ಲಭ್ಯ ಸ್ಥಳಗಳಲ್ಲಿ ಪಿಡಬ್ಲ್ಯೂಡಿ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಕ್ರಮ: ಸಚಿವ ಸತೀಶ್‌ ಜಾರಕಿಹೊಳಿ

| Published : Feb 19 2025, 12:47 AM IST

ಲಭ್ಯ ಸ್ಥಳಗಳಲ್ಲಿ ಪಿಡಬ್ಲ್ಯೂಡಿ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಕ್ರಮ: ಸಚಿವ ಸತೀಶ್‌ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರಿನಲ್ಲಿ ಜಾಗ ಗುರುತಿಸಿದರೆ, ರಾಜ್ಯದ ಮೊದಲ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ. ಇದನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಿದ್ದು, ಆರು ತಿಂಗಳಲ್ಲಿ ಕಾಮಗಾರಿಗೆ ಸಂಬಂಧಿಸಿ ಅನುಮತಿ ನೀಡಲಾಗುವುದು. ಬಳಿಕ ತ್ವರಿತವಾಗಿ ಕಾಮಗಾರಿ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಆಯಾ ಜಿಲ್ಲೆಗಳಲ್ಲಿ ಸ್ಥಳ ಲಭ್ಯತೆಯ ಪ್ರದೇಶಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದಲೇ ವಾಣಿಜ್ಯ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಇಲಾಖೆಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪಿಡಬ್ಲ್ಯೂಡಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಇದೇ ಪ್ರಥಮವಾಗಿದೆ. ಪುತ್ತೂರಿನಲ್ಲಿ ಜಾಗ ಗುರುತಿಸಿದರೆ, ರಾಜ್ಯದ ಮೊದಲ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ. ಇದನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಿದ್ದು, ಆರು ತಿಂಗಳಲ್ಲಿ ಕಾಮಗಾರಿಗೆ ಸಂಬಂಧಿಸಿ ಅನುಮತಿ ನೀಡಲಾಗುವುದು. ಬಳಿಕ ತ್ವರಿತವಾಗಿ ಕಾಮಗಾರಿ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಫೆ.21ರಂದು ಬೆಂಗಳೂರಲ್ಲಿ ಸಭೆ:

ದ.ಕ. ಜಿಲ್ಲೆಯಲ್ಲಿ ಸೇತುವೆಗಳ ಪರಿಶೀಲನೆ ನಡೆಸಿದ್ದು, ಸೇತುವೆಗಳ ದುರಸ್ತಿ ಹಾಗೂ ಹೊಸ ಸೇತುವೆಗಳ ನಿರ್ಮಾಣಕ್ಕೆ ಸಂಬಂಧಿಸಿ ಅನುದಾನ ಬಿಡುಗಡೆಗೊಳಿಸಲಾಗುವುದು. ಶಿರಾಡಿ ಘಾಟ್‌ ಹೆದ್ದಾರಿ ಕಾಮಗಾರಿ ಜೂನ್‌ ವೇಳೆಗೆ ಮುಕ್ತಾಯಗೊಳ್ಳಲಿದೆ. ಒಟ್ಟು ಹೆದ್ದಾರಿ ಯೋಜನೆಗೆ ಸಂಬಂಧಿಸಿ ಫೆ.21ರಂದು ಬೆಂಗಳೂರಿನಲ್ಲಿ ಅಧಿಕಾರಿ ಮಟ್ಟದ ಸಭೆ ನಡೆಯಲಿದೆ. ಈ ಸಭೆಯಲ್ಲಿ ತುರ್ತು ಕಾಮಗಾರಿ ಹಾಗೂ ಅನುದಾನ ಬಿಡುಗಡೆಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಗುತ್ತಿಗೆದಾರ ಬದಲಾವಣೆಗೆ ಸೂಚನೆ:

ಚಾರ್ಮಾಡಿ ಘಾಟ್‌ ಹೆದ್ದಾರಿ ಕಾಮಗಾರಿಗೆ ಟೆಂಡರ್‌ ಆಗಿದೆ, ಆದರೆ ಕಾಮಗಾರಿ ಬೇಗನೆ ಆರಂಭವಾಗಿ ಪೂರ್ಣಗೊಳ್ಳದಿದ್ದರೆ ಮಳೆಗಾಲದಲ್ಲಿ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಗುತ್ತಿಗೆದಾರರು ಈಗಾಗಲೇ ಹೊರನಾಡಿನಲ್ಲಿ 10 ವರ್ಷದಿಂದ ಕಾಮಗಾರಿ ನಡೆಸುತ್ತಿದ್ದರೂ ಇನ್ನೂ ಮುಕ್ತಾಯವಾಗಿಲ್ಲ. ಆದ್ದರಿಂದ ಅವರನ್ನು ಬದಲಾಯಿಸಿ ಬೇರೊಬ್ಬರಿಗೆ ಟೆಂಡರ್‌ ನೀಡುವಂತೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಆಗ್ರಹಿಸಿದರು. ಅವರನ್ನು ಬದಲಾಯಿಸಿ ಬೇರೊಬ್ಬರಿಗೆ ಟೆಂಡರ್‌ ನೀಡಬೇಕು. ಅವರಿಗೆ ಪರ್ಯಾಯ ಟೆಂಡರ್‌ ಕಲ್ಪಿಸುವಂತೆ ಸಚಿವ ಸತೀಶ್‌ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರಿಗೆ ಇನ್ನೊಂದು ಸರ್ಕ್ಯೂಟ್‌ ಹೌಸ್‌:

