ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಸೃಷ್ಟಿಸಿ ಹರಡುವುದರ ಹಿಂದೆ ದೊಡ್ಡ ಪಿತೂರಿಯೇ ಅಡಗಿದೆ. ಈ ಬಗ್ಗೆಯೂ ನಿಖರವಾದ ತನಿಖೆ ನಡೆಯುವ ಅಗತ್ಯವಿದೆ.

ಗದಗ: ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸತ್ಯಾಸತ್ಯತೆ ಹೊರತರಲು ಸೂಕ್ತ ತನಿಖೆ ನಡೆಸಬೇಕು. ಸ್ವತ ಅವರೇ ಈ ವಿಚಾರ ಪ್ರಸ್ತಾಪಿಸಿ ಈಗ ತನಿಖೆ ನಡೆಸದಿದ್ದರೆ ಸಂಶಯ ಅವರ ಮೇಲೆಯೇ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿಗಳು ಕೇವಲ ಹೇಳಿಕೆ ನೀಡಿ ಸುಮ್ಮನಿದ್ದರೆ ಸಾಲದು, ಇದು ಅತ್ಯಂತ ಗಂಭೀರ ವಿಚಾರ. ಸಂಪುಟದ ತಮ್ಮದೇ ಸಹೋದ್ಯೋಗಿಗಳ ಕುರಿತು ಮಾತನಾಡಿದ ಮೇಲೆ ಈಗ ಸುಮ್ಮನಿದ್ದರೆ ಅವರ ಪರಿಸ್ಥಿತಿ ಏನಾಗಬೇಡ? ಆದ್ದರಿಂದ ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು, ಇಲ್ಲವಾದರೆ ಅವರ ಮೇಲೆಯೇ ಅನುಮಾನ ಮೂಡಲು ದಾರಿಯಾಗುತ್ತದೆ ಎಂದರು.

ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಸೃಷ್ಟಿಸಿ ಹರಡುವುದರ ಹಿಂದೆ ದೊಡ್ಡ ಪಿತೂರಿಯೇ ಅಡಗಿದೆ. ಈ ಬಗ್ಗೆಯೂ ನಿಖರವಾದ ತನಿಖೆ ನಡೆಯುವ ಅಗತ್ಯವಿದೆ. ಮಾಧ್ಯಮಗಳು ಹಾಗೂ ಪತ್ರಕರ್ತರು ಆಧಾರ ರಹಿತ ಮತ್ತು ನಕಲಿ ಸುದ್ದಿ ಬಿತ್ತರಿಸುವ ಬದಲು ಸತ್ಯ, ವಾಸ್ತವಾಂಶಗಳಿಂದ ಕೂಡಿದ ವಿಷಯಗಳನ್ನು ವರದಿ ಮಾಡಬೇಕು ಎಂದು ಕಿವಿಮಾತು ಹೇಳಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಮತ್ತು ಅದರ ನಾಯಕರು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀಸಲಾತಿಗೆ ನ್ಯಾಯ ಸಿಗುವ ವಿಶ್ವಾಸ: ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾತಿ ಹೆಚ್ಚಳ ರದ್ದಾಗಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಇತರ ರಾಜ್ಯಗಳಲ್ಲಿನ ಮೀಸಲಾತಿ ಪ್ರಮಾಣ, ಸಂವಿಧಾನ ತಿದ್ದುಪಡಿ ಹಾಗೂ ಕಾನೂನು ತಜ್ಞರ ಸಲಹೆ ಪಡೆದು ಎಲ್ಲರ ವಿಶ್ವಾಸದೊಂದಿಗೆ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಿದರೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ಪ್ರಸ್ತುತ ಶೇ. 69ರಷ್ಟು ಮೀಸಲಾತಿ ಜಾರಿಯಲ್ಲಿದೆ. ಛತ್ತೀಸ್‌ಗಢ ಮತ್ತು ಜಾರ್ಖಂಡ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಾಗಿದೆ. ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮೀಸಲಾತಿ ಮಿತಿ ಶೇ. 50 ಮೀರಬಾರದು ಎಂದು ಆದೇಶಿಸಿತ್ತು. ಆದರೆ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯೂಎಸ್) ಶೇ. 10ರಷ್ಟು ಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿ ತರಲಾಯಿತು. ಇದರಿಂದ ಒಟ್ಟು ಮೀಸಲಾತಿ ಶೇ. 60ಕ್ಕೇರಿತು. ನಾವು ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಆಧರಿಸಿ ಮೀಸಲಾತಿ ಹೆಚ್ಚಿಸಿದ್ದೆವು. ಆದರೆ, ಪ್ರಸ್ತುತ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಸರಿಯಾಗಿ ವಾದ ಮಂಡಿಸುವಲ್ಲಿ ವಿಫಲವಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಿದರೆ ಖಂಡಿತ ನ್ಯಾಯ ಸಿಗಲಿದೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.