ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಮುಂಬರಲಿರುವ ಲೋಕಸಭಾ ಚುನಾವಣೆ ದೇಶ ಕಟ್ಟುವ ಚುನಾವಣೆಯಾಗಿದೆ. ಆದ್ದರಿಂದ ‘ಬೂತ್ ಗೆದ್ದರೆ ದೇಶ ಗೆದ್ದಂತೆ’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ, ಬಿಜೆಪಿಯ ಬೂತ್ ಚುನಾವಣಾ ನಿರ್ವಹಣಾ ಸಮಿತಿಯ ಸದಸ್ಯರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಬೂತ್ ಗೆಲ್ಲಿಸುವ ಗುರಿಯೊಂದಿಗೆ ಪಕ್ಷದ ವಿಜಯ ಯಾತ್ರೆಯನ್ನು ಮುಂದುವರಿಸಲು ಕಂಕಣಬದ್ಧರಾಗಬೇಕು ಎಂದು ಲೋಕಸಭಾ ಚುನಾವಣಾ ಕರಾವಳಿ - ಮಲೆನಾಡು ಕ್ಲಸ್ಟರ್ ಪ್ರಭಾರಿ ಎಂ. ಬಿ. ಭಾನುಪ್ರಕಾಶ್ ಹೇಳಿದರು.ಅವರು ಮಂಗಳವಾರ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಲೋಕಸಭಾ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡಿದರು.ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಂಪರ್ಕಿಸುವ, ಹೊಸ ಯುವ ಮತದಾರರನ್ನು ಬಿಜೆಪಿ ಪರ ಮತದಾನಕ್ಕೆ ಪ್ರೇರೇಪಿಸುವ, ಬೂತ್ ಮಟ್ಟದಲ್ಲಿ ಹೊಸ ಕಾರ್ಯಕರ್ತರ ಸೇರ್ಪಡೆಗೆ ಹೆಚ್ಚಿನ ಒತ್ತು ನೀಡುವ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಚುನಾವಣಾ ನಿರ್ವಹಣಾ ಕೆಲಸ ಕಾರ್ಯಗಳ ಜೊತೆಗೆ ಪಕ್ಷ ನೀಡಿರುವ ವಿವಿಧ ಅಭಿಯಾನಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಗುರುತರವಾದ ಜವಾಬ್ದಾರಿ ಅಭಿಯಾನಗಳ ಸಂಚಾಲಕರು, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರ ಸಂಘಟಿತ ಪರಿಶ್ರಮ ಮತ್ತು ಸಹಕಾರ ಅತ್ಯವಶ್ಯಕ. ಸದೃಢ ಪಕ್ಷ ಸಂಘಟನೆ ಮತ್ತು ಪರಿಣಾಮಕಾರಿ ಚುನಾವಣಾ ಪ್ರಚಾರ ಕಾರ್ಯ ನಡೆಸಬೇಕು ಎಂದು ಕರೆ ನೀಡಿದರು.ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ, ಉಡುಪಿ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಯಾದಿಯನ್ನು ಬಿಡುಗಡೆಗೊಳಿಸಿದರು.ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪ್ರ. ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಮಹಿಳಾ ಮೋರ್ಚಾ ರಾಜ್ಯ ಪ್ರ. ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಲೋಕಸಭಾ ಚುನಾವಣಾ ವಿಧಾನಸಭಾ ಕ್ಷೇತ್ರಗಳ ಪ್ರಭಾರಿಗಳಾದ ನಯನಾ ಗಣೇಶ್, ರಾಜೇಶ್ ಕಾವೇರಿ, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಶ್ಯಾಮಲಾ ಎಸ್. ಕುಂದರ್ ವಿವಿಧ ವಿಭಾಗಗಳ ಪ್ರಮುಖರು ಉಪಸ್ಥಿತರಿದ್ದರು.ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ವಂದಿಸಿದರು.