ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ತುಮುಲ್ ಅಧ್ಯಕ್ಷ ಸ್ಥಾನವು ಕ್ಯಾಬಿನೇಟ್ ದರ್ಜೆಯ ಸ್ಥಾನಮಾನವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ, ಹಿಂದುಳಿದ ವರ್ಗದ ಪಾವಗಡ ಶಾಸಕ ವೆಂಕಟೇಶ್ ಅವರನ್ನು ತುಮುಲ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಆ ನಿಟ್ಟಿನಲ್ಲಿ ಅಧ್ಯಕ್ಷ ವೆಂಕಟೇಶರವರಿಗೆ ನಮ್ಮ ಜಿಲ್ಲೆಯ ರೈತರ, ಕೃಷಿಕರ ಹಾಗೂ ಕೂಲಿ ಕಾರ್ಮಿಕರ ಪರ ಕೆಲಸ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಸಲಹೆ ನೀಡಿದರು.ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಮಲ್ಲಸಂದ್ರ ಹಾಗೂ ಮಧುಗಿರಿ ಉಪ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಹಾಗೂ ಹಾಲು ಉತ್ಪಾದಕ ರೈತರಿಗೆ 42 ಲಕ್ಷ ರು.ಗಳ ಚೆಕ್ ವಿತರಣೆ ,ಡೇರಿ ಮತ್ತು ಕ್ಯಾಲೆಂಡರ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಾಲು ಒಕ್ಕೂಟದಲ್ಲಿ ಯಾವುದೇ ಪಕ್ಷ ಬೇಧವಿಲ್ಲ, ಹಾಲಿ ಅಧ್ಯಕ್ಷರು ಅವಕಾಶ ಸದ್ಬಳಸಿಕೊಂಡು ಹಾಲು ಉತ್ಪಾದಕ ರೈತರಿಗೆ ಅನುಕೂಲ ಮಾಡಬೇಕು ಎಂದ ಅವರು, ಈಗಾಗಲೇ ಸಿಎಂ ಸಿದ್ದರಾಮಯ್ಯರಿಗೆ ಹಾಲಿನ ದರ ಹೆಚ್ಚಿಸುವಂತೆ ಮನವಿ ಮಾಡಿದ್ದು, ಅಧಿವೇಶನ ಮುಗಿದ ಬಳಿಕ 3 ರಿಂದ 5 ರು.ಗೆ ಹೆಚ್ಚಿಸುವ ನಿರೀಕ್ಷೆ ಇದೆ. ತುಮಕೂರಿನಲ್ಲಿ ಮೆಗಾ ಡೇರಿ ಕಾಮಗಾರಿ ಪ್ರಾರಂಭವಾಗಿದ್ದು, ಅದನ್ನು ಅತಿ ಶೀಘ್ರ ಮುಗಿಸಬೇಕು. ಮಧುಗಿರಿ ಉಪ ಕೇಂದ್ರದ ಕಚೇರಿ ಆವರಣದಲ್ಲಿ ಪೌಡರ್ ಪ್ಲಾಂಟ್ ಘಟಕ ಸ್ಥಾಪಿಸುವ ಬಗ್ಗೆ ಕ್ರಮ ವಹಿಸುವುದಾಗಿ ಎಂಎಲ್ಸಿ ರಾಜೇಂದ್ರ ಭರವಸೆ ನೀಡಿ, ಅಧ್ಯಕ್ಷ ವೆಂಕಟೇಶ್ ಅವರಿಗೆ ಶುಭ ಹಾರೈಸಿದರು.ಕುಣಿಗಲ್ ತಾಲೂಕಿನಲ್ಲಿ 19 ಸೊಸೈಟಿಗಳಿದ್ದು, 40 ಕೋಟಿಯವರೆಗೂ ಕೆಸಿಸಿ ಸಾಲ ಮತ್ತು 15 ಕೋಟಿ ಎಂಟಿಎಲ್ ಸಾಲ ವಿತರಿಸಲಾಗಿದ್ದು, ಮಾಹಿತಿ ತಿಳಿದುಕೊಳ್ಳದೆ ಮಾತನಾಡುವ ಕೆಲವು ಶಾಸಕರು ಇದ್ದಾರೆ ಎಂದು ಕುಣಿಗಲ್ ಶಾಸಕರ ಹೆಸರೇಳದೆ ರಾಜೇಂದ್ರ ಕುಟುಕಿದರು.
