ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವಿಡಿಯೋ ಹರಿಬಿಟ್ಟು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೌರವಕ್ಕೆ ಧಕ್ಕೆ ಯತ್ನಿಸಿದ ಪ್ರಕರಣದ ಕುರಿತು ಸಿಸಿಬಿ ಸೈಬರ್‌ ಕ್ರೈಂ ಪೊಲೀಸರ ತನಿಖೆಗೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವಿಡಿಯೋ ಹರಿಬಿಟ್ಟು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೌರವಕ್ಕೆ ಧಕ್ಕೆ ಯತ್ನಿಸಿದ ಪ್ರಕರಣದ ಕುರಿತು ಸಿಸಿಬಿ ಸೈಬರ್‌ ಕ್ರೈಂ ಪೊಲೀಸರ ತನಿಖೆಗೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಅವರು ನೀಡಿದ ದೂರು ಆಧರಿಸಿ ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಬೆನ್ನಲ್ಲೇ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದ್ದ ಖಾತೆ ಐಪಿ ಅಡ್ರೆಸ್ ಆಧರಿಸಿ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ಶೀಘ್ರ ಆರೋಪಿಗಳ ಬಂಧನವಾಗಲಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಸಿದ್ದು ದೂರು ಹಿನ್ನೆಲೆ ತನಿಖೆ:

ಕೆಲ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಡಿಯೋಗೆ ನನ್ನ ಹೆಸರನ್ನು ಜೋಡಿಸಿ ಅಪಪ್ರಚಾರ ನಡೆಯುತ್ತಿದೆ. ರಾಜಕೀಯ ದುರುದ್ದೇಶದಿಂದ ನನ್ನ ಚಾರಿತ್ರ್ಯಹರಣ ಮಾಡಲು ಪ್ರಯತ್ನ ನಡೆಸಿದ್ದಾರೆ. ಈ ಸ್ಟಿಂಗ್ ಆಪರೇಷನ್ ವಿಡಿಯೋ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ ಪೊಲೀಸ್ ಆಯುಕ್ತರಿಗೆ ಸಿದ್ದರಾಮಯ್ಯ ದೂರು ನೀಡಿದ್ದಾರೆ. ಈ ದೂರಿನ ಬಗ್ಗೆ ತನಿಖೆ ನಡೆಸುವಂತೆ ಸಿಸಿಬಿ ಸೈಬರ್ ಪೊಲೀಸರಿಗೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ. ಈ ಬೆನ್ನಲ್ಲೇ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆಗಿಳಿದಿದ್ದಾರೆ. ಕೆಲ ಶಂಕಿತರ ಮೇಲೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಅಜ್ಞಾತವಾಗಿರುವ ಕಿಡಿಗೇಡಿಗಳ ಪತ್ತೆಗೆ ಮೊಬೈಲ್ ಕರೆಗಳು ಹಾಗೂ ಯೂಟ್ಯೂಬ್‌ ಚಾನಲ್‌ಗಳನ್ನು ಪೊಲೀಸರು ಶೋಧಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಸ್ಟಿಂಗ್‌ ಬಗ್ಗೆ ಸಿಎಂ ತನಿಖೆ ನಡೆಸಲಿ: ರಾಜಣ್ಣ ಆಗ್ರಹ:ಸ್ಟಿಂಗ್‌ ಆಪರೇಷನ್‌ನ ಮಾಹಿತಿಗಳು ಮುಖ್ಯಮಂತ್ರಿ ಅವರಿಗೆ ತಿಳಿದಿದ್ದು, ಅವರೇ ಸಚಿವ ಸಂಪುಟ ಸಭೆಯಲ್ಲಿ ಹಾಗೂ ಮಾಧ್ಯಮಗಳಿಗೂ ಮಾಹಿತಿ ನೀಡಿದ್ದಾರೆ. ಹೀಗಾಗಿ ಅದರ ಬಗ್ಗೆ ತನಿಖೆ ನಡೆಸಿ ಸ್ಟಿಂಗ್‌ನ ಮೂಲ ಪತ್ತೆ ಮಾಡಿ ಪೂರ್ಣ ವಿರಾಮ ಹಾಕಬೇಕು ಎಂದು ಮಾಜಿ ಸಚಿವ ಕೆ.ಎನ್‌.ರಾಜಣ್ಣ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಸ್ಟಿಂಗ್ ಆಪರೇಷನ್‌ ವಿಚಾರಕ್ಕೆ ತೆರೆ ಎಳೆಯಬೇಕೆಂದರೆ ಮುಖ್ಯಮಂತ್ರಿ ಅವರು ತನಿಖೆ ಮಾಡಿಸಬೇಕು. ಮುಖ್ಯಮಂತ್ರಿ ಅವರು ವಿಚಾರ ಪ್ರಸ್ತಾಪಿಸಿದ್ದಾರೆ, ಅದರ ಬಗ್ಗೆ ತನಿಖೆ ಮಾಡಿಸಿದರೆ ಎಲ್ಲವೂ ಗೊತ್ತಾಗುತ್ತದೆ. ಅದು ಅವರ ಆದ್ಯ ಕರ್ತವ್ಯ. ಈ ವಿಚಾರಗಳು ರಾಜ್ಯಕ್ಕೆ ಅವಮಾನ ಉಂಟು ಮಾಡುತ್ತಿದೆ. ಮುಖ್ಯಮಂತ್ರಿ ಅವರ ಹೇಳಿಕೆ ವಿಚಾರ ಹೈಕಮಾಂಡ್ ಗಮನಕ್ಕೂ ಬಂದಿರಬಹುದು. ಆದರೆ, ಅವರು ಯಾವ ರೀತಿ ಅದನ್ನು ತೆಗೆದುಕೊಂಡಿದ್ದಾರೆ ನನಗೆ ತಿಳಿದಿಲ್ಲ ಎಂದರು.

ನಾಯಕತ್ವ ಬದಲಾವಣೆಯಲ್ಲಿ ‘ಸ್ಟಿಂಗ್‌’ ತಳ್ಳಿಹಾಕಲ್ಲ:ನಾಯಕತ್ವ ಬದಲಾವಣೆಯಲ್ಲೂ ಸ್ಟಿಂಗ್‌ ಆಪರೇಷನ್‌ ಕಾರಣವಹಿಸಿರುವುದನ್ನು ತಳ್ಳಿ ಹಾಕಲಾಗುವುದಿಲ್ಲ. ಈಗ ಸಿದ್ದರಾಮಯ್ಯ ಅವರ ಮೇಲಿನ ಆರೋಪ 2011ರದ್ದು. ಈ ಸ್ಟಿಂಗ್‌ ಆಪರೇಷನ್‌ ಹಿಂದೆ ಬಹಳಷ್ಟು ಜನರಿದ್ದಾರೆ. ಒಂದು ಫ್ಯಾಕ್ಟರಿಯೇ ಇದರ ಕೆಲಸ ಮಾಡುತ್ತಿದೆ. ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗುತ್ತಿದೆ. ನನ್ನ ವಿರುದ್ಧವೂ ಸ್ಟಿಂಗ್‌ ಮಾಡುವ ಯತ್ನಗಳಾಗಿದ್ದವು. ಯಾರು ಮಾಡಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ಈ ಹಿಂದೆ ರಮೇಶ್‌ ಜಾರಕಿಹೊಳಿ ವಿರುದ್ಧ ಯಾರು ಮಾಡಿದ್ದು ಎಂಬುದು ತಿಳಿದಿದೆಯಲ್ಲ. ರಾಜ್ಯದ ಎಲ್ಲ ನಾಯಕರ, ಎಲ್ಲ ಪಕ್ಷದವರ ಮಾನ ಮರ್ಯಾದೆ ಹರಾಜಾಗುತ್ತಿದೆ. ಈಗ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವ ಕೆಲಸ ಆಗುತ್ತಿದ್ದು, ಅದರು ಪಕ್ಷದ ಮೇಲೂ ಪರಿಣಾಮ ಬೀರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿದ್ದರಾಮಯ್ಯ ಕುರಿತು ಎಚ್‌.ಡಿ.ಕುಮಾರಸ್ವಾಮಿ ಅನುಕಂಪ ತೋರುತ್ತಿರುವ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಸಿದ್ದರಾಮಯ್ಯ ಅವರ ಮೇಲೆ ಅನುಕಂಪ ತೋರಿಸುತ್ತಿರುವುದು ಸಮಯ ಸಾಧಕತನವಷ್ಟೇ. ಯಾವಾಗ ಅನುಕಂಪ ತೋರಿಸಬೇಕಿತ್ತೋ ಆಗ ತೋರಿಸಲಿಲ್ಲ. ಈಗ ಅನುಕಂಪ ತೋರಿಸುತ್ತಿದ್ದಾರೆ. ಅದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ ಅಷ್ಟೇ ಎಂದರು.

