ಸಾರಾಂಶ
ತಾಲೂಕು ಕಚೇರಿಯಲ್ಲಿ ಭೂ ದಾಖಲೆಗಳು ಮತ್ತು ಕಂಪ್ಯೂಟರ್ ಕೊಠಡಿಗಳನ್ನು ಉದ್ಘಾಟನೆ
ಕನ್ನಡಪ್ರಭ ವಾರ್ತೆ ಕಡೂರುತಮ್ಮ ಜಮೀನು ಆಸ್ತಿಗಳ ದಾಖಲೆಗಳಿಗಾಗಿ ದೂರದಿಂದ ಬರುವ ರೈತರಿಗೆ ವೃಥಾ ಅಲೆದಾಟ ತಪ್ಪಿಸಿ ಒಂದೇ ಕಡೆ ಇದಕ್ಕೆ ಸಂಬಂಧಿಸಿದ ದಾಖಲೆಗಳು ಸಿಗುವಂತೆ ರಾಜ್ಯ ಸರ್ಕಾರದಿಂದ ಕ್ರಮ ವಹಿಸಲಾಗುವುದು ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು
ಪಟ್ಟಣದ ತಾಲೂಕು ಕಚೇರಿಯಲ್ಲಿ ₹ 60 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭೂ ದಾಖಲೆಗಳು ಮತ್ತು ಕಂಪ್ಯೂಟರ್ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರುಕಂದಾಯ ಇಲಾಖೆ ಅನುದಾನದಲ್ಲಿ ನಿರ್ಮಿಸಿದರುವ ನೂತನ ಕೊಠಡಿಗಳಗಳಿಂದ ತಾಲೂಕಿನ ರೈತರಿಗೆ ಅನುಕೂಲವಾಗಲಿದೆ. ಹಿಂದೆ ಭೂ ದಾಖಲೆಗಳ ಕೊಠಡಿಯಲ್ಲಿ ಮಳೆ ನೀರು ಬಿದ್ದು ದಾಖಲೆಗಳು ಹಾಳಾಗುತ್ತಿರುವುದನ್ನು ಕಂಡಿದ್ದೆ. ರಾಜ್ಯ ಸರ್ಕಾರದಿಂದ ಭೂ ದಾಖಲೆಗಳನ್ನು ಗಣಕೀಕರಣ ಮಾಡಲಾಗುತ್ತಿದೆ. ಅದಕ್ಕಾಗಿ ಕೊಠಡಿಗಳ ನಿರ್ಮಾಣ ಮಾಡಲಾಗಿದೆ. ನೂತನ ಕೊಠಡಿಯಲ್ಲಿ ಕಂಪ್ಯೂಟರ್ ಸ್ಕ್ಯಾನ್ ಮೂಲಕ ದಾಖಲೆ ಸಂಗ್ರಹಿಸಲಾಗುತ್ತದೆ ಹಾಗು ದಾಖಲೆಗಳು ಸುರಕ್ಷಿತವಾಗಿಡಲು ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು.
ಕಡೂರು ಪಟ್ಟಣದಲ್ಲಿ ಸರಕಾರದ ಅನೇಕ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇದನ್ನು ಅರಿತು ಸರ್ಕಾರಿ ಕಟ್ಟಡಗಳಲ್ಲಿ ಕಚೇರಿಗಳನ್ನು ನಡೆಸಲು ಸಿ. ಮಾದರಿ ಕಟ್ಟಡಗಳ ಮಂಜೂರಾತಿಗೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರ ಭೂ ಸುರಕ್ಷಾ ಯೋಜನೆಯಲ್ಲಿ ರೈತರ, ಸರಕಾರದ ದಾಖಲೆಗಳ ಡಿಜಿಟಲೀಕರಣ ಮಾಡುವ ಮೂಲಕ ಹಾಳಾಗುತ್ತಿದ್ದ ದಾಖಲೆಗಳನ್ನು ಸುರಕ್ಷಿತವಾಗಿಡಲು ಆದ್ಯತೆ ನೀಡಿರುವ ಶಾಸಕ ಆನಂದ್ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದಿಸುತ್ತೇನೆ ಎಂದರು.