ಲಿಂಕ್ ಕೆನಾಲ್ ವಿಚಾರದಲ್ಲಿ ನಾನು ಮತ್ತು ನಮ್ಮ ತಂದೆಯವರು ಅನಗತ್ಯ ತೊಂದರೆ ನೀಡುತ್ತಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯಿಂದ ಕೊರಟಗೆರೆ ಮತ್ತು ಪಾವಗಡದ ಜನತೆಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ನಮ್ಮ ಪಾಲಿನ ನೀರನ್ನು ನಾವು ಹರಿಸಿಕೊಂಡರೆ ಇವರದ್ದೇನು ತಕರಾರು ಎಂದು ಕುಣಿಗಲ್ ಶಾಸಕರ ಕಾರ್ಯ ವೈಖರಿ ವಿರುದ್ಧ ರಾಜೇಂದ್ರ ಕಿಡಿಕಾರಿದರು.ತುಮುಲ್ ಅಧ್ಯಕ್ಷ ಹಾಗೂ ಪಾವಗಡ ಶಾಸಕ ವೇಂಕಟೇಶ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಾನು ತುಮುಲ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ, ಆದರೆ ಸಿಎಂ ಸಿದ್ದರಾಮಯ್ಯ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತು ಗೃಹ ಡಾ.ಜಿ.ಪರಮೇಶ್ವರ್ ನನ್ನ ಮೇಲೆ ಪ್ರೀತಿ,ವಿಶ್ವಾಸವಿಟ್ಟು ತುಮುಲ್‌ಗೆ ಅಧ್ಯಕ್ಷನನ್ನಾಗಿ ಮಾಡಿದ್ದು, ಅವರ ನಂಬಿಕೆಗೆ ಪೂರಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ತುಮುಲ್ ನಿರ್ದೇಶಕ ಬಿ.ನಾಗೇಶ್ ಬಾಬು, ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬೈರಣ್ಣ, ಟಿಎಪಿಸಿಎಂಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ತುಮುಲ್ ವ್ಯವಸ್ಥಾಪಕ ಜಿ.ಶ್ರೀನಿವಾಸನ್, ಎಆರ್‌ಸಿಎಸ್ ಸಣ್ಣಪ್ಪಯ್ಯ, ರಾಜ್‌ಕುಮಾರ್, ಚಲಪತಿ, ಉಪ ಕಚೇರಿ ಮುಖ್ಯಸ್ಥ ಸಿ.ರಂಜಿತ್, ವಿಸ್ತರಣಾಧಿಕಾರಿ ಕೆ.ಪಿ.ಮಂಜುನಾಥ್, ಸಹನಾ ಸ್ವಾಮಿ, ಲಕ್ಷ್ಮೀಕಾಂತ್, ನಾಗವೇಣಿ, ಮಾಲ ಸೇರಿದಂತೆ ರೈತರು ಹಾಗೂ ಕಚೇರಿ ಸಿಬ್ಬಂದಿ ಇದ್ದರು.ತಂದೆಯವರನ್ನು ಕಟ್ಟಿಹಾಕಲು ಹನಿಟ್ರ್ಯಾಪ್ ಬಳಕೆ:
ಹನಿಟ್ರ್ಯಾಪ್ ಮಾಡಿಸಿದವರಿಗೆ ದೇವರು ಒಳ್ಳೆಯದು ಮಾಡಲಿ, ಇಡೀ ರಾಜ್ಯದಲ್ಲಿ ಸಹಕಾರ ಸಚಿವರಾಗಿರುವ ನನ್ನ ತಂದೆ ಕೆ.ಎನ್.ರಾಜಣ್ಣ ಅವರು ಬಡವರ, ಶೋಷಿತರ ಮತ್ತು ಹಿಂದುಳಿದ ವರ್ಗದ ಜನರ ಬಗ್ಗೆ ಧ್ವನಿ ಎತ್ತುವುದನ್ನು ಕಟ್ಟಿ ಹಾಕಲು ಮುಂದಾದರೆ ಅದು ನಿಮಗೆ ಶೋಭೆ ತರುವುದಿಲ್ಲ. ನನ್ನ ಮೇಲೂ ಸಹ ಹನಿಟ್ರ್ಯಾಪ್ ಪ್ರಯೋಗ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತೇನೆ. ಅವರು ಏನು ಹೇಳುತ್ತಾರೆಯೋ ಅದಕ್ಕೆ ನಾವು ಬದ್ಧ, ಹನಿಟ್ರ್ಯಾಪ್ ಹಿಂದೆ ಯಾರಿದ್ದಾರೆ ಎಂಬುದು ಹೊರಗೆ ಬರಬೇಕು ಎಂದರು.