ಅಹಿಂದ ನಾಯಕರನ್ನು ಒಗ್ಗೂಡಿಸುತ್ತೇನೆ:ಅಹಿಂದ ನಾಯಕರನ್ನು ಒಗ್ಗೂಡಿಸುವ ಪ್ರಯತ್ನದ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ಅಹಿಂದ ನಾಯಕರನ್ನು ಒಗ್ಗೂಡಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ನಾನು ಆ ಪ್ರಯತ್ನ ಮಾಡುತ್ತಿದ್ದೇನೆ. ಅದರಲ್ಲಿ ಯಶಸ್ವಿಯಾಗುತ್ತೇನೆ. ಒಬ್ಬೊಬ್ಬರ ಬಳಿಯಲ್ಲಿ ಮಾತನಾಡುತ್ತಿದ್ದೇನೆ. ಸತೀಶ್‌ ಜಾರಕಿಹೊಳಿ ಕೂಡ ಅಹಿಂದ ಹಿನ್ನೆಲೆಯವರೇ. ಅವರು ಅಹಿಂದ ಬಿಟ್ಟು ಹೋಗುವುದಿಲ್ಲ. ಇನ್ನು, ನಾಯಕರ ಒಗ್ಗೂಡಿಸುವ ಕುರಿತಂತೆ ಸಿದ್ದರಾಮಯ್ಯ ಅವರ ಬಳಿಯಲ್ಲೂ ಮಾತನಾಡಿದ್ದೇನೆ. ಸ್ವಲ್ಪ ದಿನ ಕಳೆಯಲಿ ಎಲ್ಲರೂ ಸೇರಿ ಮಾತನಾಡೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲರೂ ಒಟ್ಟಿಗೆ ಸೇರುತ್ತೇವೆ ಎಂದು ತಿಳಿಸಿದರು.ಪ್ರಭಾವಿಗಳ ಸುಪರ್ದಿಯಲ್ಲಿ ಸ್ಟಿಂಗ್‌ ಬಂಧಿತರು: ಅಶೋಕ್‌:

ಸ್ಟಿಂಗ್‌ ಆಪರೇಷನ್‌ ಸಂಬಂಧ ಕೆಲವರನ್ನು ಬಂಧಿಸಿ ಪ್ರಭಾವಿಗಳ ಸುಪರ್ದಿಯಲ್ಲಿರಿಸಿರುವ ಮಾಹಿತಿ ಇದೆ. ಈ ಸ್ಟಿಂಗ್‌ ಆಪರೇಷನ್‌ ಮಾಡಿಸಿದ್ದು ಯಾರೆಂಬುದು ಬೆಳಕಿಗೆ ಬರಬೇಕು. ಹೀಗಾಗಿ ಮೊದಲು ಎಫ್‌ಐಆರ್‌ ದಾಖಲಿಸಿ ತನಿಖೆ ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿ ಹೆಚ್ಚು ಕಾಲ ಮುಖ್ಯಮಂತ್ರಿ ಆಗಿದ್ದರು. ಅಂಥವರಿಗೆ ಕೋರ್ಟ್‌ ಮೆಟ್ಟಿಲೇರುವ ನೋವನ್ನು ಕಾಂಗ್ರೆಸ್ಸಿಗರು ನೀಡಿದ್ದಾರೆ. ಸಿದ್ದರಾಮಯ್ಯಗೆ ಈಗ ಕಾಂಗ್ರೆಸ್‌ನ ಸಂಸ್ಕೃತಿ ಗೊತ್ತಾಗಿದೆ. ಅವರ ಬೆನ್ನಿಗೆ ಕಾಂಗ್ರೆಸ್‌ ನಾಯಕರು ಚೂರಿ ಹಾಕಿದ್ದಾರೆ. ನ್ಯಾಯಾಲಯಕ್ಕೆ ಹೋಗಿ ತಡೆ ತರುವ ದಯನೀಯ ಸ್ಥಿತಿ ಅವರಿಗೆ ಬಂದಿದೆ. ಅವರನ್ನು ಬಳಸಿಕೊಂಡು ಬಳಿಕ ಎಸೆದಿದ್ದಾರೆ ಎಂದು ಕಿಡಿಕಾಡಿದರು.ಧೈರ್ಯ ಇದ್ದರೆ ತನಿಖೆ ಮಾಡಿ:

