ರಾಜಾಸೀಟಿನಲ್ಲಿ ‘ಪುಟಾಣಿ ರೈಲು’ ಆರಂಭಕ್ಕೆ ಕ್ರಮ: ವೆಂಕಟ್ ರಾಜಾ

| Published : Jul 15 2025, 11:45 PM IST

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಯಿತು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜಾಸೀಟಿನಲ್ಲಿ ಮಕ್ಕಳ ಪುಟಾಣಿ ರೈಲು ಆರಂಭ ಸಂಬಂಧ ದಕ್ಷಿಣ ವಲಯ ರೈಲ್ವೆ ವಿಭಾಗದ ಎಂಜಿನಿಯರ್‌ಗಳು ಪರಿಶೀಲಿಸಿದ್ದು, ಈ ಬಗ್ಗೆ ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರೈಲು ಬೋಗಿ ಅಳವಡಿಸುವುದು ಸೇರಿದಂತೆ ದಕ್ಷಿಣ ರೈಲ್ವೆ ವಲಯದ ವಿಭಾಗದ ಎಂಜಿನಿಯರ್‌ಗಳು ಮಾಹಿತಿ ಪಡೆದಿದ್ದು, ಈ ಸಂಬಂಧ ವರದಿ ಬಂದ ನಂತರ ಪುಟಾಣಿ ರೈಲು ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.ಈ ಕುರಿತು ವಿಷಯ ಪ್ರಸ್ತಾಪಿಸಿದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವಿಶೇಷ ಆಹ್ವಾನಿತರಾದ ಜಿ.ಚಿದ್ವಿಲಾಸ್, ರಾಜಾಸೀಟಿನಲ್ಲಿ ಮಕ್ಕಳ ರೈಲು ಸ್ಥಗಿತವಾಗಿ ಹಲವು ವರ್ಷಗಳಾಗಿದ್ದು, ಈ ಬಗ್ಗೆ ತುರ್ತು ಕ್ರಮವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು.

ನಗರದ ಅಜ್ಜಮಾಡ ದೇವಯ್ಯ ವೃತ್ತದ ಬಳಿ ‘ಮರ್ಕರ ಸ್ಕ್ವೇರ್’ ಅನ್ನು ಆಕರ್ಷಣೀಯಗೊಳಿಸಿ ಅಭಿವೃದ್ಧಿ ಪಡಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಬಳಿಕ ಮಾತನಾಡಿದ ಚಿದ್ವಿಲಾಸ್ ಅವರು ಮಡಿಕೇರಿ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಕಿರಿದಾದ ರಸ್ತೆಗಳು ಇರುವುದರಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಬೇಕು ಎಂದು ಪ್ರಸ್ತಾವನೆ ಇದ್ದು, ಈ ಸಂಬಂಧ ತುರ್ತಾಗಿ ಆದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಇದಕ್ಕಾಗಿ ಅನುದಾನ ಮೀಸಲಿದ್ದು, ಟೆಂಡರ್ ಹಂತದಲ್ಲಿದೆ ಎಂದು ಹೇಳಿದರು. ದಸರಾ ಸಂದರ್ಭದಲ್ಲಿ ‘ಆಹಾರ ಮೇಳ’ ಆಯೋಜಿಸುವಂತಾಗಬೇಕು ಎಂದು ಜಿ.ಚಿದ್ವಿಲಾಸ್ ಸಲಹೆ ನೀಡಿದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ದಸರಾಗು ಮೊದಲೇ ಆಹಾರ ಮೇಳ ಆಯೋಜಿಸುವುದು ಒಳ್ಳೆಯದು ಎಂದರು.

ದುಬಾರೆಯಲ್ಲಿ ತೂಗುಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರೆತ್ತಿದ್ದು, ಶೀಘ್ರ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಈ ಸಂದರ್ಭ ಮಾತನಾಡಿದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಕುಶಾಲನಗರ ಬಳಿಯ ತಾವರೆಕೆರೆ ಅಭಿವೃದ್ಧಿಪಡಿಸಿದ್ದಲ್ಲಿ ಇದನ್ನು ಸಹ ಪ್ರವಾಸಿ ತಾಣವನ್ನಾಗಿ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.

