ಸಾರಾಂಶ
ಮಹಾರಾಷ್ಟ್ರದ ಇಂಚಲಕರಂಜಿಯಲ್ಲಿ ಒಂದು ಕೆಎಸ್‌ಆರ್‌ಟಿಸಿ ಮತ್ತು 6 ಮಹಾರಾಷ್ಟ್ರ ಬಸ್‌ಗಳ ಮೇಲೆ ಕಲ್ಲು, ಬಾಟಲಿಗಳನ್ನು ತೂರಿದ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾರಾಷ್ಟ್ರದ ಇಂಚಲಕರಂಜಿಯಲ್ಲಿ ಒಂದು ಕೆಎಸ್‌ಆರ್‌ಟಿಸಿ ಮತ್ತು 6 ಮಹಾರಾಷ್ಟ್ರ ಬಸ್‌ಗಳ ಮೇಲೆ ಕಲ್ಲು, ಬಾಟಲಿಗಳನ್ನು ತೂರಿದ ಘಟನೆ ಶುಕ್ರವಾರ ನಡೆದಿದೆ. ಈ ಘಟನೆ ಗಡಿ, ಭಾಷಾ ಸಮಸ್ಯೆಗೆ ಸಂಬಂಧಿಸಿದ್ದಲ್ಲ ಎಂದು ಮಹಾರಾಷ್ಟ್ರ ಪೊಲೀಸರು ದೃಢಪಡಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.ಈ ಪ್ರಕರಣ ಸಂಬಂಧ 10 ಜನರನ್ನು ವಶಕ್ಕೆ ಪಡೆಯಲಾಗಿದೆ. ಹೋಳಿ ಹಬ್ಬದ ಸಂಭ್ರಮದಲ್ಲಿ ಯುವಕರು ನೀರು ಮತ್ತು ಸುಟ್ಟ ಮಸಿ, ಬೂದಿ ತುಂಬಿದ ಬಾಟಲಿಗಳನ್ನು ಬಸ್‌ಗಳ ಮೇಲೆ ತೂರಿದ್ದಾರೆ. ಬಸ್‌ಗಳ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಮಾತ್ರವಲ್ಲ, ಮಹಾರಾಷ್ಟ್ರದ 6 ಬಸ್ ಗಳು ಸಹ ಜಖಂಗೊಂಡಿವೆ. ಬೆಳಗ್ಗೆ ಆರು ಗಂಟೆಗೆ ಯಕ್ಸಂಬಾ ಪಟ್ಟಣದಿಂದ ಇಂಚಲಕರಂಜಿಗೆ ಪ್ರಯಾಣ ಬೆಳೆಸಲಾಗಿತ್ತು. ಮಹಾರಾಷ್ಟ್ರದಲ್ಲಿ ಹೋಳಿ ಹಬ್ಬ ಇರುವುದರಿಂದ ಯುವಕರು ಗುಂಪುಗುಂಪಾಗಿ ಸೇರಿದ್ದರು. ಇಚಲಕರಂಜಿ ಪಟ್ಟಣದ ಎರಡನೇ ನಾಕಾ ದಾಟಿದ ಬಳಿಕ ಬಸ್‌ನ ಹಿಂದಿನ ಗಾಜು ಪುಡಿಯಾಗಿದೆ. ಬಣ್ಣದೋಕುಳಿ ಇರುವುದರಿಂದ ಬಾಟಲ್‌ನಲ್ಲಿ ಬೂದಿ ತುಂಬಿ ಯುವಕರು ಎರಚಾಡುತ್ತಿದ್ದರು. ಏಕಾಏಕಿ ರಾಯಬಾಗ ಬಸ್ ಡಿಪೋಗೆ ಸೇರಿದ್ದ ಬಸ್‌ನ ಗಾಜಿಗೆ ಕೆಲ ಯುವಕರು ಬಾಟಲ್ ಎಸೆದರು. ಇದರಿಂದಾಗಿ ಹೀಗಾಗಿ ಬಸ್ ಹಿಂಬದಿ ಗಾಜು ಪುಡಿಪುಡಿಯಾಗಿದೆ ಎಂದು ಬಸ್ ಚಾಲಕ ಬಾಲಕೃಷ್ಣ ಹೇಳಿದ್ದಾರೆ.
ಮೊದಲು ಭಾಷಾ ವಿವಾದ ಹಿನ್ನೆಲೆಯಲ್ಲಿಯೇ ಕಲ್ಲು ತೂರಾಟ ನಡೆದಿದೆ ಎಂದು ಭಾವಿಸಲಾಗಿತ್ತು. ಆದರೆ ಹೋಳಿ ಹಬ್ಬದ ಪ್ರಯುಕ್ತ ಎರಡು ಗುಂಪುಗಳ ಗಲಾಟೆಯಿಂದ ಈ ಘಟನೆ ನಡೆದಿದೆ ಎಂಬ ವಿಚಾರ ಬೆಳಕಿಗೆ ಬಂತು. ಈ ಬಗ್ಗೆ ಇಂಚಲಕರಂಜಿ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.