ಸೈದ್ಧಾಂತಿಕವಾಗಿ ಸಿದ್ದರಾಮಯ್ಯ ಅವರನ್ನು ನಾನು ವಿರೋಧಿಸುತ್ತೇನೆ. ಆದರೆ ಹಿರಿಯರಾದ ಅವರಿಗೆ ಹೀಗೆ ಮಾಡಬಾರದಿತ್ತು. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಅವರು ಸಚಿವರಾಗಿದ್ದರು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದರು. ಫಾರ್ಮ್‌ 7 ಕೊಟ್ಟವರನ್ನು ಕೂಡಲೇ ಬಂಧಿಸಿದ್ದಾರೆ. ಆದರೆ ಸ್ಟಿಂಗ್‌ ಆಪರೇಶನ್‌ ಮಾಡಿದವರು ಯಾರೆಂದು ಕೂಡ ಹೇಳಿಲ್ಲ. ಧೈರ್ಯವಿದ್ದರೆ ಈ ಕುರಿತು ತನಿಖೆ ಮಾಡಲಿ, ಸಿಬಿಐಗೆ ವಹಿಸಲಿ. ಮೊದಲು ಎಫ್‌ಐಆರ್‌ ದಾಖಲಿಸಲಿ ಎಂದು ಅಶೋಕ್‌ ಆಗ್ರಹಿಸಿದರು.ಮಾಜಿ ಸಚಿವ ಕೆ.ಎನ್‌.ರಾಜಣ್ಣ ಈ ಬಗ್ಗೆ ಮಾತಾಡಿರುವುದರಿಂದ ಅವರ ಮೂಲಕವೇ ದೂರು ಸ್ವೀಕಾರ ಮಾಡಲಿ. ಸ್ವಯಂಪ್ರೇರಿತವಾಗಿಯೂ ದೂರು ದಾಖಲಿಸಬಹುದು. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕೋರ್ಟ್‌ಗೆ ಹೋಗಿರುವುದರಿಂದ ದೂರು ದಾಖಲಿಸಬಹುದು. ದೂರು ದಾಖಲಿಸದೆ ಸುಮ್ಮನೆ ಮಾತಾಡುವುದರಿಂದ ಯಾವುದೇ ಪ್ರಯೋಜವಿಲ್ಲ ಎಂದು ಹೇಳಿದರು.

ಕತ್ತಿನ ಪಟ್ಟಿ ಹಿಡಿದು ತಳ್ಳಿ ಸಿಎಂ ಡಿಕೆಶಿಗೆ ಅವಮಾನ:

ದೆಹಲಿ ಪ್ರತಿಭಟನೆ ವೇಳೆ ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕತ್ತಿನ ಪಟ್ಟಿ ಹಿಡಿದು ತಳ್ಳಿದ್ದಾರೆ. ಇತಿಹಾಸದಲ್ಲಿ ಯಾವುದೇ ಮುಖ್ಯಮಂತ್ರಿಗೆ ಅದೇ ಪಕ್ಷದ ನಾಯಕರು ಈ ರೀತಿ ಅವಮಾನ ಮಾಡಿಲ್ಲ. ಇದು ಏಳು ಕೋಟಿ ಕನ್ನಡಿಗರಿಗೆ ಮಾಡಿದ ಅಪಮಾನ. ರಾಹುಲ್‌ ಗಾಂಧಿ ಕೂಡಲೇ ಜನರ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರನ್ನು ರಾಜ್ಯಕ್ಕೆ ಬರಲು ಬಿಡಬಾರದು. ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ಗೆ ಹಣ ನೀಡುವ ಬಾಂಡೆಡ್‌ ಲೇಬರ್‌ ರೀತಿ ಆಗಿದ್ದಾರೆ ಎಂದು ಆರ್‌.ಅಶೋಕ್‌ ಕಿಡಿಕಾರಿದರು.

-ಕೋಟ್‌-

ಸೋನಿಯಾ ಗಾಂಧಿ ಮದುವೆಯಾಗಿ 15 ವರ್ಷಗಳಾದ ನಂತರ ಭಾರತೀಯರಾದರು. ಅಂತಹ ವಂಶದಿಂದ ಬಂದ ರಾಹುಲ್‌ ಗಾಂಧಿ ವೋಟ್‌ ಚೋರಿ ಬಗ್ಗೆ ಮಾತಾಡುತ್ತಾರೆ. ಇದರ ಬದಲು ಅವರು ಕರ್ನಾಟಕದಲ್ಲಿ ಖಜಾನೆ ಚೋರಿ ಬಗ್ಗೆ ಮಾತಾಡಬೇಕು.-ಆರ್‌.ಅಶೋಕ್‌, ವಿರೋಧ ಪಕ್ಷದ ನಾಯಕ.