ಕನ್ನಡಪ್ರಭ ವಾರ್ತೆ ಬೆಂಗಳೂರು

‘ಯಾವುದೇ ಪೊಲೀಸ್​ ಅಧಿಕಾರಿ ಡೀಲ್ ಹಾಗೂ ಅಪರಾಧಗಳಲ್ಲಿ ಭಾಗಿಯಾಗುವಂತಿಲ್ಲ. ಒಂದು ವೇಳೆ ಅಂಥ ಆರೋಪಗಳು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇದು ನನ್ನ ಮನವಿ ಎಂದಾದರೂ ಭಾವಿಸಿ, ಸೂಚನೆ ಎಂದಾದರೂ ಭಾವಿಸಿ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಶನಿವಾರ ನಡೆದ ರಾಜ್ಯದ ಜಿಲ್ಲಾ ಘಟಕಗಳಿಗೆ 32 ಅತ್ಯಾಧುನಿಕ ಮೊಬೈಲ್ ಫೊರೆನ್ಸಿಕ್ ವ್ಯಾನ್ ಹಾಗೂ 75 ಬೊಲೆರೋ ವಾಹನಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರು. ಅಪರಾಧಗಳನ್ನು ತಡೆಯಬೇಕಾದವರು ಅಂಥವರೇ ಭಾಗಿಯಾದರೆ ನಿರ್ದಾಕ್ಷಿಣ್ಯ ಕ್ರಮ ಎದುರಿಸಬೇಕು. ನಮ್ಮ ಪೊಲೀಸ್ ಇಲಾಖೆ ದೇಶದಲ್ಲೇ ದಕ್ಷ ಇಲಾಖೆ ಎಂದು ಹೆಸರು ಪಡೆದಿದೆ. ಅದು ನಿಮ್ಮ ಸೇವೆ ಹಾಗೂ ಪರಿಶ್ರಮದಿಂದಲೇ ಆಗಿದೆ. ಇದನ್ನು ಉಳಿಸಿಕೊಂಡು ಹೋಗಬೇಕು ಎಂದರು.

ಪೊಲೀಸ್‌ ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು, ಯಾರೊಬ್ಬರೂ ಲಂಚ ಕೊಟ್ಟು ಕೆಲಸಕ್ಕೆ ಸೇರಬಾರದು. ಸರ್ಕಾರ ನಿಮ್ಮ ಜೊತೆ ಇರುತ್ತದೆ. ನೀವು ನಿಮ್ಮ ಕರ್ತವ್ಯನ್ನು ಸರಿಯಾಗಿ ನಿಭಾಯಿಸಿ ಎಂದು ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.


ಡ್ರಗ್ ಜಾಲ ಪತ್ತೆ-ಪೊಲೀಸರ ತಂಡಕ್ಕೆ 10 ಲಕ್ಷ ನಗದು:

ಗಡಿಯಲ್ಲಿ ಸೈನಿಕ, ಗಡಿಯೊಳಗೆ ಆರಕ್ಷಕ. ಈ ಇಬ್ಬರಿಂದ ನಮ್ಮ ರಾಜ್ಯ ಹಾಗೂ ದೇಶ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿದೆ. ನಮ್ಮ ಪೊಲೀಸರು ಒಂದು ವರ್ಷದಲ್ಲಿ 375 ಕೋಟಿ ರು. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿಗಳು 1500 ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದು, ಇದು ದೊಡ್ಡ ದಾಖಲೆ. ಡ್ರಗ್ಸ್ ಜಾಲವನ್ನು ಬೇಧಿಸಿದ ತಂಡಕ್ಕೆ ಸರ್ಕಾರ 10 ಲಕ್ಷದ ನಗದು ಬಹುಮಾನ ನೀಡಲು ತೀರ್ಮಾನಿಸಿದೆ ಎಂದು ಶಿವಕುಮಾರ್‌ ಹೇಳಿದರು.

