ಸ್ಟಿಂಗ್ ಆಪರೇಷನ್‌ ಸಂಬಂಧ ರಾಜ್ಯ ಕಾಂಗ್ರೆಸ್‌ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಪ್ರಕರಣದಲ್ಲಿ ಅಪಪ್ರಚಾರ ನಡೆಸುತ್ತಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ಟಿಂಗ್ ಆಪರೇಷನ್‌ ಕೆಟ್ಟ ಚಾಳಿಯಾಗಿದ್ದು, ಇದು ನಿರ್ನಾಮ ಆಗಬೇಕು’ ಎಂದು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು:

ಸ್ಟಿಂಗ್ ಆಪರೇಷನ್‌ ಸಂಬಂಧ ರಾಜ್ಯ ಕಾಂಗ್ರೆಸ್‌ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಪ್ರಕರಣದಲ್ಲಿ ಅಪಪ್ರಚಾರ ನಡೆಸುತ್ತಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ಟಿಂಗ್ ಆಪರೇಷನ್‌ ಕೆಟ್ಟ ಚಾಳಿಯಾಗಿದ್ದು, ಇದು ನಿರ್ನಾಮ ಆಗಬೇಕು’ ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ವಿಷಯದ ಬಗ್ಗೆ ಪದೇ ಪದೇ ಮಾತನಾಡುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಕಿಡಿಕಾರಿರುವ ಸಚಿವರು, ‘ಇದನ್ನು ಜೆಡಿಎಸ್‌ ಅವರು ಬಿಟ್ಟು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನವೇ ಈ ಸ್ಟಿಂಗ್‌ ನಾಟಕ’ ಎಂದು ಕಿಡಿಕಾರಿದ್ದಾರೆ.

ಜೆಡಿಎಸ್‌ ಬಿಟ್ಟು ಬೇರ್‍ಯಾರೂ ಮಾಡಿರಲ್ಲ- ಚಲುವ

ಸಚಿವ ಎನ್‌. ಚಲುವರಾಯಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಈ ಸ್ಟಿಂಗ್‌ ನಾಟಕ. ಜೆಡಿಎಸ್‌ ಅವರನ್ನು ಬಿಟ್ಟು ಇದನ್ನು ಮಾಡಲು ಇನ್ಯಾರಿಗೂ ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರ ಮೇಲೆ ಗೂಬೆ ಕೂರಿಸಲು ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ. ತಮ್ಮದೇ ಪಕ್ಷದ ಹಿರಿಯ ನಾಯಕರಿಗೆ ಸ್ಟಿಂಗ್‌ ಆಪರೇಷನ್‌ ಮಾಡಿಸಲು ಮುಖ್ಯಮಂತ್ರಿ ಅವರಿಗೆ ತಲೆ ಕೆಟ್ಟಿದೆಯೇ? ಈ ಹಿಂದೆ ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಹೊರಹಾಕಿದಾಗ ಅವರನ್ನು ಹೀಯಾಳಿಸಿದ್ದ ಕುಮಾರಸ್ವಾಮಿ, ಈಗ ಅನುಕಂಪ ತೋರುತ್ತಿದ್ದಾರೆ. ಧೈರ್ಯವಿದ್ದರೆ ಕೇಂದ್ರ ಸರ್ಕಾರದಿಂದಲೇ ಈ ಸ್ಟಿಂಗ್‌ ಕುರಿತು ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.

ಪ್ರಜ್ವಲ್‌ ರೇವಣ್ಣನಿಂದ ಅನ್ಯಾಯಕ್ಕೊಳಗಾದ ನೂರಾರು ಹೆಣ್ಣುಮಕ್ಕಳ ಬಗ್ಗೆ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಹಾನುಭೂತಿಯಿಲ್ಲ. ಹಾಸನದ ವಿಚಾರ ಎತ್ತುವುದು ಅಸಭ್ಯವೆಂದು ನಾವೇ ಸುಮ್ಮನಿದ್ದರೆ, ಅವರೇ ಪದೇಪದೇ ಅದನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದರು.ಸ್ಟಿಂಗ್ ಚಾಳಿ ನಿರ್ನಾಮ ಆಗಬೇಕು- ಎಂ.ಬಿ ಪಾಟೀಲ್‌ಸ್ಟಿಂಗ್‌ ಆಪರೇಷನ್‌ ಕೆಟ್ಟ ಚಾಳಿಯಾಗಿದ್ದು, ಯಾರೇ ಮಾಡಿದರೂ ಒಳ್ಳೆಯದಲ್ಲ. ಈ ಸ್ಟಿಂಗ್‌ ಆಪರೇಷನ್‌ ನಿರ್ನಾಮ ಆಗಬೇಕು ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