ಮಂಗಳೂರಿನಲ್ಲಿ ಇನ್ನೊಂದು ಸರ್ಕ್ಯೂಟ್‌ ಹೌಸ್‌ ನಿರ್ಮಿಸುವಂತೆ ಶಾಸಕ ವೇದವ್ಯಾಸ್‌ ಕಾಮತ್‌ ಅವರು ಸಚಿವರನ್ನು ವಿನಂತಿಸಿದರು. ಕದ್ರಿಯಲ್ಲಿರುವ ಹೊಸ ಸರ್ಕ್ಯೂಟ್‌ ಹೌಸ್‌ನಲ್ಲಿ ವಿಐಪಿಗಳು ಯಾವಾಗಲೂ ಬರುತ್ತಿರುತ್ತಾರೆ. ಹಾಗಾಗಿ ಅಲ್ಲಿ ಹಳೆ ಬಂಗಲೆಯನ್ನು ದುರಸ್ತಿಪಡಿಸಬೇಕು. ಹೊಸ ಬಂಗಲೆಯನ್ನು ಪ್ರಧಾನಿ ಅಥವಾ ರಾಷ್ಟ್ರಪತಿಯೇ ಮೊದಲಾದ ಅತಿ ಗಣ್ಯರಿಗಾಗಿ ಮೀಸಲಿಡಬೇಕು ಎಂದು ಶಾಸಕರು ಆಗ್ರಹಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.

ಪರಿಹಾರ ಕಾಣದ ಮರಳುಗಾರಿಕೆ:

ದ.ಕ. ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಸೇರಿದಂತೆ ಮರಳುಗಾರಿಕೆ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಮರಳುಗಾರಿಕೆ ವಿಚಾರ ಜಟಿಲವಾಗಿದೆ. ಸೇತುವೆಗಳ ಕೆಳಗೂ ಮರಳುಗಾರಿಕೆ ನಡೆಸುವ ಮೂಲಕ ಅವ್ಯಾಹತ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ವ್ಯಕ್ತವಾಗಿವೆ. ಈ ಬಗ್ಗೆ ಕಂದಾಯ, ಲೋಕೋಪಯೋಗಿ ಇಲಾಖೆ, ಗಣಿ ಇಲಾಖೆ, ಪೊಲೀಸ್‌ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡಲಾಗುವುದು ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಸಕಲೇಶಪುರ ಹಾಗೂ ಮಡಿಕೇರಿ ನಡುವೆ 60 ಕಿ.ಮೀ. ದೂರದ ರಸ್ತೆಯನ್ನು ಅಗಲೀಕರಣಗೊಳಿಸುವ ಅಗತ್ಯತೆಯನ್ನು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಪ್ರಸ್ತಾಪಿಸಿದರು. ಕೇಂದ್ರ ಮೀಸಲು ನಿಧಿಯಡಿ ಹೆಚ್ಚುವರಿಯಾಗಿ ರಾಜ್ಯದ ಪಾಲನ್ನು ನೀಡುವಂತೆ ಕೋರಿದ ಸಂಸದರು, ಮಾಣಿ-ಸಂಪಾಜೆ ಹೆದ್ದಾರಿ ಕಾಮಗಾರಿ ಬಗ್ಗೆ ಪ್ರಸ್ತಾಪಿಸಿದರು.

ಪ್ರತ್ಯೇಕ ಉಪವಿಭಾಗ ಬೇಡಿಕೆ:

ಲೋಕೋಪಯೋಗಿ ಇಲಾಖೆಯ ಬೊಂದೇಲ್‌ ಆಟದ ಮೈದಾನಗಳಲ್ಲಿ ಕ್ರಿಕೆಟ್‌ ಆಟಗಳಿಗೆ ಶುಲ್ಕ ವಸೂಲಿ ಮಾಡದಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೇರಿಹಿಲ್‌ ಹೆಲಿಪ್ಯಾಡ್‌ ಅಭಿವೃದ್ಧಿಗೆ ಅನುದಾನ, ಮೂಲ್ಕಿ, ಮೂಡುಬಿದಿರೆ, ಉಳ್ಳಾಲ ಹಾಗೂ ಸುಳ್ಯಕ್ಕೆ ಸುಬ್ರಹ್ಮಣ್ಯವನ್ನು ಸೇರಿಸಿ ಪ್ರತ್ಯೇಕ ಉಪವಿಭಾಗ ರಚಿಸುವ ಬೇಡಿಕೆ ವ್ಯಕ್ತಗೊಂಡಿತು.

ಶಾಸಕರಾದ ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಭಾಗೀರಥಿ ಮುರುಳ್ಯ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮತ್ತಿತರರಿದ್ದರು.