ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಾಗೂ ಪವಿತ್ರ ರಂಜಾನ್ ಉಪವಾಸದ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದ ಘಟನೆ ಕೇವಲ ಆಕಸ್ಮಿಕವಲ್ಲ. ಅದೊಂದು ಪೂರ್ವನಿಯೋಜಿತ ಒಳಸಂಚು ಎಂದು ಮುಧೋಳದ ಅಹಿಂದ ಸಂಘಟನೆಯ ಒಕ್ಕೂಟ ಗಂಭೀರವಾಗಿ ಆರೋಪ ಮಾಡಿದೆ.
ಕನ್ನಡಪ್ರಭ ವಾರ್ತೆ ಮುಧೋಳ
ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಾಗೂ ಪವಿತ್ರ ರಂಜಾನ್ ಉಪವಾಸದ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದ ಘಟನೆ ಕೇವಲ ಆಕಸ್ಮಿಕವಲ್ಲ. ಅದೊಂದು ಪೂರ್ವನಿಯೋಜಿತ ಒಳಸಂಚು ಎಂದು ಮುಧೋಳದ ಅಹಿಂದ ಸಂಘಟನೆಯ ಒಕ್ಕೂಟ ಗಂಭೀರವಾಗಿ ಆರೋಪ ಮಾಡಿದೆ.ಘಟನೆಗೆ ನಡೆಯಲು ಸಂಚು ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಗುರುವಾರ ನಗರದ ರನ್ನ ಸರ್ಕಲ್‌ನಿಂದ ಹೊರಟ ಪ್ರತಿಭಟನಾ ಮೆರವಣಿಗೆ ತಹಸೀಲ್ದಾರ್ ಕಚೇರಿಗೆ ತೆರಳಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಬಿಲಾಲ್ ಬಾನದರ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಘಟನೆಗೆ ಪೊಲೀಸ್ ಇಲಾಖೆ ವೈಫಲ್ಯ:
ಅಹಿಂದ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಯಲ್ಲಪ್ಪ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ ಮತ್ತು ಸುಸ್ಥಿರ ಕಾನೂನು ಸುವ್ಯಸ್ಥೆ ಕಾಪಾಡುವಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ, ಈ ಹಿಂದೆ ಸಮೀರವಾಡಿ ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದರೆ ಇಂದು ಇಂತಹ ಘಟನೆ ನಡೆಯುತ್ತಿರಲಿಲ್ಲ. ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಇಂತಹ ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜಕೀಯ ಲಾಭದ ಹಿಡನ್ ಅಜೆಂಡಾ
ಜಿಪಂ ಮಾಜಿ ಉಪಾಧ್ಯಕ್ಷ ಹಾಗೂ ರೈತ ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, ಈ ಘರ್ಷಣೆಯ ಹಿಂದೆ ವ್ಯವಸ್ಥಿತವಾದ ಹಿಡನ್ ಅಜೆಂಡಾ ಅಡಗಿದೆ. ರಂಜಾನ್ ಪ್ರಾರ್ಥನೆಯ ಸಮಯ ಹಾಗೂ ಶಿವಾಜಿ ಜಯಂತಿಯ ಮೆರವಣಿಗೆಯ ಹಾದಿಯಲ್ಲಿ ಸೂಕ್ತ ಭದ್ರತೆ ಒದಗಿಸದೇ ಇರುವುದು ವ್ಯವಸ್ಥಿತ ಸಂಚಿನಂತೆ ಭಾಸವಾಗುತ್ತಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಕೋಮು ಕಂದಕ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಒಳಸಂಚಿನ ಬಗ್ಗೆ ತನಿಖೆಯಾಗಲಿ:ಅಹಿಂದ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಗಣೇಶ ಮೇತ್ರಿ ಮಾತನಾಡಿ, ಫೆ.19ರಂದು ರಾತ್ರಿ 10 ಗಂಟೆಯವರೆಗೆ ಮಸೀದಿಯ ಮುಂಭಾಗದಲ್ಲಿ ಡಿಜೆ ಬಳಸಿ ಸಂಭ್ರಮಿಸಲಾಗುತ್ತಿತ್ತು. ಪ್ರಾರ್ಥನೆ ಯಲ್ಲಿದ್ದ ಮುಸ್ಲಿಂ ಬಾಂಧವರ ಮಸೀದಿಯ ಒಳಗಿನಿಂದಲೇ ಓರ್ವ ಯುವಕನೊಬ್ಬ ಕಲ್ಲು ತೂರಿದ ಎಂಬ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು. ಸೌಹಾರ್ದತೆ ಕೆಡಿಸಿದವರಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ಯಲ್ಲಪ್ಪ ಹೆಗಡೆ, ಗಣೇಶ ಮೇತ್ರಿ, ಮಾರುತಿ ಮಾನೆ, ಬಿಲಾಲ ಬಾನದಾರ, ಮುತ್ತಪ್ಪ ಕೋಮಾರ, ಹನುಮಂತ ಶಿಂಧೆ, ಜಾವೇದ್ ಹವಾಲ್ದಾರ, ರಾಜು ಜಮಾದಾರ, ಗೋವಿಂದಪ್ಪ ಮೆಟಗುಡ್ಡ, ಬಸಪ್ಪ ಸಂಗನವರ, ವಿಠ್ಠಲ ಬಡಗೇರ, ಭೀಮಶಿ ಮೇತ್ರಿ, ಜಾವೇದ ಸಾಂಗ್ಲಿಕರ, ಇಸ್ಮಾಯಿಲ್ ವಾಲಿಕರ್, ಶಫಿಕ್ ಬೇಪಾರಿ, ನೂರಲಿ ಶೇಖ, ಐ.ಎಸ್. ಸುರಪುರ, ಮೈಬೂಬ್ ಬೆಪಾರಿ, ಅಬ್ದುಲ್ ಜಮಾದಾರ, ಬಿ.ಎಂ.ಮನಿಯಾರ, ಐ.ಎಂ.ಜಮಾದಾರ, ರಿಯಾಜ್ ಬಾಗವಾನ ಸೇರಿದಂತೆ ನೂರಾರು ಅಹಿಂದ ಹಾಗೂ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.