ದುಡ್ಡು ಮಾಡುವುದಕ್ಕೋ ಅಥವಾ ರಾಜಕೀಯ ಕಾರಣಕ್ಕೂ ನಡೆಯುವ ಚಾರಿತ್ರ್ಯವಧೆ ನಿಲ್ಲಬೇಕು. ಸಿದ್ದರಾಮಯ್ಯ ಅವರು ದೇಶದಲ್ಲಿಯೇ ಅತ್ಯುತ್ತಮ ನಾಯಕ. ಅಂತಹ ನಾಯಕರ ಚಾರಿತ್ರ್ಯವಧೆ ಆಗಬಾರದು ತಿಳಿಸಿದರು.ಶಿಕ್ಷೆ ಕೊಡಿಸಬೇಕು- ಅಶೋಕ್‌ ಪಟ್ಟಣ್‌:

ಶಾಸಕ ಅಶೋಕ್‌ ಪಟ್ಟಣ್, ಸ್ಟಿಂಗ್‌ ಆಪರೇಷನ್‌ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಿ ಪತ್ತೆ ಹಚ್ಚಿ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಚಿವರಿಗೆ ಹೇಳಿದ ಮೇಲೆ ನಮಗೂ ಹೇಳಿದಂತೆ ಅಲ್ಲವೇ? ಅಂದರೆ, ನೀವು ಎಚ್ಚರದಿಂದಿರಿ ಎಂದು ಎಲ್ಲರಿಗೂ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದರು.

ಎಚ್ಡಿಕೆ ತೋರಿಸಿದ ಪೆನ್‌ಡ್ರೈವ್‌ ಏನಾಯ್ತು?:

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತೋರಿಸಿದ್ದ ಪೆನ್‌ ಡ್ರೈವ್‌ ಏನಾಯಿತು? ಸ್ಟಿಂಗ್‌ ಆಪರೇಷನ್‌ ಕುರಿತು ಅವರ ಬಳಿ ಇರುವ ದಾಖಲೆ ಕೊಟ್ಟರೆ ತನಿಖೆಯಾಗಲಿದೆ. ವಿನಾಕಾರಣ ಸಿದ್ದರಾಮಯ್ಯ ಮೇಲೆ ಆರೋಪಿಸುವುದು ನೋವು ತಂದಿದೆ ಎಂದರು.

ಸ್ನಾನದ ಕೊಠಡಿಯಲ್ಲಿ ಎಲ್ಲರೂ ಬೆತ್ತಲೆ:

ವಿಡಿಯೋದಲ್ಲಿ ಸತ್ಯ ಇದೆಯೋ ಅಥವಾ ಇಲ್ಲವೋ ಆದರೆ, ಕರ್ನಾಟಕದ ರಾಜಕೀಯ ಈ ರೀತಿಯ ಕೀಳು ಮಟ್ಟಕ್ಕೆ ಬರಬಾರದಿತ್ತು. 15 ವರ್ಷದ ಹಿಂದೆ ಆಗಿರುವುದನ್ನು ನೆಪ ಇಟ್ಟುಕೊಂಡು ಕೆಲವರ ವರ್ಚಸ್ಸಿಗೆ ಧಕ್ಕೆ ತರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.ಅಲ್ಲದೆ, ‘ಹಮಾಮ್‌ ಮೆ ಸಬ್‌ ನಂಗೆ ಹೈ’ (ಸ್ನಾನದ ಕೊಠಡಿಯಲ್ಲಿ ಎಲ್ಲರೂ ಬೆತ್ತಲೆ) ಎಂಬಂತೆ ಇದರಲ್ಲಿ ಎಲ್ಲರೂ ಅಲ್ಲೇ ಇದ್ದಾರೆ. ಹೀಗಾಗಿ ಇದು ಸಾರ್ವಜನಿಕ ಕ್ಷೇತ್ರದಲ್ಲಿ ಒಳ್ಳೆಯದಲ್ಲ. ರಾಜಕೀಯ ಸೇಡು ತೀರಿಸಿಕೊಳ್ಳಲು ಹಲವು ಮಾರ್ಗಗಳಿವೆ ಎಂದರು.

ಪ್ರಕರಣದ ತನಿಖೆ ನಡೆಯಬೇಕೆ ಎಂಬ ಪ್ರಶ್ನೆಗೆ, ತನಿಖೆ ಆಗಬೇಕು ಎಂದು ನಾನು ಹೇಳಲು ಆಗುವುದಿಲ್ಲ. ಯಾರ ಮೇಲೆ ಆರೋಪ ಮಾಡುತ್ತಿದ್ದಾರೆಯೋ ಅವರು ಸಾಮಾನ್ಯ ಮನುಷ್ಯರಲ್ಲ. ಹೀಗಾಗಿ ತನಿಖೆ ಬೇಕೋ ಅಥವಾ ಬೇಡವೋ ಅವರ ತೀರ್ಮಾನಕ್ಕೆ ಬಿಟ್ಟಿರುವ ವಿಚಾರ. ನಾವು ಮಾತನಾಡಿದರೆ ತಪ್ಪಾಗುತ್ತದೆ ಎಂದು ಹೇಳಿದರು.