ಸಾರಾಂಶ
ವಿದ್ಯುತ್ ಕೇಬಲ್ ಅಳವಡಿಕೆಗೆ ಶಾಸಕ ಚಾಲನೆ
ಕನ್ನಡ ಪ್ರಭವಾರ್ತೆ ಕೊಟ್ಟೂರುಪಟ್ಟಣದೊಳಗಿನ ಎಲ್ಲ ವಿದ್ಯುತ್ ಮಾರ್ಗದಲ್ಲಿನ ತಂತಿಗಳನ್ನು ತೆರವು ಮಾಡಿ ₹80 ಲಕ್ಷಗಳಲ್ಲಿ ಕೇಬಲ್ ಅಳವಡಿಕೆ ಮಾಡಲಾಗುತ್ತದೆ ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
ಪಟ್ಟಣದ ಮಹಾತ್ಮಾ ಗಾಂಧಿಜಿ ವೃತ್ತದಲ್ಲಿ ಕೇಬಲ್ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದರು.ಪಟ್ಟಣದ ರಥ ಬೀದಿಯ ಎರಡೂ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗದಲ್ಲಿ ಸದ್ಯ ತಂತಿಗಳಿವೆ. ಇದರಿಂದ ರಥ ಸಾಗುವ ವೇಳೆ ಅಪಾಯವಾಗುವ ಸಾಧ್ಯತೆಗಳಿವೆ. ಅಲ್ಲದೇ ಕೆಲ ಕಡೆ ಕಟ್ಟಡಗಳಿಗೆ ಹತ್ತಿರದಲ್ಲಿ ವಿದ್ಯುತ್ ಲೈನ್ ಇದೆ. ಈ ಹಿನ್ನೆಲೆ ಪಟ್ಟಣ ವ್ಯಾಪ್ತಿಯೊಳಗೆ ಎಲ್ಲ ಮಾರ್ಗದಲ್ಲಿ ತಂತಿ ಬದಲು ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಸದ್ಯ 5 ಕಿಮೀ ಉದ್ದದ ಕೇಬಲ್ ಅಳವಡಿಕೆ ಮಾಡಲಾಗುತ್ತಿದ್ದು, ಇನ್ನೂ 10 ಕಿಮೀ ಉದ್ದದ ಕೇಬಲ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪಟ್ಟಣದಲ್ಲಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪರಿವರ್ತಕ ಸಮಸ್ಯೆಯಿಂದ ಹೆಚ್ಚಿನ ಅಥವಾ ಕಡಿಮೆ ವೋಲ್ಟೇಜ್ ಇರುತ್ತದೆ. ಈ ಸಮಸ್ಯೆ ಪರಿಹರಿಸಲು ಪಟ್ಟಣಕ್ಕೆ ಹೆಚ್ಚುವರಿ 6 ಪರಿವರ್ತಕಗಳನ್ನು ಮಂಜೂರು ಮಾಡಿಸಲಾಗುವುದು. ಯಾವ ಭಾಗದಲ್ಲಿ ಅವಶ್ಯವಿದೆಯೋ ಅಲ್ಲಿ ಟಿಸಿ ಅಳವಡಿಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದು. ಅಲ್ಲದೇ ಕೆಲ ಕಡೆ ಇರುವ ಹಳೆ ಕಂಬ ಬದಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಾರ್ವಜನಿಕರು ತಮ್ಮ ಮನೆ ಮೇಲೆ ವಿದ್ಯುತ್ ಉತ್ಪಾದನೆಗಾಗಿ ಸೋಲಾರ್ ಅಳವಡಿಸಿಕೊಳ್ಳಲು ಕೇಂದ್ರ ಸರಕಾರ ಶೇ.60ರಷ್ಟು ಸಬ್ಸಿಡಿ ನೀಡುತ್ತಿದೆ. ಇದರಿಂದ ಮನೆಗೆ ವಿದ್ಯುತ್ ಬಳಕೆ ಮಾಡಿಕೊಂಡು ಹೆಚ್ಚುವರಿ ವಿದ್ಯುತ್‌ನ್ನು ಜೆಸ್ಕಾಂಗೆ ಮಾರಾಟ ಮಾಡಿದರೆ ಯೂನಿಟ್‌ಗೆ ₹3.20 ಸಿಗಲಿದೆ. ಈ ಕುರಿತು ಜನತೆಗೆ ಹೆಚ್ಚು ಪ್ರಚಾರ ಮಾಡಿ ಜಾಗೃತಿ ಮೂಡಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.ಕೊಟ್ಟೂರು ಕೆರೆ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನ ನೀಡಿದ್ದೇನೆ. ಈ ಬಾರಿ ಕೆರೆ ತುಂಬಿರುವುದರಿಂದ ಆ.19ರಂದು ಉಜ್ಜಯಿನಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪಟ್ಟಣದ ಜನತೆ ಪರವಾಗಿ ಗಂಗೆ ಪೂಜೆ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಲಿದೆ. ಅಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಬರಲು ಸೂಚಿಸಿದ್ದು, ಕೆರೆ ತೂಬು, ಕೂಡಿಯಲ್ಲಿನ ಸೋರಿಕೆ, ಸುಂದರೀಕರಣ ಕುರಿತು ಚರ್ಚೆ ನಡೆಸಿ ಅಗತ್ಯ ಅನುದಾನ ನೀಡಲಾಗುವುದು ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ, ಜೆಡಿಎಸ್ ಕ್ಷೇತ್ರ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜೆಡಿಎಸ್ ಮುಖಂಡ ಬಾದಾಮಿ ಮುತ್ತಣ್ಣ, ಯುವ ಮುಖಂಡ ಎಂಎಂಜೆ ಶೋಭಿತ್, ಪಪಂ ಸದಸ್ಯ ಬಿ.ಶಿವಾನಂದ, ಜೆಸ್ಕಾಂ ಎಇಇ ನಾಗರಾಜ, ಎಇ ಚೇತನ್, ಮುಖಂಡರಾದ ಫಕ್ಕೀರಪ್ಪ, ಸೈಫುಲ್ಲಾ, ವಿಜಯನಗರ ಕೊಟ್ರೇಶ, ಅಜ್ಜನಗೌಡ, ರುದ್ರಮುನಿ ಸೇರಿ ಅನೇಕರು ಇದ್ದರು.