ಆವರಣದ ಗೇಟ್‌ಗೆ ಹಾಕಲಾಗಿದ್ದ ಕೀಲಿ- ಸರಪಳಿ ತೆಗೆದು ವಾಹನಗಳನ್ನು ಒಳಗೆ ಬಿಡಲಾಗುತ್ತಿದೆ. ಜೆಸಿಬಿ ಹಾಗೂ ಇತರೆ ವಾಹನಗಳ ನಿರಂತರ ಸಂಚಾರದಿಂದ ಆವರಣದ ಹಲವೆಡೆ ತಗ್ಗು- ಗುಂಡಿಗಳು ನಿರ್ಮಾಣವಾಗಿವೆ.

ಗಂಗಾಧರ ಡಾಂಗೆ

ಕುಂದಗೋಳ: ರೈತರು ತಾವು ಬೆಳೆದ ಶೇಂಗಾ, ಹೆಸರು, ಕಡಲೆ ಸೇರಿದಂತೆ ವಿವಿಧ ದವಸ-ಧಾನ್ಯಗಳ ವಹಿವಾಟು ನಡೆಸಲು ಅನುಕೂಲವಾಗಬೇಕಿದ್ದ ತಾಲೂಕಿನ ಸಂಶಿ ಗ್ರಾಮದ ಕೃಷಿ ಉತ್ಪನ್ನ ಉಪಮಾರುಕಟ್ಟೆ ಆವರಣ ಇದೀಗ ಕಲ್ಲು, ಕಡಿ, ಜಲ್ಲಿ, ಎಂ-ಸ್ಯಾಂಡ್, ಸಿಮೆಂಟ್ ಸೇರಿದಂತೆ ಕಟ್ಟಡ ಕಾಮಗಾರಿಯ ಸಾಮಗ್ರಿಗಳ ದಾಸ್ತಾನು ಕೇಂದ್ರವಾಗಿ ಮಾರ್ಪಟ್ಟಿದೆ.

ರೈತರ ಕೃಷಿ ಉತ್ಪನ್ನಗಳ ವಹಿವಾಟಿಗಾಗಿ ನಿರ್ಮಿಸಿರುವ ಸರ್ಕಾರಿ ಆವರಣದಲ್ಲಿ ಪರವಾನಗಿ ಅಥವಾ ಅಧಿಕೃತ ಅನುಮತಿ ಇಲ್ಲದೆ ಗುತ್ತಿಗೆದಾರರೊಬ್ಬರು ನಿರ್ಮಾಣ ಸಾಮಗ್ರಿಗಳನ್ನು ಸಂಗ್ರಹಿಸಿ ವಹಿವಾಟು ನಡೆಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶ ಬಹಿರಂಗಪಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಆವರಣದ ಗೇಟ್‌ಗೆ ಹಾಕಲಾಗಿದ್ದ ಕೀಲಿ- ಸರಪಳಿ ತೆಗೆದು ವಾಹನಗಳನ್ನು ಒಳಗೆ ಬಿಡಲಾಗುತ್ತಿದೆ. ಜೆಸಿಬಿ ಹಾಗೂ ಇತರೆ ವಾಹನಗಳ ನಿರಂತರ ಸಂಚಾರದಿಂದ ಆವರಣದ ಹಲವೆಡೆ ತಗ್ಗು- ಗುಂಡಿಗಳು ನಿರ್ಮಾಣವಾಗಿವೆ. ಧೂಳು ಆವರಿಸಿಕೊಂಡಿದ್ದು, ರೈತರು ಕೃಷಿ ಉತ್ಪನ್ನಗಳನ್ನು ತಂದು ವಹಿವಾಟು ನಡೆಸಲು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ರೈತರಿಗೆ ಜಾಗ ಇಲ್ಲ: ಈ ಉಪಮಾರುಕಟ್ಟೆಯಲ್ಲಿ ಶೆಂಗಾ, ಹೆಸರು, ಕಡಲೆ ಸೇರಿದಂತೆ ರೈತರ ದವಸ- ಧಾನ್ಯಗಳ ವಹಿವಾಟಿಗೆ ಅವಕಾಶ ಕಲ್ಪಿಸುವಂತೆ ಕುಂದಗೋಳ ಎಪಿಎಂಸಿ ಅಧಿಕಾರಿಗಳು ಹಾಗೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರೂ ಈ ವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ.

