ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯದಿಂದ ಪ್ರಾಪರ್ಟಿ ಪರೇಡ್ ನಡೆಸುವ ಮೂಲಕ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.ಕಳೆದ 2025ನೇ ಸಾಲಿನಲ್ಲಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ, ಸರಗಳ್ಳತನ, ಮನೆ ಕಳ್ಳತನ ಹಾಗೂ ವಾಹನ ಕಳ್ಳತನ ಪ್ರಕರಣಗಳಲ್ಲಿ ಪತ್ತೆಯಾದ ವಸ್ತುಗಳನ್ನು ನ್ಯಾಯಾಲಯದ ಆದೇಶದಂತೆ ಹಸ್ತಾಂತರಿಸಲಾಯಿತು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು, ಈ ವೇಳೆ ಒಟ್ಟು ₹6.36 ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ಮಾಲೀಕರಿಗೆ ಒಪ್ಪಿಸಲಾಯಿತು. ಇದರಲ್ಲಿ ಸುಮಾರು ₹2.36 ಕೋಟಿ ಮೌಲ್ಯದ 2 ಕೆಜಿ 332 ಗ್ರಾಂ ಚಿನ್ನಾಭರಣ, ₹13,059 ಮೌಲ್ಯದ 294 ಗ್ರಾಂ ಬೆಳ್ಳಿ ಆಭರಣ, ₹3.99 ಕೋಟಿ ಮೌಲ್ಯದ 85 ವಾಹನಗಳು, ₹1.10 ಲಕ್ಷ ನಗದು ಹಾಗೂ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಯಾದ ₹20 ಲಕ್ಷ ಮೌಲ್ಯದ 140 ಮೊಬೈಲ್ ಹ್ಯಾಂಡ್‌ಸೆಟ್‌ಗಳು ಸೇರಿವೆ.
ಪೊಲೀಸರು ತನಿಖೆ ವೇಳೆ ಆರೋಪಿಗಳನ್ನು ಬಂಧಿಸಿ, ಕಳುವಾದ ವಸ್ತುಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡು, ಕಾನೂನು ಪ್ರಕಾರ ಮಾಲೀಕರಿಗೆ ಹಿಂತಿರುಗಿಸಿದರು