ಸಾರಾಂಶ
ಬೀದಿನಾಯಿಗಳ ಸಂತಾನಹರಣ ಕೇಂದ್ರಗಳ ಬಲವರ್ಧನೆಗೆ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ಕಾರ್ಯಕ್ಕೆ ಬಲವರ್ಧನೆ ಹಾಗೂ ಕೆನಲ್ಸ್‌ಗಳ (ನಾಯಿಗಳ ಆಶ್ರಯ ತಾಣ) ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಕೈಗೊಂಡು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಸುರಳ್ಕರ್ ಕಿಶೋರ್ ತಿಳಿಸಿದ್ದಾರೆ.ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಬಿಬಿಎಂಪಿ ವ್ಯಾಪ್ತಿಯ ಎಲ್ಲ ಎಬಿಸಿ ಕೇಂದ್ರಗಳನ್ನು ಒಳಗೊಂಡಂತೆ ಒಂದು ನಾಯಿ ಇಡಬಹುದಾದ 424 ಕೆನಲ್ಸ್, 10 ರಿಂದ 15 ನಾಯಿಗಳನ್ನು ಇಡಬಹುದಾದಂತಹ 8 ಕೆನಲ್ಸ್ ಹಾಗೂ ರೇಬೀಸ್ ನಾಯಿಗಳಿಗಾಗಿ ಚಿಕಿತ್ಸೆ ನೀಡಲು 4 ಐಸೋಲೇಷನ್ ಕೆನಲ್ಸ್‌ಗಳಿದ್ದು, ಅವುಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪಾಲಿಕೆಯು ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರಗಳ ದುರಸ್ತಿ ಮತ್ತು ವಿಸ್ತರಣಾ ಕಾಮಗಾರಿಗಳಿಗೆ ಪ್ರಸಕ್ತ ಸಾಲಿನಲ್ಲಿ ಅಂದಾಜು ₹1.77 ಕೋಟಿ ಅನುದಾನ ಮೀಸಲಿಡಲಾಗಿದೆ. ಡಬ್ಲ್ಯೂವಿಎಸ್ ಮತ್ತು ಕೇರ್ ಸಂಸ್ಥೆಯ ಸಹಯೋಗದೊಂದಿಗೆ ಬಿಬಿಎಂಪಿಯ ಪಶುಪಾಲನಾ ವಿಭಾಗ ನಾಯಿ ಕಡಿತ ಪ್ರಕರಣ ಹಾಗೂ ರೇಬೀಸ್ ಶಂಕಿತ ಪ್ರಕರಣಗಳ ದೂರುಗಳಿಗಾಗಿ ರೇಬೀಸ್ ಸಹಾಯವಾಣಿ ಸಂಖ್ಯೆ 63648 93322ಕ್ಕೆ ಕರೆ ಮಾಡಬಹುದಾಗಿದೆ. ಜತೆಗೆ ಪಾಲಿಕೆ ಸಹಾಯವಾಣಿ ಸಂಖ್ಯೆ 1533ಗೂ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.