ಎಪಿಎಂಸಿ ನಿರ್ಮಾಣ ಜಾಗದಲ್ಲಿ ಕಲ್ಲು ಗಣಿಗಾರಿಕೆ

| Published : Feb 23 2024, 01:48 AM IST

ಸಾರಾಂಶ

ಕದರಿಗಾನಕುಪ್ಪ ಬಳಿ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಎಪಿಎಂಸಿ ಯಾರ್ಡ್‌ಗೆ ನಿಗದಿಪಡಿಸಿರುವ ಜಮೀನಿನಲ್ಲಿ ಅಪರೂಪದ ಕಪ್ಪು ಕಲ್ಲುಗಳಿದ್ದು, ಇದನ್ನು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯದೆ ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಕೆಜಿಎಫ್

ಎಪಿಎಂಸಿ ಯಾರ್ಡ್ ನಿರ್ಮಾಣದ ಹೆಸರಿನಲ್ಲಿ ತಾಲೂಕಿನ ಗಡಿ ಭಾಗದಲ್ಲಿ ಕೋಟ್ಯತರ ರೂ ಬೆಲೆಬಾಳುವ ಕಪ್ಪು ಕಲ್ಲುಗಳನ್ನು ಕೆಲವರು ಅಕ್ರಮವಾಗಿ ರಾಜಾರೋಷವಾಗಿ ಹೊರ ರಾಜ್ಯಗಳಿಗೆ ಸಾಗಣೆ ಮಾಡುತ್ತಿದ್ದು, ಇದರ ಬಗ್ಗೆ ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಮಾಜಿ ಶಾಸಕ ವೈ.ಸಂಪಂಗಿ ಹೇಳಿದರು.

ನಗರದ ಕಿಂಗ್ ಜಾರ್ಜ್ ಹಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ತಾಲೂಕಿನ ಕದರಿಗಾನಕುಪ್ಪ ಬಳಿ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಎಪಿಎಂಸಿ ಯಾರ್ಡ್‌ಗೆ ನಿಗದಿಪಡಿಸಿರುವ ೨೫ ಎಕರೆ ಜಮೀನಿನಲ್ಲಿ ಹೇರಳವಾಗಿ ಅಪರೂಪದ ಕಪ್ಪು ಕಲ್ಲು ಕ್ವಾರಿ ಇದ್ದು, ಇದನ್ನು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳದೇ ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡರ ಒಳಒಪ್ಪಂದ

ರಾಜ್ಯದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡುತ್ತಿದೆ. ಆದರೆ ಕೆಜಿಎಫ್ ನಗರದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಮೌನವಾಗಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದ ಅವರು, ಬಿಜೆಪಿ ಪಕ್ಷದಲ್ಲಿದ್ದುಕೊಂಡು ವಿರೋಧ ಪಕ್ಷದವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವವರ ಬಣ್ಣ ಬಯಲುಗೊಳಿಸಲಾಗುವುದು ಮತ್ತು ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಲೋಕಸಭಾ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆ ನಮ್ಮ ಮೇಲೆ ಇದೆ. ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕು ಎಂಬ ಉದ್ದೇಶ ಹೊಂದಿರುವ ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ತಾಲ್ಲೂಕಿನ ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ನಂಬಿಕಸ್ಥರಿಂದ ಬೆನ್ನಿಗೆ ಚೂರಿ

ನಾನು ಕ್ಷೇತ್ರಕ್ಕೆ ಬಂದ ವೇಳೆ ಕೆಲವು ಮುಖಂಡರನ್ನು ನಂಬಿದ್ದೆ, ಆದರೆ ಅವರುಗಳು ನನ್ನ ಬಳಿ ಕೆಲಸ ಮಾಡಿಸಿಕೊಂಡು ನನ್ನ ಬೆನ್ನಿಗೆ ಚೂರಿ ಹಾಕಿದರು. ಇನ್ನು ಮುಂದೆ ಅವರನ್ನು ಪರಿಗಣಿಸುವುದಾಗಲೀ, ಅವರು ಸಭೆ ಸಮಾರಂಭಗಳಿಗೆ ಕರೆದರೆ ಹೋಗುವುದಾಗಲೀ ನಾನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಜಿಎಫ್ ಬಿಜೆಪಿ ಕನ್ವಿನರ್ ಜನಾರ್ದನ್ ನಾಯ್ಡು, ಕೋಲಾರ ಬಿಜೆಪಿ ಉಪಾಧ್ಯಕ್ಷ ವಿಜಯಕುಮಾರ್, ಬಿಜೆಪಿ ನಗರ ಘಟಕದ ಮಾಜಿ ಅಧ್ಯಕ್ಷ ವೆಂಕಟೇಶ್, ರಾಜಗೋಪಾಲ್, ಬಾಲಕೃಷ್ಣ, ರವಿಕುಮಾರ್, ಜಾಮ್ ಇದ್ದರು.