ಇತ್ತೀಚೆಗೆ ಕೇರಳ ಗೃಹಸಚಿವರಾದ ರಮೇಶ್ ಚೆನ್ನಿತ್ತಾಲ ಅವರು ನನ್ನನ್ನು ಭೇಟಿ ಮಾಡಿ ಕರ್ನಾಟಕ ಗಡಿ ದಾಟಿ ಯಾವುದೇ ಮಾದಕ ವಸ್ತು ಕೇರಳ ಗಡಿ ಮೂಲಕ ಹೋಗಬಾರದು ಎಂಬ ವಿಚಾರವಾಗಿ ಕೆಲ ಮಾಹಿತಿ ಹಾಗೂ ಮನವಿ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಮಾದಕ ವಸ್ತು ಬರದಂತೆ ತಡೆಯಲಾಗುವುದು ಎಂದು ಅವರಿಗೆ ಆಶ್ವಾಸನೆ ನೀಡಿದ್ದೇನೆ ಎಂದರು.ದೇವಾಲಯಗಳ ಹುಂಡಿ ರಕ್ಷಣೆಗೆ ತೀರ್ಮಾನರಾಮಮಂದಿರದಲ್ಲಿ ಯಾವ ರೀತಿ ಕಳ್ಳತನವಾಗಿದೆ ಎಂದು ಗಮನಿಸಿದ್ದೀರಿ. ನಮ್ಮ ರಾಜ್ಯದಲ್ಲಿ ಮುಂಜಾಗ್ರತೆಯಿಂದ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ಸ್ಥಳೀಯ ಮುಖಂಡರು, ಪೊಲೀಸ್ ಅಧಿಕಾರಿಗಳು ಸೇರಿ ಹುಂಡಿ ತೆಗೆಯುವುದರಿಂದ, ಹಣ ಏಣಿಕೆ ಮಾಡುವುದು ಸೇರಿ ಅವುಗಳನ್ನು ಬ್ಯಾಂಕಿಗೆ ಸಲ್ಲಿಸುವವರೆಗೂ ಎಲ್ಲವನ್ನು ವಿಡಿಯೋ ದಾಖಲಾತಿ ಮಾಡಬೇಕು ಎಂದು ಮಾರ್ಗದರ್ಶನ ನೀಡಿದ್ದೇನೆ. ಸದ್ಯದಲ್ಲೇ ಆದೇಶ ಹೊರಡಿಸಲಿದ್ದು, ನಮ್ಮ ತೀರ್ಮಾನದಿಂದ ಖಾಸಗಿ ದೇವಾಲಯ ಹಾಗೂ ಮಠ ಮಾನ್ಯಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ರಾಜ್ಯ ಡಿಜಿಪಿ ಎಂ.ಎ ಸಲೀಂ, ನಗರ ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಜರಿದ್ದರು.

ಎಚ್ಡಿಕೆ ಪ್ರಧಾನಿ ಜತೆ ಮಾತನಾಡಲಿ: ಡಿಕೆ

ನದಿ ಜೋಡಣೆ ರಿಯಲ್‌ ಎಸ್ಟೇಟ್‌ ವ್ಯವಹಾರವಲ್ಲ, ನೀರಿನ ಪ್ರಮಾಣ ನಿಗದಿಯಾಗಬೇಕು ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಕುಮಾರಸ್ವಾಮಿ ಅವರು ಮೊದಲು ಪ್ರಧಾನಿ ಹಾಗೂ ಕೇಂದ್ರದ ಜಲಶಕ್ತಿ ಸಚಿವರನ್ನು ಭೇಟಿ ಮಾಡಲಿ. ಈ ಯೋಜನೆ ಬಗ್ಗೆ ಮಾಹಿತಿ ಪಡೆದು ನಂತರ ಮಾತನಾಡಲಿ ಎಂದು ತಿರುಗೇಟು ನೀಡಿದರು.