ಹೋಟೆಲ್ ಅಸೋಷಿಯೇಷನ್‌ನ ದಿನೇಶ್ ಕಾರ್ಯಪ್ಪ ಮಾತನಾಡಿ, ಪ್ರವಾಸಿ ಸ್ಥಳಗಳ ಬಳಿ ಸೈನ್‌ಬೋರ್ಡ್ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಹೋಂ ಸ್ಟೇ ಅಸೋಷಿಯೇಷನ್‌ನ ಮಾಜಿ ಅಧ್ಯಕ್ಷ ಕರುಂಬಯ್ಯ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳು ಸಂಚಾರ ಮಾಡುತ್ತಿದ್ದು, ಈ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸುವಂತಾಗಬೇಕು ಎಂದು ಕೋರಿದರು.ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಮಾತನಾಡಿ, ಮುಂದಿನ ದಿನಗಳಲ್ಲಿ ಕಾಫಿ ತಯಾರಿಸುವ ವಿಧಾನ ಕುರಿತು ತರಬೇತಿ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಕಾಫಿ ಮಂಡಳಿ ಅಧ್ಯಕ್ಷರನ್ನು ಜಿಲ್ಲೆಗೆ ಆಹ್ವಾನಿಸಲಾಗುವುದು ಎಂದು ಹೇಳಿದರು.ಈ ಸಂದರ್ಭ ಮಾತನಾಡಿದ ಚಿದ್ವಿಲಾಸ್, ಅನಧಿಕೃತ ಹೋಂಸ್ಟೇಗಳಿಗೆ ಮಾಹಿತಿ ನೀಡಿ ನೋಂದಣಿ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ಅನಧಿಕೃತ ಹೋಂ ಸ್ಟೇ ತಡೆಯಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೋಂಸ್ಟೇಗಳ ನೋಂದಣಿ ಹೆಚ್ಚಾಗಿದೆ ಎಂದು ಹೇಳಿದರು.

ಪ್ರಚಾರ ಅಗತ್ಯ:

ಕೊಡಗು ಪತ್ರಕರ್ತರ ಸಂಘ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಹೊರಜಿಲ್ಲೆಗಳಲ್ಲಿ ಕೊಡಗಿನ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚು ಪ್ರಚಾರ ಆಗಬೇಕು. ಬಾನುಲಿ ಎಫ್.ಎಂ., ಮಲ್ಟಿಪ್ಲೆಕ್ಸ್‌ಗಳಲ್ಲಿ ಕೊಡಗಿನ ಬಗ್ಗೆ ಪ್ರಚಾರ ಆದಾಗ ಪ್ರವಾಸಿಗರಿಗೂ ಕೊಡಗಿನ ಬಗ್ಗೆ ಅಗತ್ಯ ಮಾಹಿತಿ ದೊರಕುತ್ತದೆ ಎಂದರಲ್ಲದೆ, ರಾಜ್ಯಮಟ್ಟದ ಮತ್ತು ಇತರ ರಾಜ್ಯಗಳ ಪತ್ರಿಕೆಗಳಲ್ಲಿ ಕೊಡಗು ಪ್ರವಾಸದ ಬಗ್ಗೆ ಮಾಹಿತಿ ಲೇಖನ ಪ್ರಕಟ ಆಗಬೇಕು. ಈ ಮೂಲಕ ಪ್ರವಾಸಿಗರಿಗೆ ದೊಡ್ಡ ರೀತಿಯಲ್ಲಿ ಕೊಡಗಿನ ಪರಿಚಯ ಆಗಲಿದೆ ಎಂದರು.

ಜಿಲ್ಲಾ ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷ ಮೋಂತಿ ಗಣೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನೆಹರು, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎನ್.ಎಸ್.ಪಣೀಂದ್ರ, ಪರಿಸರ ಅಧಿಕಾರಿ ರಘುರಾಮ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಕೆಆರ್‌ಐಡಿಎಲ್ ಸಂಸ್ಥೆಯ ಎಂಜಿನಿಯರ್ ಪ್ರಮೋದ್, ಕೊಡಗು ಜಿಲ್ಲಾ ಟೂರ್ ಆ್ಯಂಡ್ ಟ್ರಾವೆಲ್ ಅಧ್ಯಕ್ಷ ವಸಂತ್, ಸೋಮವಾರಪೇಟೆ ತಾಲೂಕಿನ ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷ ರೋಹಿತ್, ದುಬಾರೆ ರಿವರ್ ರ‍್ಯಾಪ್ಟಿಂಗ್ ಅಸೋಷಿಯೇಷನ್ ಅಧ್ಯಕ್ಷ ಚಂಗಪ್ಪ, ಬರಪೊಳೆ ರಿವರ್ ರ‍್ಯಾಪ್ಟಿಂಗ್ ಅಧ್ಯಕ್ಷ ರತನ್ ಸಿ.ಎಸ್., ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರಾದ ಜತಿನ್ ಇತರರು ಇದ್ದರು.--------------

ವಾಹನ ಪಾರ್ಕಿಂಗ್ ಸ್ಥಳವನ್ನು ಗುರುತು ಮಾಡಬೇಕು. ಹೋಟೆಲ್, ಹೋಂಸ್ಟೇ ರೆಸಾರ್ಟ್‌ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಸಿಸಿಟಿವಿ ಫೂಟೇಜ್‌ನಿಂದ ಮಾಹಿತಿ ಪಡೆಯಲು ಸಾಧ್ಯವಾಗಲಿದ್ದು, ಆ ನಿಟ್ಟಿನಲ್ಲಿ ಸಾಮೂಹಿಕ ಜವಾಬ್ದಾರಿ ಅಗತ್ಯ.

। ಕೆ.ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