ಸೈಬರ್‌ ಅಪರಾಧ ತಡೆಗೆ ಕಠಿಣ ಕಾನೂನು: ಡಾ.ಪರಮೇಶ್ವರ್‌

| Published : Oct 30 2023, 12:30 AM IST

ಸೈಬರ್‌ ಅಪರಾಧ ತಡೆಗೆ ಕಠಿಣ ಕಾನೂನು: ಡಾ.ಪರಮೇಶ್ವರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸೈಬರ್ರ್‌ ಕ್ರೈಂ ತಡೆಗೆ ಕಠಿಣ ಕಾನೂನು- ಸಚಿವ
ಕನ್ನಡಪ್ರಭ ವಾರ್ತೆ ಮಂಗಳೂರು ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್‌ ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೊಳಿಸಲಾಗುವುದು. ಅದಕ್ಕಾಗಿ ಈಗಾಗಲೇ ಸಮಿತಿ ರಚನೆ ಮಾಡಿ ಕಾರ್ಯೋನ್ಮುಖರಾಗಿದ್ದೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಭಾನುವಾರ ಮಂಗಳೂರಿನ ನಗರ ಸಶಸ್ತ್ರ ಮೀಸಲು ಪಡೆಯ ನೂತನ ಕಟ್ಟಡ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಸೈಬರ್‌ ಅಪರಾಧಿಗಳು ದೇಶ, ವಿಶ್ವ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಇದನ್ನು ಮಟ್ಟ ಹಾಕಲು ಇದೀಗ ಐಟಿ ಮತ್ತು ಗೃಹ ಇಲಾಖೆಯ ಜಂಟಿ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಶಿಫಾರಸಿನ ಮೇರೆಗೆ ಈಗಿರುವ ಕಾನೂನುಗಳ ಜತೆ ಇನ್ನಷ್ಟು ಕಠಿಣ ಕಾನೂನು ಸೇರಿಸಿ ಜಾರಿಗೆ ತರಲಾಗುವುದು ಎಂದು ಡಾ.ಪರಮೇಶ್ವರ್‌ ಹೇಳಿದರು. ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಸೈಬರ್‌ ಕ್ರೈಂ ಠಾಣೆ ಆರಂಭಿಸಲಾಗಿತ್ತು. ಇದೀಗ ಎಲ್ಲ ಪೊಲೀಸ್‌ ಠಾಣೆಗಳಲ್ಲೂ ಸೈಬರ್ ಕ್ರೈಮ್‌ಗೆ ಸಂಬಂಧಿಸಿದ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ ಎಂದರು. ಕಾವೇರಿ ತಂತ್ರಾಂಶ ಹ್ಯಾಕ್‌: ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿ ಮಾಡಿಸಿದ ಬಳಿಕ ಸೈಬರ್‌ ಅಪರಾಧಿಗಳು ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡುತ್ತಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಅಪರಾಧಿಗಳು ಕಾವೇರಿ ತಂತ್ರಾಂಶವನ್ನು ಹ್ಯಾಕ್‌ ಮಾಡಿದ್ದಾರೆ. ಮಂಗಳೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಮೂರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲೇ ಈ ವಂಚನೆ ಯಾಕೆ ನಡೆಯುತ್ತಿದೆ ಎನ್ನುವುದನ್ನು ಕಂಡುಹಿಡಿಯಲಿದ್ದೇವೆ ಎಂದು ತಿಳಿಸಿದರು. ಪೊಲೀಸರಿಗೆ ಸೈಬರ್, ಕಂಪ್ಯೂಟರ್ ಜ್ಞಾನ: ಪೊಲೀಸ್‌ ಇಲಾಖೆಯನ್ನು ಆಧುನೀಕರಣಗೊಳಿಸುವ ಉದ್ದೇಶ ಸರ್ಕಾರದ್ದಾಗಿದ್ದು, ಅದಕ್ಕಾಗಿ ಪೊಲೀಸ್ ಠಾಣೆಗಳನ್ನು ಆಧುನಿಕರಣಗೊಳಿಸುವ ಕಾರ್ಯ ನಡೆಯುತ್ತಿದೆ. ಜತೆಗೆ ಪೊಲೀಸ್‌ ಸಿಬ್ಬಂದಿಗೂ ಕಂಪ್ಯೂಟರ್‌, ಸೈಬರ್‌ ಮಾಹಿತಿ, ಶಸ್ತ್ರಾಸ್ತ್ರ ಜ್ಞಾನವನ್ನು ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಪೊಲೀಸ್‌ ಇಲಾಖೆಗೆ ಸ್ನಾತಕೋತ್ತರ ಪದವೀಧರರು, ಬಿಇ, ಎಂಬಿಎ ಪದವೀಧರರು ಬರುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಆಧುನೀಕರಣಕ್ಕೆ ಇದು ಕೂಡ ಸಹಾಯಕವಾಗಲಿದೆ. ಪೊಲೀಸ್‌ ತರಬೇತಿ ಪಠ್ಯಕ್ರಮದಲ್ಲಿ ಹೆಚ್ಚುವರಿ ಸಿಲೆಬಸ್‌ಗಳನ್ನು ಸೇರಿಸುವ ಮೂಲಕ ಆಧುನಿಕ ಪೊಲೀಸರನ್ನು ಇಲಾಖೆ ತಯಾರುಗೊಳಿಸಲಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು. ಪೊಲೀಸ್‌ ಹುದ್ದೆ ಭರ್ತಿಗೆ ಕ್ರಮ: ಇಲಾಖೆಯಲ್ಲಿ 18 ಸಾವಿರ ಪೊಲೀಸ್‌ ಕಾನ್ಸ್‌ಟೆಬಲ್‌ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪಿಎಸ್‌ಐ ಹುದ್ದೆಗಳೂ ಖಾಲಿ ಇವೆ. ಈಗಾಗಲೇ ಪಿಎಸ್‌ಐ ನೇಮಕಾತಿ ಹಗರಣ ನ್ಯಾಯಾಲದಲ್ಲಿದೆ. ನ್ಯಾಯಾಲಯಕ್ಕೆ ಈಗಾಗಲೇ ಸರ್ಕಾರದ ಅಭಿಪ್ರಾಯ ತಿಳಿಸಲಾಗಿದೆ. ಕೋರ್ಟ್‌ ತೀರ್ಪು ಏನು ಬರಲಿದೆಯೋ ಅದರಂತೆ ಕ್ರಮ ವಹಿಸಲಾಗುವುದು. ಪ್ರಸ್ತುತ ಎಸ್‌ಐ ಹುದ್ದೆಗಳನ್ನು ಭರ್ತಿಗೊಳಿಸಲು 600ರಷ್ಟು ಎಎಸ್ಐಗಳನ್ನು ಪಿಎಸ್‌ಐಗಳಾಗಿ ಮುಂಬಡ್ತಿ ನೀಡಲಾಗಿದೆ. ಕೋರ್ಟ್ ಆದೇಶದ ಬಳಿಕ ಇನ್ನಷ್ಟು ಎಸ್‌ಐ ಹುದ್ದೆಗಳನ್ನು ಭರ್ತಿಗೊಳಿಸಲು ಕ್ರಮ ವಹಿಸಲಾಗುವುದು ಎಂದು ಡಾ. ಜಿ. ಪರಮೇಶ್ವರ್‌ ತಿಳಿಸಿದರು. ವಿಧಾನ ಪರಿಷತ್‌ ಸದಸ್ಯ ಡಾ. ಮಂಜುನಾಥ ಭಂಡಾರಿ, ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌, ಡಿಸಿಪಿಗಳಾದ ದಿನೇಶ್‌ ಕುಮಾರ್‌, ಸಿದ್ದಾರ್ಥ್‌ ಗೋಯಲ್‌ ಇದ್ದರು. ದೇಶದಲ್ಲೇ ಮೊದಲ ಕಮಾಂಡ್‌ ಸೆಂಟರ್‌ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳ ಪ್ರತಿಕ್ಷಣದ ಚಲನವಲನಗಳ ಮೇಲೆ ನಿಗಾ ಇರಿಸಲು ಬೆಂಗಳೂರಿನಲ್ಲಿ ಕಮಾಂಡ್‌ ಸೆಂಟರ್‌ನ್ನು ಶೀಘ್ರ ಆರಂಭಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ರಾಜ್ಯದ ಪ್ರತಿ ಠಾಣೆಯ ಎಲ್ಲ ಆಗುಹೋಗುಗಳು ಸೆಕೆಂಡುಗಳಲ್ಲಿ ಬೆಂಗಳೂರಿನ ಕಮಾಂಡ್‌ ಸೆಂಟರ್‌ಗೆ ಲಭ್ಯವಾಗಲಿವೆ. ಇದರಿಂದ ತಕ್ಷಣದ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. ಕಮಾಂಡ್‌ ಸೆಂಟರ್‌ ಕಟ್ಟಡ ಕೆಲಸ ನಡೆಯುತ್ತಿದ್ದು, ಇನ್ನು 2-3 ತಿಂಗಳೊಳಗೆ ಕಾರ್ಯಾರಂಭವಾಗುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು. ಜನಸ್ನೇಹಿ ಪೊಲೀಸ್: ಪೊಲೀಸರು ಸಾರ್ವಜನಿಕರ ಜತೆ ಸಂಯಮದಿಂದ ವರ್ತಿಸುವುದು ಹಾಗೂ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಖ್ಯವಾಗಿ ಠಾಣೆಗೆ ಬರುವ ಮಹಿಳೆಯರಿಗೆ ಕಂಫರ್ಟ್‌ ಭಾವನೆ ಸಿಗುವಂತಾಗಬೇಕು. ಯಾವುದೇ ಆತಂಕ, ಭಯ ಇಲ್ಲದೆ ಠಾಣೆಗಳಲ್ಲಿ ಪ್ರಕರಣ ದಾಖಲಿಸಲು ಸಹಕಾರಿಯಾಗುವಂತೆ ರಿಸೆಪ್ಷನ್‌ ಕೌಂಟರ್‌ ತೆರೆಯುವ ಕೆಲಸ ನಡೆಯುತ್ತಿದೆ ಎಂದು ಡಾ.ಪರಮೇಶ್ವರ್ ತಿಳಿಸಿದರು. ಕೋಮು ಪ್ರಚೋದನೆ ವಿರುದ್ಧ ಮುಲಾಜಿಲ್ಲದೆ ಕ್ರಮ- ಕೋಮು ಪ್ರಚೋದನೆ ಮಾಡುವುದು, ಅನೈತಿಕ ಪೊಲೀಸ್‌ಗಿರಿಗೆ ಸಂಬಂಧಿಸಿ ಬಹಳ ಸಂಯಮದಿಂದ ವರ್ತಿಸಬೇಕಿದೆ. ಈಗಾಗಲೇ ಪ್ರತ್ಯೇಕ ತಂಡ ರಚನೆಯಾದ ಬಳಿಕ ಅನೈತಿಕ ಪೊಲೀಸ್‌ಗಿರಿ ಕರಾವಳಿ ಭಾಗದಲ್ಲಿ ಬಹಳಷ್ಟು ನಿಯಂತ್ರಣಕ್ಕೆ ಬಂದಿದೆ. ಇಂತಹ ಕೃತ್ಯಗಳನ್ನು ನಡೆಸುವವರು ಯಾವುದೇ ಜಾತಿ, ಧರ್ಮದವರೇ ಆಗಲಿ ಮುಲಾಜಿಲ್ಲದೆ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಕೈಗೊಳ್ಳಲಿದ್ದೇವೆ ಎಂದು ಗೃಹ ಸಚಿವರು ಎಚ್ಚರಿಸಿದರು. ಇತ್ತೀಚೆಗೆ ಮಂಗಳಾದೇವಿ ಜಾತ್ರೆಯಲ್ಲಿ ಧರ್ಮ ದಂಗಲ್‌ ಪ್ರಕರಣವನ್ನು ನಿಭಾಯಿಸುವಲ್ಲಿ ಸರ್ಕಾರ ಹಿಂದೇಟು ಹಾಕಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಪ್ರಚೋದನೆ ನೀಡಲು ಪ್ರಯತ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ಎಲ್ಲ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ ಎಂದರು.