಜನಿಕರಿಗೆ ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಸೂಕ್ತವಾದ ಸ್ಥಳಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಎದುರಿನ ದೊಡ್ಡ ಕೆರೆ ಪಟ್ಟಣದ ಹೃದಯಭಾಗದಲ್ಲಿದ್ದು, ಸುಮಾರು 15 ವರ್ಷಗಳ ಹಿಂದೆ ಊರಿನ ಹಿರಿಯ ಅಧಿಕಾರಿ ಬೈಕೆರೆ ನಾಗೇಶ್ ಅವರ ಕನಸಿನ ಕೂಸಾಗಿ ಈ ಕೆರೆಯನ್ನು ಉಳಿಸಿ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಅದರ ಮುಂದಿನ ಹಂತದ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಮೊದಲ ಬಾರಿ ಶಾಸಕರಾದ ಸಂದರ್ಭದಲ್ಲಿ ಈ ಕೆರೆಯ ಅಭಿವೃದ್ಧಿಗಾಗಿ 35 ಲಕ್ಷ ರು.ಗಳನ್ನು ಮಂಜೂರು ಮಾಡಲಾಗಿತ್ತು. ಇದಕ್ಕೆ ಪುರಸಭೆಯ ಅನುದಾನ ಸೇರಿಸಿ ಒಟ್ಟು 50 ಲಕ್ಷ ರು. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಮಕ್ಕಳಿಗೆ ಆಟೋಪಕರಣಗಳು, ಹಿರಿಯರಿಗೆ ವ್ಯಾಯಾಮೋಪಕರಣಗಳು, ಜಿಮ್ ಸಾಧನಗಳು, ಬೆಳಕು ವ್ಯವಸ್ಥೆ ಹಾಗೂ ಪೈಪ್‌ಗಳಿಗೆ ಬಣ್ಣ ಹಚ್ಚುವ ಮೂಲಕ ಕೆರೆಯ ಸುತ್ತಮುತ್ತಲ ಪ್ರದೇಶವನ್ನು ಸುಂದರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿವರಿಸಿದರು.

ಪಟ್ಟಣದ ಸೌಂದರ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಉದ್ಯಾನವನಗಳಿಗೆ ಮೀಸಲಿಟ್ಟಿರುವ ಎಲ್ಲಾ ಜಾಗಗಳಲ್ಲಿ ಪಾರ್ಕ್‌ಗಳನ್ನು ನಿರ್ಮಿಸಲಾಗುವುದು. ಬಾಳೆಗದ್ದೆ, ಚಂಪಕನಗರ, ಮಲ್ಲಿಕಾರ್ಜುನನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 7–8 ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಅನುದಾನ ಮೀಸಲಿಟ್ಟಿದ್ದು, ಟೆಂಡರ್‌ ಪ್ರಕ್ರಿಯೆಯೂ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಸಕಲೇಶಪುರ ಪಟ್ಟಣದ ಸ್ವಾಗತ ಬೋರ್ಡ್‌ಗಳ ನಿರ್ಮಾಣ, ರಸ್ತೆ ಸುಧಾರಣೆ, ಬೀದಿ ವ್ಯಾಪಾರಿಗಳಿಗೆ ವ್ಯವಸ್ಥಿತ ಶೆಡ್‌ಗಳ ನಿರ್ಮಾಣ, ಬಸ್ ನಿಲ್ದಾಣದಲ್ಲಿ ಸುಗಮ ಸಂಚಾರ ವ್ಯವಸ್ಥೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು. ರಾಜಕೀಯಕ್ಕಿಂತ ಪಟ್ಟಣದ ಅಭಿವೃದ್ಧಿಯೇ ನಮ್ಮ ಉದ್ದೇಶವಾಗಿದ್ದು, ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಪುರಸಭೆಯ ಮಾಜಿ ಸದಸ್ಯ ಪ್ರಜ್ವಲ್, ಈ ಕೆರೆಯು ನಗರದ ಮಧ್ಯಭಾಗದಲ್ಲಿರುವ ಪ್ರಮುಖ ಸಾರ್ವಜನಿಕ ಸ್ಥಳವಾಗಿದ್ದು, ಹಿಂದಿನ ಅವಧಿಗಳಲ್ಲಿ ಹಲವು ಜನಪ್ರತಿನಿಧಿಗಳು ಅದರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇದೀಗ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಸದಸ್ಯರಾದ ರೇಖಾ, ರುದ್ರಕುಮಾರ್, ವನಜಾಕ್ಷಿ, ಪುರಸಭೆಯ ಮಾಜಿ ಅಧ್ಯಕ್ಷ ಜಾಕೀರ್‌, ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ಎಂಜಿನಿಯರ್‌ ಸುಜಾತ, ಪಕ್ಷದ ಮುಖಂಡರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.