ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ತಲುಪಿಸಲು ಕ್ರಮ

| Published : Apr 10 2025, 01:00 AM IST

ಸಾರಾಂಶ

ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ನೀಡಿರುವ ಸೌಲಭ್ಯವನ್ನು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ತಲುಪಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ರಚಿಸಲಾಗಿದೆ, ಈ ಅವಕಾಶವನ್ನು ಸಾರ್ವಜನಿಕರು ಪಡೆದು ಗ್ಯಾರಂಟಿ ಸೌಲಭ್ಯಗಳ ಸಮಸ್ಯೆಗಳು ಏನೇ ಇದ್ದರೂ ಬಗೆಹರಿಸಿಕೊಳ್ಳಬಹುದು ಎಂದು ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ನೀಡಿರುವ ಸೌಲಭ್ಯವನ್ನು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ತಲುಪಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ರಚಿಸಲಾಗಿದೆ, ಈ ಅವಕಾಶವನ್ನು ಸಾರ್ವಜನಿಕರು ಪಡೆದು ಗ್ಯಾರಂಟಿ ಸೌಲಭ್ಯಗಳ ಸಮಸ್ಯೆಗಳು ಏನೇ ಇದ್ದರೂ ಬಗೆಹರಿಸಿಕೊಳ್ಳಬಹುದು ಎಂದು ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಕರೆ ನೀಡಿದರು.

ನಗರದ ತಾಪಂ ಆವರಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಫಲಾನುಭವಿಗಳಿಗೆ ಗ್ಯಾರಂಟಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ರ ನೇತೃತ್ವದಲ್ಲಿ ಚುನಾವಣೆಗೆ ಮುನ್ನ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಯ ಭರವಸೆಗಳು ಅಧಿಕಾರಕ್ಕೆ ಬಂದ ೬ ತಿಂಗಳಲ್ಲಿಯೇ ಯೋಜನೆಗಳನ್ನು ಜಾರಿಗೆ ತರಲು ಪ್ರಾಧಿಕಾರಗಳನ್ನು ರಚಿಸಲಾಯಿತು ಎಂದರು.

ಕೋಲಾರ ಜಿಲ್ಲಾಧ್ಯಕ್ಷರಾಗಿ ವೈ.ಶಿವಕುಮಾರ್‌ರನ್ನು ನೇಮಿಸಿದೆ, ನಂತರದಲ್ಲಿ ತಾಲೂಕು ಅಧ್ಯಕ್ಷರಾಗಿ ವಿ.ಎಂ.ಮುನಿಯಪ್ಪರನ್ನು ನೇಮಕ ಮಾಡಲಾಗಿದ್ದು ಇಂದು ಅವರಿಗೆ ಅಧಿಕಾರ ನೇಮಕಾತಿ ಪತ್ರ ಹಸ್ತಾಂತರಿಸಲಾಗಿದೆ, ಯಾವುದೇ ಅಧಿಕಾರ, ಸ್ಥಾನಮಾನ ಜನಾದೇಶದ ಮೇಲೆ ವ್ಯಕ್ತಿತ್ವಗಳನ್ನು ಸಾಕ್ಷೀಕರಿಸುತ್ತದೆ ಎಂಬುವುದಕ್ಕೆ ಕೇವಲ ೨೦ ದಿನದಲ್ಲಿ ಶಾಸಕರಾದ ಕೊತ್ತೂರು ಮಂಜುನಾಥ್‌ರನ್ನು ೩೪ ಸಾವಿರಕ್ಕೂ ಹೆಚ್ಚು ಅಂತರದಲ್ಲಿ ಗೆಲ್ಲಿಸಿರುವುದೇ ಉತ್ತಮ ನಿದರ್ಶನವಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಮಾನತೆಗೆ ಹೆಚ್ಚಿನ ಆದ್ಯತೆ ನೀಡಿದೆ, ಕಾಂಗ್ರೆಸ್ ಪಕ್ಷದ ಹಿರಿಯ ಯುವ ಮುಖಂಡ ವೈ.ಶಿವಕುಮಾರ್ ಹಿಂದುಳಿದ ವರ್ಗದವರಾಗಿದ್ದು, ಅವರನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷರಾಗಿ ನೇಮಿಸಿದೆ, ಕುಡಾ ಅಧ್ಯಕ್ಷರಾಗಿ ಮಹ್ಮದ್ ಹನೀಫ್, ನ್ಯಾಯಾಂಗ ವ್ಯವಸ್ಥೆಯಲ್ಲಿ ಸರ್ಕಾರಿ ವಕೀಲರಾಗಿ ವೇಮಗಲ್ ಫಯಾಜ್, ಹಾಲು ಒಕ್ಕೂಟದ ನಿರ್ದೇಶಕರಾಗಿ ಷಂಷೀರ್, ನಗರಸಭೆ ಅಧ್ಯಕ್ಷರಾಗಿ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷರಾಗಿ ಸಂಗೀತಾ, ದರಾಖಾಸ್ತು ಸಮಿತಿಗೆ ಕ್ಯಾಲನೂರು ಬಾಬಾ ಸಾಹೇಬ್ ಸೇರಿದಂತೆ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ. ಅಧಿಕಾರ ಎಂಬುದು ಯಾರೊಬ್ಬರ ಸ್ವತ್ತಲ್ಲ ಎಂದರು.

ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡ ವಿ.ಎಂ.ಮುನಿಯಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಗಳಲ್ಲಿ ಕೆಲವು ಫಲಾನುಭವಿಗಳಿಗೆ ತಾಂತ್ರಿಕ ದೋಷಗಳಿಂದಾಗಿ ಸೌಲಭ್ಯಗಳು ದೊರೆತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಸೌಲಭ್ಯ ಕಲ್ಪಿಸಬೇಕು, ಪ್ರತಿ ಮಾಹೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಯಾವ ಅರ್ಹ ಫಲಾನುಭವಿಗಳೂ ಸೌಲಭ್ಯಗಳಿಂದ ವಂಚಿತರಾಗದಂತೆ ಕ್ರಮವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್. ಜಿಪಂ ತ್ರೈಮಾಸಿಕ ಸಭೆ ಸದಸ್ಯ ಮಣಿಘಟ್ಟ ಸೊಣ್ಣೇಗೌಡ, ಮುಖಂಡರಾದ ಸಿ.ಮುನಿಯಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಗಂಗಣ್ಣ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ಪೈರೋಜ್, ಸದಸ್ಯರಾದ ಅಂಬರೀಷ್, ವಿ.ಮಂಜುನಾಥ್, ಕುಡಾ ಅಧ್ಯಕ್ಷ ಮಹ್ಮದ್ ಹನೀಫ್, ಹಾಲು ಒಕ್ಕೂಟದ ನಿದೇಶಕ ಷರೀಪ್, ಮುಖಂಡರಾದ ಅಮರ್, ಬಾಲು, ಮೈಲಾಂಡ್ಲಹಳ್ಳಿ ಮುರಳಿ, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್, ತಹಸೀಲ್ದಾರ್ ನಯನಾ ಇದ್ದರು.

ಗ್ಯಾರಂಟಿ ಸಮಸ್ಯೆ ಪ್ರಾಧಿಕಾರಗಳ ಹೆಗಲಿಗೆ

ಶಾಸಕ ಕೊತ್ತೂರು ಜಿ.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರದ ಗೃಹಲಕ್ಷ್ಮೀ, ಶಕ್ತಿ ಯೋಜನೆ, ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ ಯೋಜನೆಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ ಪ್ರಾಧಿಕಾರಗಳಿಗೆ ಜವಾಬ್ದಾರಿ ವಹಿಸಿದೆ, ಜಿಲ್ಲಾಧ್ಯಕ್ಷರಿಗೆ ಜಿಪಂನಲ್ಲಿ ಕಚೇರಿ, ತಾಲೂಕು ಅಧ್ಯಕ್ಷರಿಗೆ ತಾಪಂನಲ್ಲಿ ಕೊಠಡಿ ನೀಡಿದೆ, ಅವಕಾಶಗಳನ್ನು ಎಲ್ಲರಿಗೂ ಕಲ್ಪಿಸಿದೆ, ಅವಕಾಶದಿಂದ ವಂಚಿತರಾದವರೂ ನಿರಾಶರಾಗಬೇಕಾಗಿಲ್ಲ, ಭವಿಷ್ಯದಲ್ಲಿ ಇನ್ನೂ ಉತ್ತಮ ಅವಕಾಶ ಸಿಗಲಿವೆ ಎಂಬುವುದಕ್ಕೆ ಕೆಲವು ನಿದರ್ಶನಗಳನ್ನು ವಿವರಿಸಿದರು.