ಗಣೇಶ ಮೂರ್ತಿ ಮೆರವಣಿಗೆ ವೇಳೆ ಅನ್ಯಕೋಮಿನ ಕಿಡಿಗೇಡಿಗಳಿಂದ ಕಲ್ಲು ತೂರಾಟ

| Published : Sep 08 2025, 01:00 AM IST

ಗಣೇಶ ಮೂರ್ತಿ ಮೆರವಣಿಗೆ ವೇಳೆ ಅನ್ಯಕೋಮಿನ ಕಿಡಿಗೇಡಿಗಳಿಂದ ಕಲ್ಲು ತೂರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ ಮುಂಭಾಗ ಡಿಜೆ ಬಳಸಿ ನೃತ್ಯ ಮಾಡುತ್ತಿದ್ದ ಯುವಕರ ಮೇಲೆ ಅನ್ಯಕೋಮಿನ ಕಿಡಿಗೇಡಿಗಳು ಏಕಾಏಕಿ ಕಲ್ಲುತೂರಿದ ಹಿನ್ನೆಲೆಯಲ್ಲಿ ಗಲಭೆಯಿಂದ ಪೊಲೀಸರು, ಗೃಹರಕ್ಷಕ ದಳ ಸಿಬ್ಬಂದಿ ಸೇರಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡು ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿರುವ ಘಟನೆ ಮದ್ದೂರು ಪಟ್ಟಣದ ರಾಮ್ ರಹೀಂ ನಗರದಲ್ಲಿ ಭಾನುವಾರ ಸಂಜೆ ನಡೆದಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ ಮುಂಭಾಗ ಡಿಜೆ ಬಳಸಿ ನೃತ್ಯ ಮಾಡುತ್ತಿದ್ದ ಯುವಕರ ಮೇಲೆ ಅನ್ಯಕೋಮಿನ ಕಿಡಿಗೇಡಿಗಳು ಏಕಾಏಕಿ ಕಲ್ಲುತೂರಿದ ಹಿನ್ನೆಲೆಯಲ್ಲಿ ಗಲಭೆಯಿಂದ ಪೊಲೀಸರು, ಗೃಹರಕ್ಷಕ ದಳ ಸಿಬ್ಬಂದಿ ಸೇರಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡು ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿರುವ ಘಟನೆ ಪಟ್ಟಣದ ರಾಮ್ ರಹೀಂ ನಗರದಲ್ಲಿ ಭಾನುವಾರ ಸಂಜೆ ನಡೆದಿದೆ.

ಪಟ್ಟಣದ ರಾಮ್ ರಹೀಂ ನಗರಕ್ಕೆ ಹೊಂದಿಕೊಂಡಂತೆ ಇರುವ ಚನ್ನೇಗೌಡ ಬಡಾವಣೆಯಲ್ಲಿ ಯುವಕರ ತಂಡ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. 11 ದಿನಗಳ ನಂತರ ಭಾನುವಾರ ಯುವಕರ ತಂಡ ಗಣೇಶಮೂರ್ತಿ ವಿಸರ್ಜನೆ ಮಾಡಲು ಡಿಜೆಯೊಂದಿಗೆ ಸಂಭ್ರಮದಿಂದ ಮೆರವಣಿಗೆ ನಡೆಸುತ್ತಿದ್ದರು.