ತಹಸೀಲ್ದಾರ್ ಎಸ್.ಆರ್. ಮಂಜುನಾಥ್ ಮಾತನಾಡಿ, ಡಿಜಿಟಲೀಕರಣದ ಮೂಲಕ ರಾಜ್ಯ ಸರ್ಕಾರ ದಾಖಲೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿದಿದೆ. ಭೂ ದಾಖಲೆ ಗಳನ್ನು ಸ್ಕ್ಯಾನ್ ಮಾಡಿ ಸಂಗ್ರಹಿಸುವ ಕಾರ್ಯ ಆರಂಭವಾಗಿದೆ. ಇದರಿಂದ ರೈತರ ದಾಖಲೆಗಳು ಸದಾ ಸುಭದ್ರ ಎಂದರು.ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಜಿಲ್ಲಾ ಸಮಿತಿ ಸದಸ್ಯ ಅಭಿದ್ ಪಾಶ, ಕೆಡಿಪಿ ಸದಸ್ಯ ಜಿ. ಅಶೋಕ್ , ಶಿರಸ್ತೇದಾರ್ ನಾಗರತ್ನ, ಆರ್.ಐ. ರವಿಕುಮಾರ್, ಲಿಂಗರಾಜು ಕಚೇರಿ ಸಿಬ್ಬಂದಿ ರೈತರು ಹಾಜರಿದ್ದರು.
-- ಬಾಕ್ಸ್...ಅಧಿಕಾರಿಗಳ ಗೈರು ಹಾಜರಿಗೆ ಗರಂ
ಕೊಠಡಿ ಉದ್ಘಾಟನೆ ಸಂದರ್ಭದಲ್ಲಿ ಕಂದಾಯ ಇಲಾಖೆಗೆ ಸಂಭಂಧಿಸಿದ ಅಧಿಕಾರಿಗಳು ಭಾಗವಹಿಸದ ಕಾರಣ ಶಾಸಕ ಕೆ.ಎಸ್. ಆನಂದ್ ಅಧಿಕಾರಿಗಳ ಗೈರು ಹಾಜರಿಗೆ ಗರಂ ಆದರು. ಇದು ಯಾರ ಕಾರ್ಯಕ್ರಮ. ಲಕ್ಷಾಂತರ ರು ಸರ್ಕಾರದ ಅನುದಾನ ತಂದು ಮಂಜೂರು ಮಾಡಿಸುವುದರಲ್ಲಿ ಹೆಚ್ಚಿನ ಶ್ರಮ ಇದೆ. ಆದರೆ ಇದು ನಿಮ್ಮದೇ ಕಂದಾಯ ಇಲಾಖೆ ಕಾರ್ಯಕ್ರಮವಾಗಿದ್ದರು ಅಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ. ಶಿಷ್ಟಾಚಾರ ಗೊತ್ತಿಲ್ಲವೆ ಎಂದ ಅವರು, ಕಂದಾಯ ಇಲಾಖೆ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಬಸವರಾಜ್ ಹಾರ ಹಾಕಲು ಬಂದಾಗ ಅದನ್ನು ಶಾಸಕರು ತಿರಸ್ಕರಿಸಿ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು.28ಕೆಕೆಡಿಯು1.
ಕಡೂರು ಪಟ್ಟಣದ ತಾಲೂಕು ಕಚೇರಿಯಲ್ಲಿ 50 ಲಕ್ಷ ರೂ ವೆಚ್ಚದ ಭೂ ದಾಖಲೆಗಳ ಕೊಠಡಿ ಮತ್ತು ಕಂಪ್ಯೂಟರ್ ಕೊಠಡಿಗಳನ್ನು ಶಾಸಕ ಕೆ.ಎಸ್. ಆನಂದ್ ಉಧ್ಘಾಟಿಸಿದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ತಹಸೀಲ್ದಾರ್ ಮಂಜುನಾಥ್ ಇದ್ದರು.