ಈ ಸರ್ಕಾರಿ ಆವರಣದಲ್ಲಿ ಮನೆ ನಿರ್ಮಾಣ ಸಾಮಗ್ರಿಗಳನ್ನು ಸಂಗ್ರಹಿಸಿ ವಾಣಿಜ್ಯ ಚಟುವಟಿಕೆ ನಡೆಸಲು ಯಾರು ಅವಕಾಶ ನೀಡಿದ್ದಾರೆ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ರಾಜಕೀಯ ಪ್ರಭಾವ?: ಸರ್ಕಾರಿ ಜಾಗದ ಬಳಕೆಗೆ ಕೆಲ ರಾಜಕೀಯ ವ್ಯಕ್ತಿಗಳು ಹಾಗೂ ಜನಪ್ರತಿನಿಧಿಗಳ ಹೆಸರುಗಳನ್ನು ಬಳಸಿಕೊಂಡು ಕುಮ್ಮಕ್ಕು ನೀಡಲಾಗುತ್ತಿದೆ. ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೃಢೀಕರಣವಾಗಿಲ್ಲ. ಹೀಗಾಗಿ ಎಪಿಎಂಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಜಾಗವನ್ನು ಯಾರ ಅನುಮತಿಯ ಮೇರೆಗೆ ಬಳಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅನುಮತಿ ಇಲ್ಲದೆ ಆವರಣ ಬಳಸಿಕೊಂಡಿರುವುದು ಪರಿಶೀಲನೆಯಲ್ಲಿ ದೃಢಪಟ್ಟರೆ, ಸಂಬಂಧಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು ನಿರ್ಮಾಣ ಸಾಮಗ್ರಿಗಳನ್ನು ತೆರವುಗೊಳಿಸಬೇಕು. ಆವರಣವನ್ನು ರೈತರ ಕೃಷಿ ಉತ್ಪನ್ನಗಳ ವಹಿವಾಟಿಗೆ ಸಜ್ಜುಗೊಳಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಕ್ರಮ ಕೈಗೊಳ್ಳದಿದ್ದರೆ ಹೋರಾಟ: ಸಂಶಿ ಕೃಷಿ ಉತ್ಪನ್ನ ಉಪಮಾರುಕಟ್ಟೆಯಲ್ಲಿ ರೈತರಿಗೆ ಶೇಂಗಾ, ಹೆಸರು, ಕಡಲೆ ಸೇರಿದಂತೆ ದವಸ- ಧಾನ್ಯಗಳ ವಹಿವಾಟಿಗೆ ಅವಕಾಶ ನೀಡುವಂತೆ ಎಪಿಎಂಸಿ ಅಧಿಕಾರಿಗಳು ಹಾಗೂ ತಹಸೀಲ್ದಾರ್‌ಗೆ ಮನವಿ ಮಾಡಿದ್ದರೂ ಸ್ಪಂದನೆ ಇಲ್ಲ. ಆದರೆ, ಇದೇ ಜಾಗದಲ್ಲಿ ಕಲ್ಲು, ಕಡಿ, ಉಸುಕು, ಸಿಮೆಂಟ್ ಸೇರಿದಂತೆ ವಾಣಿಜ್ಯ ಉದ್ದೇಶದ ಸಾಮಗ್ರಿಗಳನ್ನು ಸಂಗ್ರಹಿಸಲು ಯಾರು ಅವಕಾಶ ನೀಡಿದ್ದಾರೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ ಎಂದು ರೈತ ಮುಖಂಡ ಗುರುಪಾದಪ್ಪ ಬಂಕದ ಎಚ್ಚರಿಸಿದರು.

ಗಮನಕ್ಕೆ ಬಂದಿಲ್ಲ: ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತೇನೆ. ನಂತರ ಕ್ರಮ ಕೈಗೊಳ್ಳುತ್ತೇನೆ ಎಂದು ಎಪಿಎಂಸಿ ಪ್ರಭಾರಿ ಕಾರ್ಯದರ್ಶಿ ಅನಿಲ ಕುಂಬಾರ ತಿಳಿಸಿದರು.