ಮೆರವಣಿಗೆ ಪಟ್ಟಣದ ರಾಮ್ ರಹೀಂ ನಗರದ ಮುಬಾರಕ್ ವೃತ್ತದ ಮಸೀದಿ ಮುಂಭಾಗದಿಂದ ಹೋಗುವಾಗ ಡಿಜೆ ಬಳಸಿ, ಕೇಸರಿ ಬಾವುಟಗಳೊಂದಿಗೆ ನೃತ್ಯ ಮಾಡುತ್ತಿದ್ದ ಯುವಕರು ಹಾಗೂ ಗಣೇಶಮೂರ್ತಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕರು ಪ್ರತಿಯಾಗಿ ಪಕ್ಕದಲ್ಲೇ ಇದ್ದ ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿ ಮೆರವಣಿಗೆ ವೇಳೆ ಭದ್ರತೆಯಲ್ಲಿದ್ದ ಪೊಲೀಸರು, ಗೃಹರಕ್ಷಕದಳ ಸಿಬ್ಬಂದಿ ಸೇರಿದಂತೆ ಎರಡು ಸಮುದಾಯದ 30ಕ್ಕೂ ಹೆಚ್ಚು ಮಂದಿಗೆ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದಾರೆ. ತಕ್ಷಣ ಘಟನೆ ವಿಷಯ ತಿಳಿದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ಎರಡೂ ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಗಲಭೆ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಪೇಟೆಯ ರಸ್ತೆಗಳಲ್ಲಿನ ಎಲ್ಲಾ ಅಂಗಡಿಗಳನ್ನು ಪೊಲೀಸರು ಗಸ್ತು ಮೂಲಕ ಪರಿಸ್ಥಿತಿ ಮನವರಿಕೆ ಮಾಡಿ ಬಂದ್ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅಂಗಡಿಗಳ ಬಾಗಿಲು ಮುಚ್ಚಲಾಗಿದೆ.

ಘಟನೆ ನಡೆದ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಘ್ನವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ, ಮಂಡ್ಯ ಡಿವೈಎಸ್ಪಿ ಲಕ್ಷ್ಮಿನಾರಾಯಣ ಪ್ರಸಾದ್, ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ ಆಗಮಿಸಿ ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿ ಮಾಹಿತಿ ಪಡೆದರು.

ಮುಂಜಾಗೃತ ಕ್ರಮವಾಗಿ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಂದು ಕೆಎಸ್‌ಆರ್‌ಪಿ, ಡಿಎಆರ್ ತಂಡ ಸೇರಿ ಹೆಚ್ಚಿನ ಪೊಲೀಸರನ್ನು ಬಿಗಿ ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ.

ಎರಡು ಸಮುದಾಯಗಳಿಂದ ಪ್ರತಿಭಟನೆ:

ಘಟನೆ ನಂತರ ಪಟ್ಟಣದ ನಗರಕೆರೆ ರಸ್ತೆಯ ಕೆಮ್ಮಣ್ಣು ನಾಲೆ ಸರ್ಕಲ್‌ನಲ್ಲಿ ಜನರು ಪ್ರತಿಭಟನೆ ಮಾಡಿ ಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಹೆಚ್ಚಾಗಿ ಸ್ಥಳದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿದ್ದಾರೆ.

ಕಲ್ಲುಗಳ ತೂರಾಟ:

ಪ್ರತಿಷ್ಠಾಪನೆ ಸ್ಥಳದಿಂದ ಗಣೇಶ ಮೂರ್ತಿ ಮೆರವಣಿಗೆ ಡಿಜೆಯೊಂದಿಗೆ, ಕೇಸರಿ ಬಾವುಟಗಳ ಹಾರಾಟದೊಂದಿಗೆ ಯಾವುದೇ ಗೊಂದಲಗಳಿಲ್ಲದೆ ಸಂಭ್ರಮದಿಂದ ಸಾಗುತ್ತಿತ್ತು. ಪಟ್ಟಣದ ರಾಮ್ ರಹೀಂ ನಗರದ ಬಳಿ ಮಸೀದಿ ಬಿಟ್ಟು ಹೋಗುವಾಗ ಏಕಾಏಕಿ 60-70 ಮುಸ್ಲಿಂ ಯುವಕರು ಕಲ್ಲುಗಳ ತೂರಾಟ ಮಾಡಿದರು. ಪಕ್ಕದಲ್ಲೆ ಇದ್ದ ಗುಜರಿಯಿಂದ ಐದಾರು ಕಬ್ಬಿಣದ ರಾಡುಗಳನ್ನು ತೂರಿದರು. ಈ ವೇಳೆ ಮಹಿಳೆ ಮುಖದ ಮೇಲೂ ಬಿದ್ದು ಗಾಯಗೊಂಡಿದ್ದಾರೆ. ಹೋಂ ಗಾರ್ಡ್, ಟ್ರಾಫಿಕ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಘಟನಾ ಸ್ಥಳದಲ್ಲಿದ್ದ ಜಯಲಕ್ಷ್ಮಿ ತಿಳಿಸಿದರು.